Justice S Ravindra Bhat and Justice Dipankar Datta
Justice S Ravindra Bhat and Justice Dipankar Datta 
ಸುದ್ದಿಗಳು

ಜಾಮೀನು ಮಂಜೂರಾತಿ ಅಸಾಧ್ಯವಾಗುವಂತೆ ಎನ್‌ಡಿಪಿಎಸ್‌ ಕಾಯಿದೆ ಸೆಕ್ಷನ್ 37 ಅನ್ನು ಅಕ್ಷರಶಃ ಅರ್ಥೈಸಬಾರದು: ಸುಪ್ರೀಂ

Bar & Bench

ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್‌) ಕಾಯಿದೆ ಸೆಕ್ಷನ್‌ 37ರ ಅಡಿ ಕಠಿಣ ಷರತ್ತು ವಿಧಿಸಲಾಗಿದ್ದರೂ ಅನಗತ್ಯವಾಗಿ ವಿಚಾರಣೆ ತಡವಾಗುವುದರ ಆಧಾರದ ಮೇಲೆ ಆರೋಪಿಗೆ ಜಾಮೀನು ಮಂಜೂರು ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಹೇಳಿದೆ [ಮೊಹಮ್ಮದ್‌ ಮುಸ್ಲಿಮ್‌ ಅಲಿಯಾಸ್‌ ಹುಸೈನ್‌ ವರ್ಸಸ್‌ ದೆಹಲಿ ಸರ್ಕಾರ].

ಗಾಂಜಾ ಪೂರೈಕೆ ಆರೋಪದ ಮೇಲೆ ಬಂಧಿತನಾಗಿರುವ ಮೇಲ್ಮನವಿದಾರರೊಬ್ಬರಿಗೆ ನ್ಯಾಯಮೂರ್ತಿಗಳಾದ ಎಸ್‌ ರವೀಂದ್ರ ಭಟ್‌ ಮತ್ತು ದೀಪಂಕರ್‌ ದತ್ತ ಅವರ ನೇತೃತ್ವದ ವಿಭಾಗೀಯ ಪೀಠವು ಜಾಮೀನು ಮಂಜೂರು ಮಾಡಿದೆ.

“ಕಠಿಣ ಷರತ್ತುಗಳನ್ನು ವಿಧಿಸಿರುವ ಕಾನೂನು ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವಾದರೂ ಸೂಕ್ತ ಸಂದರ್ಭದಲ್ಲಿ ವಿಚಾರಣೆ ಪೂರ್ಣಗೊಳ್ಳದಿದ್ದರೆ ಅದರಿಂದ ವ್ಯಕ್ತಿಗೆ ಉಂಟು ಮಾಡುವ ಅನ್ಯಾಯ ಅಪರಿಮಿತವಾಗಲಿದೆ” ಎಂದು ಪೀಠ ಹೇಳಿದೆ.

“ವಿಚಾರಣೆಯಲ್ಲಿ ಅನಗತ್ಯ ವಿಳಂಬದ ಆಧಾರದ ಮೇಲೆ ಜಾಮೀನು ಮಂಜೂರು ಮಾಡುವುದನ್ನು ಕಾಯಿದೆಯ ಸೆಕ್ಷನ್ 37ರ ಮೂಲಕ ತಡೆಹಿಡಿಯಲಾಗುವುದಿಲ್ಲ. ಸೆಕ್ಷನ್‌ 436ಎ ಸಹ ಎನ್‌ಡಿಪಿಎಸ್‌ ಕಾಯಿದೆ ಅಡಿ ಅಪರಾಧಗಳಿಗೆ ಅನ್ವಯಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಆರೋಪಿಯು ಅಪರಾಧಿಯಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ತರ್ಕಬದ್ಧವಾದ ಆಧಾರಗಳು ಇದ್ದರೆ ಮತ್ತು ಆತನಿಗೆ ಜಾಮೀನು ಮಂಜೂರು ಮಾಡಿದರೆ ಆತ ಅಂತಹ ಅಪರಾಧಗಳಲ್ಲಿ ಮತ್ತೆ ಭಾಗಿಯಾಗುವುದಿಲ್ಲ ಎಂಬುದು ಖಾತರಿಯಾದರೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಬಹುದು ಎಂದು ಎನ್‌ಡಿಪಿಎಸ್‌ ಕಾಯಿದೆ ಸೆಕ್ಷನ್‌ 37 ಹೇಳುತ್ತದೆ ಎಂದೂ ವಿವರಿಸಲಾಗಿದೆ.

ಬಹುಮುಖ್ಯವಾಗಿ, ಸೆಕ್ಷನ್ 37ರ ಅಡಿಯಲ್ಲಿರುವ ಷರತ್ತುಗಳ ಸರಳ ಮತ್ತು ಅಕ್ಷರಶಃ ವ್ಯಾಖ್ಯಾನದ ಪ್ರಕಾರ ಆರೋಪಿಯು ತಪ್ಪಿತಸ್ಥನಲ್ಲ ಮತ್ತು ಯಾವುದೇ ಅಪರಾಧ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆಯಾಗಬೇಕು. ಇಲ್ಲವಾದಲ್ಲಿ ಜಾಮೀನು ಮಂಜೂರು ಮಾಡುವುದು ಅಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ ಆರೋಪಿಯು ಏಳು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ ಎಂಬುದನ್ನು ಪರಿಗಣಿಸಿ, ವಿಚಾರಣೆಯು ಮಂದಗತಿಯಲ್ಲಿ ಸಾಗುತ್ತಿದೆ ಎಂಬುದನ್ನು ಆಧರಿಸಿ ಮೇಲ್ಮನವಿದಾರರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಗಾಂಜಾ ಪೂರೈಕೆ ಮತ್ತು ನಾಲ್ವರು ಆರೋಪಿಗಳ ಬಳಿ 180 ಕೆ ಜಿ ಗಾಂಜಾ ಪತ್ತೆಯಾದ ಪ್ರಕರಣ ಇದಾಗಿದೆ. ಬಂಧಿತ ಆರೋಪಿಯ ಪೈಕಿ ಒಬ್ಬನ ತಪ್ಪೊಪ್ಪಿಗೆ ಹೇಳಿಕೆ ಆಧರಿಸಿ ಮೇಲ್ಮನವಿದಾರರನ್ನು ಬಂಧಿಸಲಾಗಿತ್ತು. ಬಂಧನದ ಸಂದರ್ಭದಲ್ಲಿ ಮೇಲ್ಮನವಿದಾರನಿಗೆ 23 ವರ್ಷಗಳಾಗಿದ್ದು, ಆತನ ಬಳಿ ಯಾವುದೇ ಮಾದಕ ವಸ್ತು ದೊರೆತಿರಲಿಲ್ಲ. ಆದರೂ, ಆತನ ವಿರುದ್ಧ ಎನ್‌ಡಿಪಿಎಸ್‌ ಕಾಯಿದೆ ಸೆಕ್ಷನ್‌ 20, 25 ಮತ್ತು 29ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಆತನ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್‌ ವಜಾ ಮಾಡಿದ್ದವು.