
ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಟಿಕೆಟ್ ಪಡೆದು ಆಯ್ಕೆಯಾಗಿ ನಂತರ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡ ಮೂವರು ವಿಧಾನಸಭಾ ಸದಸ್ಯರ (ಎಂಎಲ್‌ಎ) ಅನರ್ಹತೆಯ ಬಗ್ಗೆ ಮೂರು ತಿಂಗಳೊಳಗೆ ನಿರ್ಧರಿಸುವಂತೆ ತೆಲಂಗಾಣ ವಿಧಾನಸಭಾ ಸ್ಪೀಕರ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ [ಪಾಡಿ ಕೌಶಿಕ್ ರೆಡ್ಡಿ ಮತ್ತು ತೆಲಂಗಾಣ ಸರ್ಕಾರ ನಡುವಣ ಪ್ರಕರಣ ಹಾಗೂ ಸಂಬಂಧಿತ ದಾವೆಗಳು].
ಅನರ್ಹತೆ ವಿಚಾರವಾಗಿ ಸಕಾಲಕ್ಕೆ ನಿರ್ಧಾರ ಕೈಗೊಳ್ಳುವಂತೆ ಸ್ಪೀಕರ್ ಅವರಿಗೆ ನಿರ್ದೇಶನ ನೀಡುವಂತೆ ಕೋರಿ ಬಿಆರ್‌ಎಸ್ ಹಾಗೂ ಬಿಜೆಪಿ ನಾಯಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಬಿಆರ್ ಗವಾಯಿ ಮತ್ತು ನ್ಯಾ. ವಿನೋದ್ ಚಂದ್ರನ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಅನರ್ಹತೆ ಕುರಿತಂತೆ ಕಾಲಮಿತಿಯೊಳಗೆ ನಿರ್ಧಾರ ಕೈಗೊಳ್ಳಬೇಕು ಇಲ್ಲದೇ ಹೋದಲ್ಲಿ ನ್ಯಾಯಾಲಯದ ಪ್ರತಿಕೂಲ ಆದೇಶ ಎದುರಿಸಬೇಕಾದೀತು ಎಂದು ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ನವೆಂಬರ್ 2024ರಲ್ಲಿ ವಿಭಾಗೀಯ ಪೀಠ ರದ್ದುಗೊಳಿಸಿತ್ತು. ಸುಪ್ರೀಂ ಕೋರ್ಟ್ ಇದೀಗ ವಿಭಾಗೀಯ ಪೀಠದ ಆದೇಶ ರದ್ದುಗೊಳಿಸಿದೆ.
"ಪ್ರಸ್ತುತ ಮೇಲ್ಮನವಿ ಪುರಸ್ಕರಿಸುತ್ತಿದ್ದೇವೆ. ನವೆಂಬರ್ 22, 2024 ರಂದು ವಿಭಾಗೀಯ ಪೀಠ ನೀಡಿದ ಆದೇಶ ರದ್ದುಗೊಳಿಸಲಾಗಿದೆ. 10 ಶಾಸಕರ ವಿರುದ್ಧದ ಅನರ್ಹತಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸಾಧ್ಯವಾದಷ್ಟು ಬೇಗ ಅಂದರೆ 3 ತಿಂಗಳೊಳಗೆ ನಿರ್ಧರಿಸಬೇಕು. ಈ ಪ್ರಕ್ರಿಯೆ ಮುಂದೂಡಲು ಯಾವುದೇ ಶಾಸಕರಿಗೆ ಅವಕಾಶ ನೀಡಬಾರದು. ಹಾಗೆ ಮಾಡಿದರೆ, ಸ್ಪೀಕರ್ ಪ್ರತಿಕೂಲ ತೀರ್ಮಾನ ತೆಗೆದುಕೊಳ್ಳಬೇಕು" ಎಂದು ಸುಪ್ರೀಂ ಕೋರ್ಟ್ ಇಂದು ಆದೇಶಿಸಿದೆ.
ರಾಜಕೀಯ ಪಕ್ಷಾಂತರ ತಡೆಯದಿದ್ದರೆ, ಅದಕ್ಕೆ ಪ್ರಜಾಪ್ರಭುತ್ವಕ್ಕೆ ಅಡ್ಡಿಪಡಿಸುವಂತಹ ಬಲ ಬರುತ್ತದೆ ಎಂದು ಪೀಠ ಹೇಳಿತು. ಪಕ್ಷಾಂತರ ಪ್ರಕ್ರಿಯೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ತೀರ್ಪುಗಾರರಾಗಿ ಕಾರ್ಯನಿರ್ವಹಿಸುವಾಗ ಸ್ಪೀಕರ್ ವಿನಾಯಿತಿ ಹೊಂದಿರುವುದಿಲ್ಲ. ನ್ಯಾಯಾಂಗ ಪರಿಶೀಲನೆಗೆ ಒಳಪಡುವ ನ್ಯಾಯಮಂಡಳಿಯ ರೀತಿಯಲ್ಲಿಯೇ ಅವರು ಕಾರ್ಯನಿರ್ವಹಿಸಬೇಕು ಎಂದು ಅದು ಹೇಳಿದೆ.
ಶಾಸಕರಾದ ವೆಂಕಟರಾವ್ ತೆಲ್ಲಮ್, ಕಡಿಯಂ ಶ್ರೀಹರಿ ಹಾಗೂ ದಾನಂ ನಾಗೇಂದ್ರ ಅವರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ನಿರ್ಧರಿಸುವಲ್ಲಿ ಸ್ಪೀಕರ್ ನಿಷ್ಕ್ರಿಯವಾಗಿರುವುದನ್ನು ಪ್ರಶ್ನಿಸಿ ಬಿಆರ್‌ಎಸ್ ಶಾಸಕರಾದ ಕುನ ಪಾಂಡು ವಿವೇಕಾನಂದ ಮತ್ತು ಪಾಡಿ ಕೌಶಿಕ್ ರೆಡ್ಡಿ, ಬಿಜೆಪಿ ಶಾಸಕಿ ಅಲ್ಲೆಟಿ ಮಹೇಶ್ವರ ರೆಡ್ಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು