ಭಾರತದಲ್ಲಿ ಮಧ್ಯಸ್ಥಿಕೆ ಎಂಬುದು ಹೆಚ್ಚು ದೀರ್ಘ, ದುಬಾರಿ ಮತ್ತು ಅನಿಶ್ಚಿತವಾಗಿ ಕಾಣುತ್ತಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಇತ್ತೀಚೆಗೆ ಹೇಳಿದ್ದಾರೆ.
ಪಟಿಯಾಲದ ರಾಜೀವ್ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ (ಆರ್‌ಜಿಎನ್‌ಯುಎಲ್) ಅವರು ಮಾತನಾಡಿದರು. ದೆಹಲಿಯ ಲೋಕೋಪಯೋಗಿ ಇಲಾಖೆ ಏಪ್ರಿಲ್ 21, 2025ರಂದು ತನ್ನ ಒಪ್ಪಂದದ ಸಾಮಾನ್ಯ ಷರತ್ತುಗಳಿಂದ ಮಧ್ಯಸ್ಥಿಕೆ ಷರತ್ತನ್ನು ತೆಗೆದುಹಾಕಿ ಹೊರಡಿಸಿದ್ದ ಸುತ್ತೋಲೆಯನ್ನು ಅವರು ಪ್ರಸ್ತಾಪಿಸಿದರು. ಭವಿಷ್ಯದ ಒಪ್ಪಂದಗಳ ಅಡಿಯಲ್ಲಿ ಉದ್ಭವಿಸುವ ಯಾವುದೇ ವ್ಯಾಜ್ಯಗಳನ್ನು ದೆಹಲಿ ನ್ಯಾಯಾಲಯಗಳ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಸುತ್ತೋಲೆ ಆದೇಶಿಸುತ್ತದೆ.
ಈ ಸುತ್ತೋಲೆ "ಭಾರತದಲ್ಲಿ ಮಧ್ಯಸ್ಥಿಕೆ ಕಾರ್ಯವಿಧಾನದ ಬಗ್ಗೆ ತಲೆ ಎತ್ತುತ್ತಿರುವ ಭ್ರಮನಿರಸನದ ಸಂಕೇತವಾಗಿದೆ" ಎಂದು ಅವರು ಆತಂಕ ವ್ಯಕ್ತಪಡಿಸಿದರು.
ದೀರ್ಘಾವಧಿಯ ಗಡುವು, ಮಧ್ಯಸ್ಥಿಕೆಯಲ್ಲಿ ನ್ಯಾಯಾಂಗ ಆಗಾಗ್ಗೆ ನಡೆಸುವ ಹಸ್ತಕ್ಷೇಪ, ವಿಳಂಬವಾಗಿ ತೀರ್ಪು ಜಾರಿ ಕಾರ್ಯವಿಧಾನದ ಅನಿಯಂತ್ರಿತೆಯಿಂದಾಗಿ ಮಧ್ಯಸ್ಥಿಕೆ ಪ್ರಕ್ರಿಯೆಯ ವಿಶ್ವಾಸಾರ್ಹತೆ ಕುಗ್ಗಿದೆ. ಸರ್ಕಾರಿ ಇಲಾಖೆಗಳು ಸಾಂಸ್ಥಿಕ ಮಧ್ಯಸ್ಥಿಕೆಯನ್ನು ಉತ್ತೇಜಿಸುವ ಬದಲು ಸಂಪೂರ್ಣವಾಗಿ ಹೊರಗುಳಿಯುತ್ತಿವೆ. ಅವು ಮಧ್ಯಸ್ಥಿಕೆಗೆ ಸಂಬಂಧಿಸಿದ ತಮ್ಮ ನೀತಿ ಬದ್ಧತೆಯಿಂದ ಹಿಂದೆ ಸರಿಯುತ್ತಿರುವುದನ್ನು ಇದು ಸೂಚಿಸುತ್ತದೆ ಎಂದು ನ್ಯಾ. ಮಿತ್ತಲ್ ಹೇಳಿದರು.
ಪರ್ಯಾಯ ವ್ಯಾಜ್ಯ ಇತ್ಯರ್ಥ ಎಂಬುದಕ್ಕೆ ಸಮೃದ್ಧ ಇತಿಹಾಸವೇ ಇದ್ದರೂ ಪ್ರಸ್ತುತ ಮಧ್ಯಸ್ಥಿಕೆ ಕಾನೂನು ಈ ಶ್ರೀಮಂತ ಇತಿಹಾಸವನ್ನು ಪ್ರತಿನಿಧಿಸುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ ಮಧ್ಯಸ್ಥಿಕೆ ವಿದೇಶಿ ಮಾದರಿಗಳನ್ನು ನಕಲಿಸುವುದರ ಮೇಲೆ ಹೆಚ್ಚು ಗಮನಹರಿಸುತ್ತಿದ್ದು ಭಾರತೀಯ ವ್ಯವಹಾರ ವಿಧಾನಗಳಿಗೆ ಸಾಕಷ್ಟು ಅವಕಾಶ ಕಲ್ಪಿಸುತ್ತಿಲ್ಲ ಎಂದು ಅವರು ಹೇಳಿದರು.