Supreme Court, RN Ravi
Supreme Court, RN Ravi

ಮಸೂದೆಗಳನ್ನು ತಡೆ ಹಿಡಿದು ಕೂರಲು ರಾಜ್ಯಪಾಲರಿಗೆ ವಿಟೋ ಅಧಿಕಾರವಿಲ್ಲ: ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಕಪಾಳಮೋಕ್ಷ

ಗಮನಾರ್ಹ ಸಂಗತಿ ಎಂದರೆ ವಿಧಾನಸಭೆ ಅಂಗೀಕರಿಸಿದ ಮಸೂದೆಗಳ ಬಗ್ಗೆ ರಾಜ್ಯಪಾಲರು ನಿರ್ಧರಿಸಲು ಕಾಲಮಿತಿಯನ್ನೂ ನ್ಯಾಯಾಲಯ ನಿಗದಿಪಡಿಸಿತು.
Published on

ರಾಜ್ಯ ಶಾಸಕಾಂಗ ಕಳುಹಿಸುವ ಮಸೂದೆಗಳನ್ನು ಅಂಗೀಕರಿಸದೇ ಇರುವುದಕ್ಕೆ ರಾಜ್ಯಪಾಲರಿಗೆ ಯಾವುದೇ ರೀತಿಯ ವಿಟೋ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ.

ತಮಿಳುನಾಡು ಶಾಸಕಾಂಗವು ಮಂಡಿಸಿದ 10 ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲ ಆರ್ ಎನ್ ರವಿ ಅವರ ನಿರ್ಧಾರಗಳು ಕಾನೂನುಬಾಹಿರ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ಪೀಠ ಘೋಷಿಸಿತು.

ಶಾಸಕಾಂಗವು ಹತ್ತು ಮಸೂದೆಗಳನ್ನು ಮರುಪರಿಶೀಲಿಸಿ ರಾಜ್ಯಪಾಲರಿಗೆ ಮರಳಿ ಕಳುಹಿಸಿದ ದಿನವೇ ಅವುಗಳಿಗೆ ಅನುಮೋದನೆ ದೊರೆತಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಹಿಂದೆಂದೂ ಕಾಣದ ರೀತಿಯಲ್ಲಿ ನ್ಯಾಯಾಲಯವು ಆದೇಶಿಸಿತು.

Also Read
ತನ್ನ ಆದೇಶ ಧಿಕ್ಕರಿಸಿದ ತಮಿಳುನಾಡು ರಾಜ್ಯಪಾಲ ಆರ್‌ ಎನ್‌ ರವಿ ವಿರುದ್ಧ ಸುಪ್ರೀಂ ಕೋರ್ಟ್‌ ಕೆಂಡಾಮಂಡಲ

ರಾಜ್ಯ ವಿಧಾನಸಭೆಯು ಮಸೂದೆಗಳನ್ನು ಮರುಪರಿಶೀಲಿಸಿದ ನಂತರ ರಾಜ್ಯಪಾಲರು ಮಂಡಿಸಿದಾಗ ಅದಕ್ಕೆ ಒಪ್ಪಿಗೆ ನೀಡಬೇಕು ಎಂದು ಅದು ತೀರ್ಪು ನೀಡಿತು. ಮಸೂದೆ ವಿಭಿನ್ನವಾಗಿದ್ದಾಗ ಮಾತ್ರ ಅವರು ಒಪ್ಪಿಗೆ ನಿರಾಕರಿಸಬಹುದು ಎಂದು ಅದು ಸ್ಪಷ್ಟಪಡಿಸಿತು.

“ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಹತ್ತು ಮಸೂದೆಗಳನ್ನು ಕಳುಹಿಸಿದ ರಾಜ್ಯಪಾಲರ ಕ್ರಮ ಕಾನೂನುಬಾಹಿರ ಮತ್ತು ನಿರಂಕುಶತೆಯಿಂದ ಕೂಡಿರುವಂಥದ್ದು. ಆದ್ದರಿಂದ ಈ ಕ್ರಮ ರದ್ದುಗೊಳಿಸಲಾಗಿದೆ. 10 ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರು ತೆಗೆದುಕೊಂಡ ಎಲ್ಲಾ ಕ್ರಮಗಳನ್ನು ರದ್ದುಗೊಳಿಸಲಾಗಿದೆ" ಎಂದು ಪೀಠ ಹೇಳಿತು.

ರಾಷ್ಟ್ರಪತಿಗಳ ಮುಂದೆ 10 ಮಸೂದೆಗಳನ್ನು ಕಾಯ್ದಿರಿಸಿರುವ ರಾಜ್ಯಪಾಲರ ಕ್ರಮ ಕಾನೂನುಬಾಹಿರ ಮತ್ತು ಅನಿಯಂತ್ರಿತವಾಗಿದೆ. ಹಾಗಾಗಿ, ಈ ಕ್ರಮವನ್ನು ರದ್ದುಗೊಳಿಸಲಾಗಿದೆ. 10 ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರು ತೆಗೆದುಕೊಂಡ ಎಲ್ಲಾ ಕ್ರಮಗಳನ್ನು ರದ್ದುಗೊಳಿಸಲಾಗಿದೆ. ರಾಜ್ಯಪಾಲರೆದುರು 10 ಮಸೂದೆಗಳನ್ನು ಮರಳಿ ಇರಿಸಿದ ದಿನವೇ ಅದಕ್ಕೆ ಅನುಮೋದನೆ ದೊರೆತಿದೆ ಎಂದು ಪರಿಗಣಿಸಲಾಗುತ್ತದೆ " ಎಂದು ನ್ಯಾಯಾಲಯ ನುಡಿಯಿತು.

ವಿಧಾನಸಭೆ ಅಂಗೀಕರಿಸಿದ ವಿವಿಧ ಮಸೂದೆಗಳಿಗೆ ರಾಜ್ಯಪಾಲ ರವಿ ಅವರು ಒಪ್ಪಿಗೆ ನೀಡಲು ನಿರಾಕರಿಸಿದ್ದರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಗಮನಾರ್ಹ ಸಂಗತಿ ಎಂದರೆ ವಿಧಾನಸಭೆ ಅಂಗೀಕರಿಸಿದ ಮಸೂದೆಗಳ ಬಗ್ಗೆ ರಾಜ್ಯಪಾಲರು ನಿರ್ಧರಿಸಲು ಕಾಲಮಿತಿಯನ್ನೂ ನ್ಯಾಯಾಲಯ ನಿಗದಿಪಡಿಸಿತು. ಕಾಲಮಿತಿ ಪಾಲಿಸದಿದ್ದರೆ ರಾಜ್ಯಪಾಲರ ನಿಷ್ಕ್ರಿಯತೆ ನ್ಯಾಯಾಲಯಗಳ ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದು ಅದು ಎಚ್ಚರಿಕೆ ನೀಡಿತು.

ಸಂವಿಧಾನವೊಂದು ಎಷ್ಟೇ ಉತ್ತಮವಾಗಿದ್ದರೂ ಅದನ್ನು ಜಾರಿಗೆ ತರುವವರು ಕೆಟ್ಟವರಾಗಿದ್ದರೆ ಅದು ಕೂಡ ಕೆಟ್ಟದಾಗಿರುತ್ತದೆ. ಅದೇ ಸಂವಿಧಾನ ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಜಾರಿಗೊಳಿಸುವವರು ಉತ್ತಮರಾಗಿದ್ದರೆ ಅದು ಸಹ ಉತ್ತಮವಾಗಿರುತ್ತದೆ.
ಸುಪ್ರೀಂ ಕೋರ್ಟ್‌

ಒಪ್ಪಿಗೆ ತಡೆಹಿಡಿದು ಸಚಿವ ಸಂಪುಟದ ನೆರವು ಮತ್ತು ಸಲಹೆಯೊಂದಿಗೆ ರಾಷ್ಟ್ರಪತಿಗಳಿಗೆ ಕಳಿಸಿದಾಗ ಒಂದು ತಿಂಗಳೊಳಗೆ ನಿರ್ಧರಿಸಬೇಕು. ಸಚಿವ ಸಂಪುಟದ ನೆರವು ಮತ್ತು ಸಲಹೆ ಇಲ್ಲದೆ ಒಪ್ಪಿಗೆ ನೀಡದಿದ್ದಾಗ ಮಸೂದೆಯನ್ನು 3 ತಿಂಗಳೊಳಗೆ ವಾಪಸ್‌ ಕಳಿಸಬೇಕು. ವಿಧಾನಸಭೆ ಮರುಪರಿಶೀಲಿಸಿ ಮಸೂದೆ ಮುಂದಿರಿಸಿದಾಗ ಒಂದು ತಿಂಗಳೊಳಗೆ ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡಬೇಕು ಎಂದು ಅದು ಸ್ಪಷ್ಟಪಡಿಸಿದೆ.

ತಮಿಳುನಾಡು ರಾಜ್ಯವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹಟಗಿ, ರಾಕೇಶ್ ದ್ವಿವೇದಿ ಮತ್ತು ಪಿ ವಿಲ್ಸನ್ ವಾದ ಮಂಡಿಸಿದ್ದರು. ಭಾರತದ ಅಟಾರ್ನಿ ಜನರಲ್  ಆರ್ ವೆಂಕಟರಮಣಿ ಅವರು ತಮಿಳುನಾಡು ರಾಜ್ಯಪಾಲರನ್ನು ಪ್ರತಿನಿಧಿಸಿದ್ದರು.

ದೇಶದ ವಿವಿಧ ರಾಜ್ಯಗಳ ರಾಜ್ಯಪಾಲರು ಚುನಾಯಿತ ಸರ್ಕಾರಗಳನ್ನು ಮೂಲೆಗೆ ಸರಿಸುವ ಪ್ರವೃತ್ತಿಯನ್ನು ನ್ಯಾಯಾಲಯ ಟೀಕಿಸಿತು. ರಾಜಕೀಯ ಕಾರಣಗಳಿಗಾಗಿ ವಿಧಾನಸಭೆಗಳನ್ನು ನಿರ್ಬಂಧಿಸಿ ಜನರ ಇಚ್ಛೆಗೆ ತಣ್ಣೀರೆರಚಬಾರದು ಎಂದು ಪೀಠ ಇದೇ ವೇಳೆ ಕಿಡಿಕಾರಿತು.

ರಾಜ್ಯಪಾಲರು ಸಂಸದೀಯ ಪ್ರಜಾಪ್ರಭುತ್ವದ ಸ್ಥಾಪಿತ ರೂಢಿಗಳನ್ನು ಗೌರವಿಸಬೇಕು. ಶಾಸಕಾಂಗದ ಮೂಲಕ ವ್ಯಕ್ತವಾಗುವ ಜನರ ಇಚ್ಛೆಯನ್ನು ಗೌರವಿಸಬೇಕು ಮತ್ತು ಜನರಿಗೆ ಜವಾಬ್ದಾರರಾಗಿರುವ ಚುನಾಯಿತ ಸರ್ಕಾರಕ್ಕೆ ಗೌರವ ನೀಡಬೇಕು ಎಂದು ಕಿವಿಮಾತು ಹೇಳಿತು.

Also Read
ಕೇರಳ, ತಮಿಳುನಾಡು ರಾಜ್ಯಪಾಲರ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಮಾಜಿ ಎಜಿಗಳಾದ ವೇಣುಗೋಪಾಲ್, ರೋಹಟ್ಗಿ

ರಾಜ್ಯಪಾಲರು ವಿಧಾನಸಭೆಯ ಮಿತ್ರ, ತತ್ವಜ್ಞಾನಿ ಮತ್ತು ಮಾರ್ಗದರ್ಶಕನ ಪಾತ್ರವನ್ನು ನಿರ್ಲಿಪ್ತತೆಯಿಂದ ನಿರ್ವಹಿಸಬೇಕು ರಾಜಕೀಯ ಲಾಭಕ್ಕಾಗಿ ಮಾರ್ದರ್ಶನ ಮಾಡದೆ ತಾವು ಮಾಡಿದ ಪ್ರಮಾಣವಚನದ ಪಾವಿತ್ರ್ಯಕ್ಕೆ ಅನುಗುಣವಾಗಿ ಮಾರ್ಗದರ್ಶನ ನೀಡಬೇಕು ಎಂದಿತು.

ಸಂವಿಧಾನ ರಚನೆಯಾದ 1949ರಲ್ಲಿ ಎಷ್ಟು ಪ್ರಸ್ತುತವಾಗಿತ್ತೋ ಅದು ಇಂದು ಅದಕ್ಕಿಂತಲೂ ಹೆಚ್ಚು ಪ್ರಸ್ತುತವಾಗಿದೆ ಎಂದ ನ್ಯಾಯಾಲಯ ಸಂವಿಧಾನವೊಂದು ಎಷ್ಟೇ ಉತ್ತಮವಾಗಿದ್ದರೂ ಅದನ್ನು ಜಾರಿಗೆ ತರುವವರು ಕೆಟ್ಟವರಾಗಿದ್ದರೆ ಅದು ಕೂಡ ಕೆಟ್ಟದಾಗಿರುತ್ತದೆ. ಅದೇ ಸಂವಿಧಾನ ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಜಾರಿಗೊಳಿಸುವವರು ಉತ್ತಮರಾಗಿದ್ದರೆ ಅದು ಸಹ ಉತ್ತಮವಾಗಿರುತ್ತದೆ ಎಂದು ತಿಳಿ ಹೇಳಿತು.

Kannada Bar & Bench
kannada.barandbench.com