ವಿಚ್ಛೇದನ ಪ್ರಕರಣ ದಾಖಲಿಸುವುದಕ್ಕೂ ಮುನ್ನ ದಾವೆ ಪೂರ್ವ ಮಧ್ಯಸ್ಥಿಕೆ ಕಡ್ಡಾಯವಾಗಲಿ: ನ್ಯಾ. ಬಿ ವಿ ನಾಗರತ್ನ ಸಲಹೆ

“ವಿವಾದ ಕೌಟುಂಬಿಕ ನ್ಯಾಯಾಲಯದ ಮುಂದೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೌಟುಂಬಿಕ ನ್ಯಾಯಾಲಯಗಳಲ್ಲಿ ತರಬೇತುಗೊಂಡಿರುವ ಮಧ್ಯಸ್ಥಿಕೆದಾರರು ಅಥವಾ ನಿವೃತ್ತ ನ್ಯಾಯಾಧೀಶರನ್ನು ಮಧ್ಯಸ್ಥಿಕೆದಾರರನ್ನಾಗಿಸಬೇಕು” ಎಂದು ನ್ಯಾ. ನಾಗರತ್ನ ಅಭಿಮತ.
Justice BV Nagarathna
Justice BV Nagarathna
Published on

“ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣ ದಾಖಲಿಸುವುದಕ್ಕೂ ಮುನ್ನ ದಾವೆ ಪೂರ್ವ ಮಧ್ಯಸ್ಥಿಕೆ ಪ್ರಕ್ರಿಯೆ ಕಡ್ಡಾಯಗೊಳಿಸಬೇಕು” ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ವಿ ನಾಗರತ್ನ ಸಲಹೆ ನೀಡಿದ್ದಾರೆ.

ಬೆಂಗಳೂರಿನ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಸುಪ್ರೀಂ ಕೋರ್ಟ್‌ನ ಕೌಟುಂಬಿಕ ನ್ಯಾಯಾಲಯಗಳ ಸಮಿತಿ ಮತ್ತು ಕರ್ನಾಟಕ ಹೈಕೋರ್ಟ್‌ ಸಹಯೋಗದಲ್ಲಿ “ಕುಟುಂಬ: ಭಾರತೀಯ ಸಮಾಜದ ತಳಹದಿ” ಎಂಬ ವಿಷಯದ ಕುರಿತಾದ ಎರಡು ದಿನಗಳ ದಕ್ಷಿಣ ವಲಯ ಪ್ರಾದೇಶಿಕ ಸಮಾವೇಶ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.

“ವಿವಾದವು ಕೌಟುಂಬಿಕ ನ್ಯಾಯಾಲಯದ ಮುಂದೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೌಟುಂಬಿಕ ನ್ಯಾಯಾಲಯಗಳಲ್ಲಿ ತರಬೇತುಗೊಂಡಿರುವ ಮಧ್ಯಸ್ಥಿಕೆದಾರರು ಅಥವಾ ನಿವೃತ್ತ ನ್ಯಾಯಾಧೀಶರನ್ನು ಮಧ್ಯಸ್ಥಿಕೆದಾರರನ್ನಾಗಿಸಬೇಕು” ಎಂದು ಸುಪ್ರೀಂ ಕೋರ್ಟ್‌ನ ಕೌಟುಂಬಿಕ ನ್ಯಾಯಾಲಯಗಳ ಸಮಿತಿಯ ಅಧ್ಯಕ್ಷರೂ ಆಗಿರುವ ನ್ಯಾ. ಬಿ ವಿ ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ.

“ಉಭಯ ಪಕ್ಷಕಾರರು ಪರಸ್ಪರ ಅರ್ಥ ಮಾಡಿಕೊಂಡು ಇತರರನ್ನು ಗೌರವಿಸಿದರೆ ಮತ್ತು ತಮ್ಮನ್ನು ತಾವು ಅರಿಯುವ ಕೆಲಸ ಮಾಡಿದರೆ ಭಾರತದ ನ್ಯಾಯಾಲಯಗಳ ಮುಂದಿರುವ ಬಹುತೇಕ ಕೌಟುಂಬಿಕ ವಿವಾದಗಳನ್ನು ಪರಿಹರಿಸಬಹುದು” ಎಂದೂ ನ್ಯಾ. ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ.

“ಎಲ್ಲಾ ಸಂದರ್ಭದಲ್ಲೂ ಸಂಗಾತಿಯ ಹಿತಾಸಕ್ತಿಯನ್ನು ಮತ್ತೊಬ್ಬರು ಪರಿಗಣಿಸಬೇಕು. ಸಂಗಾತಿ ಮಾಡುತ್ತಿರುವುದು ತನ್ನ ದೃಷ್ಟಿಯಲ್ಲಿ ಸಮಸ್ಯಾತ್ಮಕ ಎನಿಸಿದರೆ ಆ ಸಂಗಾತಿಯ ಸ್ಥಾನದಲ್ಲಿ ನಿಂತು ಯೋಚಿಸಬೇಕು. ಇದು ವಿವಾದ ಉಲ್ಭಣಿಸುವುದಕ್ಕೆ ಬದಲಾಗಿ ಪರಸ್ಪರ ಅರಿಯುವುದಕ್ಕೆ ದಾರಿ ಮಾಡಿಕೊಡುತ್ತದೆ. ಮದುವೆಯ ಬಂಧನದಲ್ಲಿರುವ ಸಂಗಾತಿಗಳಲ್ಲಿ ಈ ನಡೆ ಬೆಳೆಯುತ್ತಾ ಹೋದಂತೆ ಮಹಿಳೆಯ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಇಂಥ ಸಮಸ್ಯೆಗೆ ಕಾರಣವಲ್ಲ ಎಂಬುದು ದೃಢವಾಗುತ್ತದೆ. ಬದಲಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಸಂದರ್ಭಕ್ಕೆ ಅನುಗುಣವಾಗಿ ನಮ್ಮ ನಡತೆ ಮತ್ತು ಆಚರಣೆಗಳನ್ನು ಬದಲಿಸಿಕೊಳ್ಳದಿರುವುದು ದೇಶದಲ್ಲಿ ಕೌಟುಂಬಿಕ ವಿವಾದಗಳು ಹೆಚ್ಚುವುದಕ್ಕೆ ಕಾರಣವಾಗಿದೆ” ಎಂದರು.

“ಮೇಲಿನ ಎರಡು ವಿಧಾನಗಳನ್ನು ಪಾಲಿಸುವುದರಿಂದ ಮಕ್ಕಳ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡಲಿದೆ. ಇದು ಪೋಷಕರಲ್ಲಿ ಸುರಕ್ಷತಾ ಭಾವ ಉಂಟು ಮಾಡಲಿದ್ದು, ವ್ಯಕ್ತಿಗತವಾಗಿ ಮಗುವಿನಲ್ಲೂ ಭದ್ರತಾ ಭಾವನೆ ಉಂಟು ಮಾಡುತ್ತದೆ. ಒಟ್ಟಾರೆ ಇದು ಕುಟುಂಬದ ಮೂಲಭೂತ ಜೀವಾಳವಾಗಿದೆ. ಮೊಬೈಲ್‌ ಫೋನ್‌ ಕುಟುಂಬದ ಕೇಂದ್ರವಾಗಬಾರದು. ಪಕ್ಷಕಾರರು ನೇರವಾಗಿ ಮಾತನಾಡಬೇಕು” ಎಂದು ವಿವರಿಸಿದರು.  

“ಸಮಾಜದ ನಡತೆಯಲ್ಲಿ ಬದಲಾವಣೆಯಾಗಿರುವುದು ಕೌಟುಂಬಿಕ ನ್ಯಾಯಾಲಯಗಳಲ್ಲಿ ಪ್ರಕರಣ ಹೆಚ್ಚಾಗುತ್ತಿರುವುದರ ಮೇಲೆ ಪರಿಣಾಮ ಬೀರುತ್ತಿದೆ. ಬಾಕಿ ಪ್ರಕರಣಗಳ ಹೆಚ್ಚಾಗುತ್ತಿದ್ದು, 'ಟೈಮ್ಸ್‌ ಆಫ್‌ ಇಂಡಿಯಾ' ಪತ್ರಿಕೆಯ ವರದಿಯೊಂದರ ಪ್ರಕಾರ ಕಳೆದೊಂದು ದಶಕದಲ್ಲಿ ನಡೆದಿರುವ ಶೇ.40ರಷ್ಟು ವಿವಾಹಗಳು ವಿಚ್ಛೇದನ ಅಥವಾ ಪರಿತ್ಯಕ್ತತೆಯಲ್ಲಿ ಮುಕ್ತಾಯವಾಗಿವೆ. ಇದರರ್ಥ ಹೆಚ್ಚುತ್ತಿರುವ ಪ್ರಕರಣಗಳನ್ನು ವಿಚಾರಣೆ ನಡೆಸಲು ಭಾರತದಲ್ಲಿರುವ ಹಾಲಿ ಕೌಟುಂಬಿಕ ನ್ಯಾಯಾಲಯಗಳ ಸಂಖ್ಯೆ ಸಾಲುವುದಿಲ್ಲ ಎಂಬುದಾಗಿದೆ. ಇದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಅಪಾರ ಒತ್ತಡ ಉಂಟು ಮಾಡುತ್ತಿದೆ. ಇದಲ್ಲದೇ, ಸೀಮಿತ ಆರ್ಥಿಕ ಸಂಪನ್ಮೂಲ ಮತ್ತು ಮೂಲಸೌಲಭ್ಯದ ಕೊರತೆಯಿಂದಾಗಿ ನ್ಯಾಯಾಲಯದ ಕೊಠಡಿಗಳು ತುಂಬಿ ತುಳುಕುತ್ತಿದ್ದು, ಬೆಂಬಲದ ಕೊರತೆಯು ನ್ಯಾಯದಾನಕ್ಕೆ ಅಡ್ಡಿಯಾಗಿದೆ” ಎಂದು ವಿಶ್ಲೇಷಿಸಿದರು.

“ಪ್ಯಾಕೇಜ್‌ ದಾವೆ ಹೆಚ್ಚಾಗಿದ್ದು, ಪಕ್ಷಕಾರರು ಒಂದಾಗುವ ಅಥವಾ ಸಂಧಾನವಾಗುವ ಸಾಧ್ಯತೆ ಕ್ಷೀಣಿಸುತ್ತಿದೆ. ಪಕ್ಷಕಾರರೊಬ್ಬರು ನಿರ್ದಿಷ್ಟ ಪರಿಹಾರಕ್ಕಾಗಿ ಸಂಪರ್ಕಿಸಿದರೆ ಹಲವು ಪರಿಹಾರಗಳನ್ನು ಕೇಳಲಾಗುತ್ತದೆ. ಕೆಲವು ಸಂದರ್ಭದಲ್ಲಿ ಅವುಗಳನ್ನು ನಕಲು ಮಾಡಲಾಗುತ್ತದೆ. ಒಬ್ಬರು ವಿಚ್ಛೇದನ ಕೋರಿದರೆ ಮತ್ತೊಬ್ಬರು ವೈವಾಹಿಕ ಸಂಬಂಧ ಮರುಸ್ಥಾಪನೆ ಕೋರಬಹುದು. ಗಾರ್ಡಿಯನ್ಸ್‌ ಮತ್ತು ವಾರ್ಡ್ಸ್‌ ಕಾಯಿದೆ ಅಡಿ ಎರಡು ಪ್ರಕರಣ ದಾಖಲಾಗುತ್ತವೆ. ಆಸ್ತಿ ದಾವೆ ಉದ್ಭವಿಸುತ್ತದೆ; ಅತ್ಯಾಚಾರ, ಕಿರುಕುಳ ದೂರುಗಳು ದಾಖಲಾಗುತ್ತವೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಗೆ ರಕ್ಷಣೆ ಕಾಯಿದೆ ಅಡಿ ಅರ್ಜಿ ಸಲ್ಲಿಕೆಯಾಗುತ್ತದೆ. ಜೀವನ ಭತ್ಯೆಗೆ ಅರ್ಜಿ ಸಲ್ಲಿಸಲಾಗುತ್ತದೆ. ಮಧ್ಯಂತರ ಜೀವನ ಭತ್ಯೆ, ಮಕ್ಕಳ ಭೇಟಿ ಹಕ್ಕುಗಳು ಇತ್ಯಾದಿ ಅರ್ಜಿ ಸಲ್ಲಿಕೆಯಾಗುತ್ತವೆ. ಆನಂತರ ನಿರೀಕ್ಷಣಾ ಜಾಮೀನು ಮತ್ತು ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಕೆಯಾಗುತ್ತವೆ. ಆನಂತರ ರಿಟ್‌, ಆದೇಶ ಮರುಪರಿಶೀಲನೆ, ಮೇಲ್ಮನವಿ, ವರ್ಗಾವಣೆ ಅರ್ಜಿಗಳು ಮತ್ತು ಪ್ರಕ್ರಿಯೆಗೆ ತಡೆಯಾಜ್ಞೆ ಕೋರುವ ಅರ್ಜಿಗಳು ಸಲ್ಲಿಕೆಯಾಗುತ್ತವೆ” ಎಂದು ವಿವರಿಸಿದರು.

“ಪಕ್ಷಕಾರರೊಂದಿಗೆ ಒಂದು ಅರ್ಜಿಯೊಂದಿಗೆ ಆರಂಭವಾಗುವ ವಿವಾದವು ಹಲವು ವಿವಾದಗಳಿಗೆ ನಾಂದಿಯಾಗಲಿದ್ದು, ಮದುವೆ ಮುರಿದು ಬೀಳುತ್ತದೆ. ಈ ಎಲ್ಲಾ ಪ್ರಕರಣಗಳಲ್ಲಿ ಮಕ್ಕಳು ಯಾತನೆ ಅನುಭವಿಸುತ್ತಾರೆ. ಇದರಲ್ಲಿ ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ವಿಭಿನ್ನ ನ್ಯಾಯಾಲಯಗಳು ಭಿನ್ನ ಆದೇಶ ಮಾಡುವ ಸಾಧ್ಯತೆಯೂ ಇರುತ್ತದೆ” ಎಂದು ವಿವರಿಸಿದ್ದಾರೆ.

Also Read
ಕೌಟುಂಬಿಕ ಮೌಲ್ಯ, ವಿವಾದಗಳ ಕುರಿತಾದ ಎರಡು ದಿನಗಳ ಸಮಾವೇಶಕ್ಕೆ ಇಂದು ಚಾಲನೆ

“ಭಾರತದಲ್ಲಿ ಕುಟುಂಬ ವ್ಯವಸ್ಥೆಯು ಅಪಾರ ಬದಲಾವಣೆ ಕಾಣುತ್ತಿದ್ದು, ಇದು ಭಾರತ ಕುಟುಂಬದ ಚೌಕಟ್ಟು ಮತ್ತು ಕಾರ್ಯನಿರ್ವಹಣೆಗೆ ಮಾತ್ರವಲ್ಲ ಇಡೀ ಕುಟುಂಬ ವ್ಯವಸ್ಥೆಯ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಕೌಟುಂಬಿಕ ಸಂಬಂಧ ಬೇಕೆ ಎಂಬ ಪ್ರಶ್ನೆ ನಮ್ಮ ಮುಂದಿದ್ದು, ಔಪಚಾರಿಕ ಶಿಕ್ಷಣ, ಹೆಚ್ಚುತ್ತಿರುವ ನಗರೀಕರಣ, ವ್ಯಕ್ತಿಗತ ಇಚ್ಛೆಗಳ ಹೆಚ್ಚಳ, ಮಹಿಳೆಯ ಆರ್ಥಿಕ ಸಬಲೀಕರಣದ ವಿಚಾರಗಳು ಇದಕ್ಕೆಲ್ಲಾ ಕಾರಣವಾಗಿವೆ” ಎಂದರು.

ಕೌಟುಂಬಿಕ ನ್ಯಾಯಾಲಯವನ್ನು ಬಾಧಿಸುತ್ತಿರುವುದೇನು?

ಪ್ರಕರಣಗಳ ಹೆಚ್ಚಳ ಮತ್ತು ಬಾಕಿ ಪ್ರಕರಣಗಳು, ನೋಟಿಸ್‌ ತಲುಪಿಸುವುದರಲ್ಲಿ ಆಗುವ ವಿಳಂಬ ಮತ್ತು ನ್ಯಾಯಾಲಯದ ಪ್ರಕ್ರಿಯೆಯಲ್ಲಿ ವಿಳಂಬ, ಪಕ್ಷಕಾರರ ನಡುವೆ ಹಲವು ಸುತ್ತಿನ ದಾವೆ, ಸಂಪನ್ಮೂಲದ ಕೊರತೆ, ಸಾಮಾಜಿಕ-ಸಾಂಸ್ಕೃತಿಕ ಚಲನೆ, ಕಾನೂನು ಜ್ಞಾನದ ಕೊರತೆ ಅಥವಾ ಪಕ್ಷಕಾರರಿಗೆ ತಪ್ಪು/ ಪಕ್ಷಪಾತಿ ಸಲಹೆಗಳು, ಜೀವನ ಭತ್ಯೆ ಆದೇಶಗಳು, ಮಕ್ಕಳ ಭೇಟಿ ಹಕ್ಕುಗಳ ಸಂಬಂಧಿತ ಆದೇಶಗಳು, ವಿದೇಶಿ ತೀರ್ಪುಗಳನ್ನು ಹೇರುವುದು ಮತ್ತು ಡಿಕ್ರಿ, ಎಡಿಆರ್‌ ವ್ಯವಸ್ಥೆಯ ಸೀಮಿತ ಬಳಕೆ, ಮಕ್ಕಳ ಕಲ್ಯಾಣ, ತರಬೇತುಗೊಂಡಿರುವ ನ್ಯಾಯಾಧೀಶರು, ಕೌನ್ಸಿಲರ್‌ ಮತ್ತು ಮಧ್ಯಸ್ಥಿಕೆದಾರರ ಕೊರೆತ, ಸುಳ್ಳು ಪ್ರಕರಣ ಮತ್ತು ಕಾನೂನಿನ ದುರ್ಬಳಕೆ ಕೌಟುಂಬಿಕ ನ್ಯಾಯಾಲಯವನ್ನು ಬಾಧಿಸುತ್ತಿವೆ ಎಂದು ನ್ಯಾ. ನಾಗರತ್ನ ಅವರು ಪಟ್ಟಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಉಜ್ಜಲ್‌ ಭುಯಾನ್‌, ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ, ನ್ಯಾ. ಅನು ಶಿವರಾಮನ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Kannada Bar & Bench
kannada.barandbench.com