Journalist Ravi Nairx.com  
ಸುದ್ದಿಗಳು

ಅದಾನಿ ಟೀಕಿಸಿ ಟ್ವೀಟ್‌: ಪತ್ರಕರ್ತ ರವಿ ನಾಯರ್‌ ದೋಷಿ ಎಂದು ಗುಜರಾತ್‌ ನ್ಯಾಯಾಲಯ ತೀರ್ಪು

ಅದಾನಿ ಸಮೂಹವು ಅಧಿಕಾರಸ್ಥರೊಂದಿಗೆ ಬಂಡವಾಳಶಾಹಿ ಅಪವಿತ್ರ ಮೈತ್ರಿ ಹೊಂದಿದ್ದು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದೆ ಎಂದಿದ್ದ ಟ್ವೀಟ್‌ಗಳು ಮತ್ತು ಲೇಖನಗಳು ಅಪರಾಧಿಕ ಮಾನಹಾನಿಯ ಸ್ವರೂಪದ್ದಾಗಿವೆ ಎಂದು ಹೇಳಿದ ಪೀಠ.

Bar & Bench

ಅದಾನಿ ಸಮೂಹ ದಾಖಲಿಸಿದ್ದ ಅಪರಾಧಿಕ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ  ಪತ್ರಕರ್ತ ರವಿ ನಾಯರ್ ಅವರನ್ನು ದೋಷಿ ಎಂದು ತೀರ್ಪು ನೀಡಿರುವ ಗುಜರಾತ್‌ ನ್ಯಾಯಾಲಯ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ ವಿಧಿಸಿದೆ [ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಮತ್ತು ರವಿ ನಾಯರ್‌ ನಡುವಣ ಪ್ರಕರಣ].

ನಾಯರ್ ಪ್ರಕಟಿಸಿದ ಟ್ವೀಟ್‌ಗಳು ಮತ್ತು ಆನ್‌ಲೈನ್ ಲೇಖನಗಳ ಸರಣಿ, ಅದಾನಿ ಸಮೂಹದ ವಿರುದ್ಧ ಅನೇಕ ಅನೈತಿಕ ಚಟುವಟಿಕೆಗಳ ಆರೋಪಗಳನ್ನು ಮಾಡಿದ್ದು, ನ್ಯಾಯಸಮ್ಮತ ಟೀಕೆಯ ಎಲ್ಲೆಯನ್ನೂ ಮೀರಿದ ಅಪರಾಧಿಕ ಮಾನಹಾನಿಗೆ ಸಮನಾಗಿವೆ ಎಂದು ನ್ಯಾಯಾಲಯ ಹೇಳಿದೆ.

ನಾಯರ್‌ ಅವರು 2020ರ ಅಕ್ಟೋಬರ್‌ನಿಂದ 2021ರ ಜುಲೈವರೆಗೆ ತಮ್ಮ X ಖಾತೆ ಮತ್ತು “adaniwatch.org” ಜಾಲತಾಣದಲ್ಲಿ ಅದಾನಿ ಸಮೂಹದ ವಿರುದ್ಧ ಭ್ರಷ್ಟಾಚಾರ, ಸರ್ಕಾರ ಹಾಗೂ ಬಂಡವಾಳಶಾಹಿಗಳ ಅಪವಿತ್ರ ಮೈತ್ರಿ (ಕ್ರೋನಿಯಿಸಂ), ಪರಿಸರ ಕಾನೂನುಗಳ ತಿರುಚುವಿಕೆ, ಸರ್ಕಾರಿ ಸಂಸ್ಥೆಗಳ ದುರುಪಯೋಗ ಸೇರಿದಂತೆ ಅನೇಕ ಅನೈತಿಕ ಚಟುವಟಿಕೆಗಳ ಆರೋಪ ಮಾಡಿದ್ದರು. 2021ರ ಸೆಪ್ಟೆಂಬರ್‌ನಲ್ಲಿ ಅದಾನಿ ಸಮೂಹ ಈ ಸಂಬಂಧ ಪ್ರಕರಣ ದಾಖಲಿಸಿತ್ತು.

ಆರೋಪಗಳು ಸುಳ್ಳಾಗಿದ್ದು, ಪರಿಶೀಲನೆ ನಡೆಸದೆ ಮಾಡಿರುವಂತಹದ್ದಾಗಿವೆ. ಹೂಡಿಕೆದಾರರು, ನಿಯಂತ್ರಣ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು ಹಾಗೂ ಸಾರ್ವಜನಿಕರಲ್ಲಿ ಕಂಪನಿಯ ಪ್ರತಿಷ್ಠೆಗೆ ಧಕ್ಕೆಯುಂಟು ಮಾಡುವ ಉದ್ದೇಶದಿಂದ ಇವುಗಳನ್ನು ಪ್ರಕಟಿಸಲಾಗಿದೆ ಎಂದು ಕಂಪನಿ ವಾದಿಸಿದೆ. ಅದಾನಿ ಸಮೂಹ ಕಠಿಣ ನಿಯಂತ್ರಣ ಇರುವ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಆರೋಪಗಳು ಅದರ ವಿಶ್ವಾಸಾರ್ಹತೆ ಮತ್ತು ಅದರ ಬಗೆಗಿನ ಸದ್ಭಾವನೆಗೆ ನೇರ ಹಾನಿ ಮಾಡುತ್ತವೆ ಎಂದು ಅದು ತಿಳಿಸಿತ್ತು.

ನಾಯರ್ ಅವರು ತಮ್ಮ ಬರಹಗಳು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪತ್ರಿಕಾಧರ್ಮದಿಂದ ಮಾಡಿದ ಟೀಕೆಗಳಾಗಿದ್ದು, ವಾಕ್‌ ಸ್ವಾತಂತ್ರ್ಯದಡಿ ಇಂತಹ ಬರಹಗಳಗೆ ರಕ್ಷಣೆ ಇದೆ ಎಂದು ವಾದಿಸಿದ್ದರು.

ಅದರೆ ನಾಯರ್‌ ವಾದಗಳನ್ನು ಬದಿಗೆ ಸರಿಸಿದ ನ್ಯಾಯಾಲಯ ಪ್ರಕಟಣೆಗಳು ಕೇವಲ ಅಭಿಪ್ರಾಯವಲ್ಲ; ಪರಿಶೀಲನೆ ಇಲ್ಲದ ನೇರ ಹಾಗೂ ಗಂಭೀರ ಆರೋಪಗಳಾಗಿವೆ. ಅವು ಕಂಪನಿಯ ಪ್ರತಿಷ್ಠೆಗೆ ಹಾನಿ ಮಾಡುವಂತಿವೆ ಎಂದು ಹೇಳಿತು. ವಾಕ್‌ ಸ್ವಾತಂತ್ರ್ಯ ಇತರರ ಪ್ರತಿಷ್ಠೆಗೆ ಹಾನಿ ಮಾಡುವ ಪರಿಶೀಲಿಸದ ಆರೋಪಗಳಿಗೆ ರಕ್ಷಣೆ ನೀಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.ಅಂತೆಯೇ ನಾಯರ್‌ ಅವರಿಗೆ ಶಿಕ್ಷೆ ವಿಧಿಸಿದ ಅದು ಪ್ರೊಬೆಷನ್‌ (ನ್ಯಾಯಾಲಯ ಅಪರಾಧಿಗೆ ತಕ್ಷಣ ಜೈಲು ಶಿಕ್ಷೆ ವಿಧಿಸುವ ಬದಲು, ಕೆಲವು ಷರತ್ತುಗಳೊಂದಿಗೆ ಸಮಾಜದಲ್ಲೇ ಉಳಿಯಲು ಅವಕಾಶ ನೀಡುವ ವ್ಯವಸ್ಥೆ) ನೀಡಲು ನಿರಾಕರಿಸಿತು.