ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಯಾವುದೇ ವ್ಯಕ್ತಿಗೆ ಆತ ಆ ಸರ್ಕಾರಿ ಆಸ್ಪತ್ರೆ ಇರುವ ಪ್ರದೇಶದ ನಿವಾಸಿಯಲ್ಲ ಎಂಬ ಕಾರಣಕ್ಕೆ ವೈದ್ಯಕೀಯ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಬುಧವಾರ ಹೇಳಿದೆ [ಆರತಿ ದೇವಿ ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶ ಇನ್ನಿತರರ ನಡುವಣ ಪ್ರಕರಣ].
ಹಾಗೆ ಮಾಡಿದರೆ ಅದು ವ್ಯಕ್ತಿಯ ಜೀವಿಸುವ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ನಿರಾಕರಿಸುತ್ತದೆ ಎಂದು ನ್ಯಾ. ರಾಜ್‌ಬೀರ್ ಶೆಹ್ರಾವತ್ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ತಾನು ಪಂಜಾಬ್ ನಿವಾಸಿಯಾಗಿದ್ದು ಚಂಡೀಗಢದಲ್ಲಿ ವಾಸಿಸುತ್ತಿಲ್ಲ ಎಂಬ ಕಾರಣಕ್ಕೆ ವೈದ್ಯಕೀಯ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆ ನಿರಾಕರಿಸಿದ್ದು ಚಿಕಿತ್ಸೆಗೆ ನಿರ್ದೇಶನ ನೀಡುವಂತೆ ಕೋರಿ ಐದು ತಿಂಗಳ ಗರ್ಭಿಣಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಬಂದಾಗ ಸರ್ಕಾರಿ ಆಸ್ಪತ್ರೆ ಚಿಕಿತ್ಸೆ ನೀಡಬೇಕು ಎಂದ ನ್ಯಾಯಾಲಯ ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಪರವಾಗಿ ವಾದ ಮಂಡಿಸುತ್ತಿರುವ ವಕೀಲರು ಕೂಡಲೇ ಅರ್ಜಿದಾರರನ್ನು ಕರೆದೊಯ್ದು ತುರ್ತಾಗಿ ಅಗತ್ಯ ಚಿಕಿತ್ಸೆ ಒದಗಿಸುವಂತೆ ನೋಡಿಕೊಳ್ಳಲು ತಿಳಿಸಿತು.