

ಶಬರಿಮಲೆ ಚಿನ್ನ ಕಳವು ಪ್ರಕರಣದ ಕೆಲ ಆರೋಪಿಗಳ ಜಾಮೀನು ಅರ್ಜಿಗಳನ್ನು ಸೋಮವಾರ ಆಲಿಸಿದ ಕೇರಳ ಹೈಕೋರ್ಟ್, ದೇವಸ್ಥಾನದ ಆಸ್ತಿ ರಕ್ಷಿಸುವುದಕ್ಕಾಗಿ ದಂಡನಾತ್ಮಕ ಸೆಕ್ಷನ್‌ಗಳಿರುವ ವಿಶೇಷ ಕಾಯಿದೆ ರೂಪಿಸುವುದನ್ನು ರಾಜ್ಯ ಸರ್ಕಾರ ಪರಿಗಣಿಸಬಹುದು ಎಂದಿದೆ [ರೊದ್ದಂ ಪಾಂಡುರಂಗಯ್ಯ ನಾಗ ಗೋವರ್ಧನ್ ಮತ್ತು ಕೇರಳ ಸರ್ಕಾರ ಹಾಗೂ ಸಂಬಂಧಿತ ಪ್ರಕರಣಗಳು].
ದೇವಾಲಯದ ಆಸ್ತಿ ದುರುಪಯೋಗ ಹೆಚ್ಚುತ್ತಿರುವುದನ್ನು ತಡೆಯಲು ಕೇರಳ ರಾಜ್ಯ ದೇವಸ್ವಂ ಆಸ್ತಿ ರಕ್ಷಣೆ ಮತ್ತು ಸಂರಕ್ಷಣಾ ಕಾಯಿದೆ ಜಾರಿಗೆ ತರುವಂತೆ ಎಡಿಜಿಪಿ ಗ್ರೇಷಿಯಸ್ ಕುರಿಯಾಕೋಸ್ ಅವರು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಬಹುದು ಎಂದು ನ್ಯಾಯಮೂರ್ತಿ ಎ ಬದರುದ್ದೀನ್ ಸಲಹೆ ನೀಡಿದರು.
ಸರ್ಕಾರದ ಬಳಿ ನಿರ್ದಿಷ್ಟವಾದ ಕಾಯಿದೆ ಇರಬೇಕು. ಅನೇಕ ಪ್ರಕರಣಗಳು ಬರುತ್ತಿವೆ. ಭಕ್ತರ ಹಿತದೃಷ್ಟಿಯಿಂದ ದೇವಸ್ವಂಗೆ ಆಸ್ತಿ ರಕ್ಷಿಸುವ ಜವಾಬ್ದಾರಿ ಇರಬೇಕು. ಅದಕ್ಕಾಗಿ ಕಾನೂನು ಜಾರಿಗೆ ತರಲೇಬೇಕು. ನೀವು ಎಡಿಜಿಪಿಯಾಗಿರುವುದರಿಂದ ಸರ್ಕಾರಕ್ಕೆ ಸಲಹೆ ನೀಡಬಹುದು ಎಂದು ನ್ಯಾಯಮೂರ್ತಿಯವರು ಹೇಳಿದರು.
ಪ್ರಸ್ತುತ ಜಾರಿಗೆ ಇರುವ ದೇವಸ್ವಂ ಕೈಪಿಡಿ ಹಾಗೂ ಆಂತರಿಕ ಮಾರ್ಗಸೂಚಿಗಳು ಸಾಕಷ್ಟು ಪರಿಣಾಮಕಾರಿಯಾಗಿಲ್ಲ. ಅವು ತಪ್ಪು ಮಾಡಿದ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮಾತ್ರ ಇವೆ. ಅಪರಾಧವಾಗಿ ಪರಿಗಣಿಸಲಾಗುತ್ತಿಲ್ಲ. ಹೀಗಾಗಿ ದೇವಾಲಯದ ಆಸ್ತಿಗಳನ್ನು ರಕ್ಷಿಸಲು ಕಠಿಣ ದಂಡ ವಿಧಿಸುವ ಕಾಯಿದೆ ಜಾರಿಗೆ ತರುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಕರಣದಲ್ಲಿ ಕರ್ನಾಟಕ ಮೂಲದ ಆಭರಣ ವ್ಯಾಪಾರಿ ರೊದ್ದಂ ಪಾಂಡುರಂಗಯ್ಯ ನಾಗ ಗೋವರ್ಧನ್, ಟ್ರಾವನ್ಕೋರ್ ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಸಿಪಿಎಂ ಹಿರಿಯ ನಾಯಕ ಎ ಪದ್ಮಕುಮಾರ್ ಹಾಗೂ ಮಾಜಿ ಆಡಳಿತಾಧಿಕಾರಿ ಬಿ ಮುರಾರಿ ಬಾಬು ಆರೋಪಿಗಳಾಗಿದ್ದಾರೆ.
ಶಬರಿಮಲೆ ದೇವಸ್ಥಾನದ ದ್ವಾರಪಾಲಕ ವಿಗ್ರಹಗಳು ಮತ್ತು ಬಾಗಿಲು ಚೌಕಟ್ಟಿಗೆ ಅಳವಡಿಸಿದ್ದ ಚಿನ್ನ ದುರಸ್ತಿ ಕಾರ್ಯದ ಬಳಿಕ ಸುಮಾರು ನಾಲ್ಕು ಕಿಲೋಗ್ರಾಂ ಚಿನ್ನ ಕಡಿಮೆಯಾಗಿದ್ದು ಇದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಪ್ರಕರಣದ ಪ್ರಮುಖ ಆರೋಪಿಯಾದ ಉನ್ನಿಕೃಷ್ಣನ್ ಪೊಟ್ಟಿ ದುರಸ್ತಿ ಕಾರ್ಯದ ಪ್ರಾಯೋಜಕತ್ವ ವಹಿಸಿದ್ದರು. ದೇವಸ್ವಂ ಅಧಿಕಾರಿಗಳ ಅಕ್ರಮಗಳಿಂದಾಗಿ ಚಿನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಮಾತುಗಳಿವೆ.
ಕೈಪಿಡಿ ಉಲ್ಲಂಘನೆ ಮಾಡಿದ ಮಾತ್ರಕ್ಕೆ ಅದು ಅಪರಾಧವಲ್ಲ ಎಂದು ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ವಾದ ಮಂಡಿಸಿದರು. ಆದರೆ ಕರ್ತವ್ಯ ದುರುಪಯೋಗಪಡಿಸಿಕೊಂಡು ಅಪರಾಧ ಎಸಗಿದರೆ ಕ್ರಿಮಿನಲ್ ಹೊಣೆ ನಿಗದಿ ಅನಿವಾರ್ಯವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿತು. ರಾಜ್ಯ ಸರ್ಕಾರ ಜಾಮೀನು ಅರ್ಜಿಗಳಿಗೆ ವಿರೋಧ ವ್ಯಕ್ತಪಡಿಸಿತು.
ಇದೇ ವೇಳೆ ತಿರುವಾಂಕೂರು ದೇವಸ್ವಂ ಮಂಡಳಿಯ ಕಾರ್ಯ ವೈಖರಿ ಬಗ್ಗೆಯೂ ನ್ಯಾಯಾಲಯ ಕೆಂಗಣ್ಣು ಬೀರಿತು. ಬಳಿಕ ಮೂವರು ಆರೋಪಿಗಳ ಜಾಮೀನು ಅರ್ಜಿಗಳಿಗೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿತು.