ಚಿತ್ರದುರ್ಗ, ಕುಶಾಲನಗರ ಮತ್ತು ಬನ್ನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಶುಕ್ರವಾರ ಮಾಹಿತಿ ನೀಡಿದ್ದು, ನ್ಯಾಯಾಲಯವು ಅರ್ಜಿ ಇತ್ಯರ್ಥಪಡಿಸಿತು.
ಚಿತ್ರದುರ್ಗ, ಬನ್ನೂರು ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಯ್ಯದ್ ನಸ್ರುಲ್ಲಾ ಸೇರಿದಂತೆ ಇತರೆ ಚುನಾಯಿತ ಪ್ರತಿನಿಧಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ಏಕಸದಸ್ಯ ಪೀಠ ನಡೆಸಿತು.
ಸರ್ಕಾರದ ಪರ ವಿಶೇಷ ವಕೀಲರು, ಚಿತ್ರದುರ್ಗ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಗಸ್ಟ್ 26ರಂದು ಚುನಾವಣೆ ನಡೆಸಲಾಗುತ್ತದೆ. ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಮೈಸೂರು ಜಿಲ್ಲೆಯ ಬನ್ನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಗೆ ಕ್ರಮವಾಗಿ ಆಗಸ್ಟ್ 19 ಮತ್ತು ಸೆಪ್ಟೆಂಬರ್ 6ರಂದು ಚುನಾವಣೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿ ಅಫಿಡವಿಟ್ ಸಲ್ಲಿಸಿದರು.
ಇದನ್ನು ಆದೇಶದಲ್ಲಿ ದಾಖಲಿಸಿದ ನ್ಯಾಯಾಲಯವು ಅರ್ಜಿದಾರರ ಮನವಿ ಈಡೇರಿರುವುದರಿಂದ ಹೆಚ್ಚಿನ ವಿಚಾರಣೆಗೆ ಅಗತ್ಯ ಇಲ್ಲ ಎಂದು ಅರ್ಜಿ ಇತ್ಯರ್ಥಪಡಿಸಿತು.
ಅರ್ಜಿಯು 2024ರ ಆಗಸ್ಟ್ 7ರಂದು ವಿಚಾರಣೆಗೆ ಬಂದಿದ್ದಾಗ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು ಚಿತ್ರದುರ್ಗ, ಕುಶಾಲನಗರ ಮತ್ತು ಬನ್ನೂರು ಪಟ್ಟಣ ಪಂಚಾಯಿತಿ ಸೇರಿದಂತೆ ರಾಜ್ಯದ 117 ಪಟ್ಟಣ ಪಂಚಾಯಿತಿ, 123 ಪುರಸಭೆ ಮತ್ತು 61 ನಗರಸಭೆಗಳ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಗೆಜೆಟ್ ಅಧಿಸೂಚನೆಯನ್ನು ಪೀಠಕ್ಕೆ ಸಲ್ಲಿಸಿದ್ದರು.
ಅರ್ಜಿದಾರರ ಪರ ಹಾಜರಿದ್ದ ವಕೀಲ ಎ ಮೊಹಮ್ಮದ್ ತಾಹೀರ್ ಅವರು ಸರ್ಕಾರ ಮೀಸಲು ನಿಗದಿಪಡಿಸಿದೆಯಾದರೂ ಯಾವಾಗ ಚುನಾವಣೆ ನಡೆಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಆಕ್ಷೇಪಿಸಿದ್ದರು.
ಅದನ್ನು ಪರಿಗಣಿಸಿದ್ದ ನ್ಯಾಯಾಲಯವು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಯಾವಾಗ ಚುನಾವಣೆ ನಡೆಸಲಾಗುತ್ತದೆ ಎಂಬ ಬಗ್ಗೆ ಆಗಸ್ಟ್ 9ರಂದು ಮಾಹಿತಿ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.