ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಟಿಕೆಟ್ ಪಡೆದು ಆಯ್ಕೆಯಾಗಿ ನಂತರ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡ ಶಾಸಕರ ಅನರ್ಹತೆ ಕುರಿತಾದ ಅರ್ಜಿ ನಿರ್ಧಾರ ಕೈಗೊಳ್ಳಲು ತೆಲಂಗಾಣ ವಿಧಾನಸಭಾ ಸ್ಪೀಕರ್ ನಿರಂತರ ವಿಳಂಬ ಮಾಡುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ತೆಲಂಗಾಣ ಸ್ಪೀಕರ್ ಅವರ ನಡೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ವಿನೋದ್ ಚಂದ್ರನ್ ಹಾಗೂ ಎನ್ ವಿ ಅಂಜಾರಿಯಾ ಅವರಿದ್ದ ಪೀಠ ಮೌಖಿಕವಾಗಿ ತಿಳಿಸಿತು.
ಬಿಆರ್‌ಎಸ್‌ನಿಂದ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡ 10 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಬಿಆರ್‌ಎಸ್ ಶಾಸಕ ಕೌಶಿಕ್ ರೆಡ್ಡಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅನರ್ಹತೆ ವಿಚಾರವಾಗಿ ನಿರ್ಧಾರ ಕೈಗೊಳ್ಳುವಂತೆ ಜುಲೈ 31ರಂದು ಸ್ಪೀಕರ್ ಅವರಿಗೆ ನ್ಯಾಯಾಲಯ ಮೂರು ತಿಂಗಳ ಗಡುವು ವಿಧಿಸಿತ್ತು.
ಆದರೂ ವಿಳಂಬವಾಗಿರುವುದನ್ನು ಗಮನಿಸಿದ ಸಿಜೆಐ ಗವಾಯಿ ಅವರು ಒಂದು ವಾರದೊಳಗೆ ಸ್ಪೀಕರ್ ನಿರ್ಧಾರ ತೆಗೆದುಕೊಳ್ಳದಿದ್ದರೆ ಸ್ಪೀಕರ್ ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣದಡಿ ಜೈಲಿಗೆ ಕಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
"ತೆಲಂಗಾಣ ಸ್ಪೀಕರ್ ನ್ಯಾಯಾಲಯ ನಿಂದನೆ ಶಿಕ್ಷೆಗೆ ಗುರಿಯಾಗಲಿದ್ದಾರೆ. ಮುಂದಿನ ವಾರದೊಳಗೆ ಮನವಿ ನಿರ್ಧರಿಸಬೇಕು ಅಥವಾ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕು. ಅವರಿಗೆ (ಸ್ಪೀಕರ್) ಸಾಂವಿಧಾನಿಕ ರಕ್ಷಣೆ ಇರದು ಎಂದು ನಾವು ಈಗಾಗಲೇ ಹೇಳಿದ್ದೇವೆ. ತಮ್ಮ ಹೊಸ ವರ್ಷವನ್ನು ಎಲ್ಲಿ ಕಳೆಯಬೇಕೆಂದು ನಿರ್ಧರಿಸುವುದು ಅವರಿಗೆ ಬಿಟ್ಟದ್ದು" ಎಂದು ಸಿಜೆಐ ಕಿಡಿಯಾದರು.
ತೆಲಂಗಾಣ ವಿಧಾನಸಭೆಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎ.ಎಂ. ಸಿಂಘ್ವಿ ಅವರು, ನ್ಯಾಯಾಲಯದ ಸಂದೇಶ ಗಟ್ಟಿಯೂ, ಸ್ಪಷ್ಟವೂ ಆಗಿದೆ ಸ್ಪಷ್ಟತೆಯಿಂದ ಕೂಡಿದೆ ಎಂದರು.
ತೆಲಂಗಾಣದಲ್ಲಿ 2023ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬೆನ್ನಿಗೇ ಬಿಆರ್‌ಎಸ್‌ನ 10 ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಪಕ್ಷಾಂತರಕ್ಕಾಗಿ ಈ ಶಾಸಕರನ್ನು ಅನರ್ಹಗೊಳಿಸಬೇಕೆ ಎಂಬುದರ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸ್ಪೀಕರ್ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ತೆಲಂಗಾಣ ಹೈಕೋರ್ಟ್ ತಲುಪಿತ್ತು.
ಹೈಕೋರ್ಟ್ ಸೂಚನೆಯ ಹೊರತಾಗಿಯೂ ಸ್ಪೀಕರ್ ನಿರ್ಧಾರ ಕೈಗೊಂಡಿರಲಿಲ್ಲ. ನಾಲ್ಕು ವಾರಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಮತ್ತೆ ವಿಚಾರಣೆ ನಡೆಸಲಾಗುವುದು ಜೊತೆಗೆ ಸೂಕ್ತ ಆದೇಶಗಳನ್ನು ಹೊರಡಿಸಲಾಗುವುದು ಎಂದು ಏಕ ಸದಸ್ಯ ಪೀಠ ತಿಳಿಸಿತ್ತು. ಪ್ರಕರಣ ಹೈಕೋರ್ಟ್ ವಿಭಾಗೀಯ ಪೀಠದ ಮೆಟ್ಟಲೇರಿದ ಬಳಿಕ ಏಕಸದಸ್ಯ ಪೀಠ ನೀಡಿದ್ದ ಅಂತಿಮ ಗಡುವನ್ನು ಅದು ರದ್ದುಗೊಳಿಸಿತು. ಬದಲಿಗೆ ಸ್ಪೀಕರ್ ಸೂಕ್ತ ಸಮಯದೊಳಗೆ ಪ್ರಕರಣ ನಿರ್ಧರಿಸುವಂತೆ ಸಲಹೆ ನೀಡಿತ್ತು.
ಬಳಿಕ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಏಕಸದಸ್ಯ ಪೀಠ ನಿರ್ದೇಶನಗಳಲ್ಲಿ ಹಸ್ತಕ್ಷೇಪ ಮಾಡುವ ವಿಚಾರದಲ್ಲಿ ವಿಭಾಗೀಯ ಪೀಠ ಎಡವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅಲ್ಲದೆ ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಲು ಮೂರು ತಿಂಗಳ ಗಡುವನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿತ್ತು ಆದರೆ ಸ್ಪೀಕರ್ ತಮ್ಮ ನಿರ್ಧಾರ ಪ್ರಕಟಿಸಿರಲಿಲ್ಲ.