ಸುದ್ದಿಗಳು

ಸಿದ್ಧತೆ ಮಾಡಿಕೊಳ್ಳದೆ ನ್ಯಾಯಾಲಯಕ್ಕೆ ಹಾಜರಾಗುವ ಸರ್ಕಾರದ ವಕೀಲರು ವಿಚಾರಣೆ ವೇಳೆ ಬಾಯಿ ಬಿಡಲ್ಲ: ಸಿಎಂ ಅಸಮಾಧಾನ

“ಪೊಲೀಸ್ ಠಾಣೆಗಳಲ್ಲಿ ಆರೋಪ ಪಟ್ಟಿಯನ್ನು ತನಿಖಾಧಿಕಾರಿಗಳ ಬದಲಾಗಿ ರೈಟರ್‌ಗಳು ಬರೆಯುತ್ತಾರೆ. ಠಾಣೆಗಳಲ್ಲಿ ಕುಳಿತು ಮಹಜರ್ ವರದಿ ಸಿದ್ದಪಡಿಸುತ್ತಾರೆ. ಅಂತಹ ಪ್ರಕರಣಗಳನ್ನು ನ್ಯಾಯಾಲಯಗಳು ಪರಿಗಣಿಸುವುದಿಲ್ಲ” ಎಂದ ಸಿಎಂ ಸಿದ್ದರಾಮಯ್ಯ.

Bar & Bench

“ಕೆಲವು ಸರ್ಕಾರಿ ವಕೀಲರು ಪ್ರಕರಣಗಳ ಸಂಬಂಧ ವಾದಿಸಲು ಸಿದ್ಧತೆ ಮಾಡಿಕೊಳ್ಳದೆ ನ್ಯಾಯಾಲಯಗಳಿಗೆ ಹಾಜರಾಗುತ್ತಾರೆ. ಪ್ರಕರಣದ ವಿಚಾರಣೆ ವೇಳೆ ಬಾಯಿಯನ್ನೇ ಬಿಡುವುದಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರಿಸಿದರು.

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಭಿಯೋಜನಾಧಿಕಾರಿಗಳ ಸಂಘದ ವತಿಯಿಂದ ನಗರದ ಕೆಇಬಿ ಎಂಜಿನಿಯರ್ ಅಸೋಸಿಯೇಷನ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಹಾಗೂ 17ನೇ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

“ಸರ್ಕಾರಿ ವಕೀಲರು ಏನಾದರೂ ಮಾಡಿ ಶಿಕ್ಷೆ ವಿಧಿಸಬೇಕು ಎಂಬ ಹಟಕ್ಕೆ ಮುಂದಾಗದೆ ನ್ಯಾಯವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಆದರೆ, ಸರ್ಕಾರಿ ವಕೀಲರು ನ್ಯಾಯಾಲಯಗಳಲ್ಲಿ ಬಾಯಿಯನ್ನೇ ಬಿಡುವುದಿಲ್ಲ” ಎಂದರು.

“ಪೊಲೀಸ್ ಠಾಣೆಗಳಲ್ಲಿ ಆರೋಪ ಪಟ್ಟಿಯನ್ನು ತನಿಖಾಧಿಕಾರಿಗಳ ಬದಲಾಗಿ ರೈಟರ್‌ಗಳು ಬರೆಯುತ್ತಾರೆ. ಠಾಣೆಗಳಲ್ಲಿ ಕುಳಿತು ಮಹಜರ್ ವರದಿ ಸಿದ್ದಪಡಿಸುತ್ತಾರೆ. ಅಂತಹ ಪ್ರಕರಣಗಳನ್ನು ನ್ಯಾಯಾಲಯಗಳು ಪರಿಗಣಿಸುವುದಿಲ್ಲ. ಹೀಗಾಗಿ, ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ” ಎಂದರು.

“ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಕ್ಕೂ ಮುನ್ನ ತನಿಖಾಧಿಕಾರಿಗಳೊಂದಿಗೆ ಸರ್ಕಾರಿ ವಕೀಲರು ಮಾತನಾಡಬೇಕು. ಬಳಿಕ  ಪಾಟೀ ಸವಾಲು ಪ್ರಕ್ರಿಯೆ ನಡೆಸಬೇಕು. ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯಾಧಾರಗಳು ಆರೋಪಿಗಳ ಪರವಾಗಿದ್ದಾಗ ಅದನ್ನು ನ್ಯಾಯಾಧೀಶರ ಗಮನಕ್ಕೆ ತಂದು ಅವರ ಹಕ್ಕುಗಳನ್ನು ರಕ್ಷಣೆ ಮಾಡುವ ಕಾರ್ಯ ಮಾಡುವುದು ಪ್ರಾಸಿಕ್ಯೂಷನ್‌ ಕರ್ತವ್ಯ” ಎಂದರು.

“ಸಮಾಜದಲ್ಲಿ ಶ್ರೀಮಂತ ಮತ್ತು ಬಡವರ ನಡುವೆ ಅಸಮಾನತೆಯಿದ್ದು, ಶ್ರೀಮಂತರು ಹೆಚ್ಚು ಹಣ ನೀಡಿ ಒಳ್ಳೆಯ ವಕೀಲರನ್ನು ನಿಯೋಜನೆ ಮಾಡುಕೊಳ್ಳುತ್ತಾರೆ. ಆದರೆ, ಬಡವ ಬಲ್ಲಿದ ಎಂಬುದನ್ನು ಪರಿಗಣಿಸದೆ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ಕಾರ್ಯ ಆಗಬೇಕಾಗಿದೆ” ಎಂದರು.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯರೊ(ಎನ್‌ಸಿಆಎರ್‌ಬಿ) ವರದಿ ಪ್ರಕಾರ ಶಿಕ್ಷೆ ಪ್ರಮಾಣದಲ್ಲಿ ಕರ್ನಾಟಕ ರಾಜ್ಯವು ಶೇ.52 ರಷ್ಟು ಮಾತ್ರ ಇದ್ದು, ದೇಶದಲ್ಲಿ 22ನೇ ಸ್ಥಾನದಲ್ಲಿದೆ. ಆದರೆ, ಕೇರಳ ಶೇ. 87, ಮಿಜೋರಾಂ ಶೇ. 98, ದೆಹಲಿ ಶೇ. 89, ಉತ್ತರ ಪ್ರದೇಶ ಶೇ.72, ಗುಜರಾತ್ ಶೇ. 57, ತೆಲಂಗಾಣ 57 ರಷ್ಟಿದ್ದು, ನಮ್ಮ ರಾಜ್ಯದಲ್ಲಿ ಸುಧಾರಣೆ ಆಗಬೇಕಾಗಿದೆ ಎಂದರು.

"ಸದ್ಯ ಆರ್ಥಿಕ, ಸೈಬರ್ ಮತ್ತು ತಾಂತ್ರಿಕ ಅಪರಾಧಗಳು ಮುನ್ನಲೆಗೆ ಬಂದಿದ್ದು ಈ ರೀತಿಯ ಪ್ರಕರಣಗಳಲ್ಲಿ ವಾದ ಮಂಡಿಸುವುದಕ್ಕೆ ಸಂಬಂಧಿಸಿದಂತೆ ತರಬೇತಿ ಅಗತ್ಯ. ಕಾನೂನಿನಲ್ಲಿನ ಸತ್ಯಾಂಶ ಹುಡುಕಲು ನಿರಂತರ ಅಧ್ಯಯನ ಬೇಕಾಗುತ್ತದೆ. ಅಭಿಯೋಜನಾ ಇಲಾಖೆಗೆ ತರಬೇತಿ ಸೇರಿದಂತೆ ಇತರೆ ಕಾರ್ಯಗಳಿಗಾಗಿ ಅಕಾಡೆಮಿಯನ್ನು ಮಾಡಿಕೊಡಲಾಗುವುದು" ಎಂದು ತಿಳಿಸಿದರು.

ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು “ದೇಶ ಬಹಳಷ್ಟು ಮುಂದೆ ಸಾಗುತ್ತಿದೆ. ಆದರೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ. ಕೆಲವು ಪ್ರಕರಣಗಳು 5-10 ವರ್ಷಗಳು ಕಳೆದರೂ  ಮುಕ್ತಾಯ ಕಾಣುವುದಿಲ್ಲ. ಆದ್ದರಿಂದ, ಪ್ರಕರಣಗಳ ಇತ್ಯರ್ಥಕ್ಕೆ ಸಮಯ ನಿದಿಯಾಗಬೇಕಾಗಿದೆ” ಎಂದರು.

“ಗೃಹ ಇಲಾಖೆಯ ಅಧೀನದಲ್ಲಿ 900 ಸರ್ಕಾರಿ ಅಭಿಯೋಜಕರ ಹುದ್ದೆಗಳಿದ್ದು, 500 ಹುದ್ದೆಗಳ ನೇಮಕವಾಗಿದ್ದು, 400 ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುವುದು” ಎಂದು ಭರವಸೆ ನೀಡಿದರು.

ಕಾನೂನು ಮತ್ತು ಸಂಸದೀಯ ಸಚಿವ ಎಚ್ ಕೆ ಪಾಟೀಲ್ ಅವರು “ಪ್ರಾಸಿಕ್ಯೂಷನ್ ಇಲಾಖೆ ವಿಶ್ವಾಸಾರ್ಹತೆ ಮತ್ತು ಗೌರವ ಹೆಚ್ಚಾಗಬೇಕಾದರೆ ರಾಜ್ಯದಲ್ಲಿ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವೂ ಹೆಚ್ಚಾಗುವಂತಾಗಬೇಕು.  ರಾಜ್ಯದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಮತ್ತು ಅಕ್ರಮ ಹಣ ವರ್ಗಾವಣೆ ಕಾಯಿದೆಯ ಆರೋಪಗಳಲ್ಲಿ ಶಿಕ್ಷೆಯಾಗುತ್ತಿರುವ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಪ್ರಾಸಿಕ್ಯೂಷನ್‌ನಲ್ಲಿ ಬದಲಾವಣೆಯಾದರೆ ಒಳ್ಳೆಯ ಸಂದೇಶ ರವಾನೆಯಾಗಲಿದೆ” ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ಎಚ್ ಪಿ ಸಂದೇಶ್, ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಕಾನೂನು ಇಲಾಖೆ ಅಪರ  ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ತುಷಾರ್ ಗಿರಿನಾಥ್, ಪೊಲೀಸ್ ಮಹಾ ನಿರ್ದೇಶಕ ಡಾ. ಎಂ ಎ ಸಲೀಂ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕಿ ಅಂಜಲಿ ದೇವಿ, ರಾಜ್ಯ ಅಭಿಯೋಜನಾ ಅಧಿಕಾರಿಗಳ ಸಂಘದ ಅಧ್ಯಕ್ಷ ಅಶ್ವಥ ನಾರಾಯಣ್, ಕಾರ್ಯದರ್ಶಿ ಸವಿತಾ ಮತ್ತಿತರರು ಉಪಸ್ಥಿತರಿದ್ದರು.