ಸುದ್ದಿಗಳು

ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವಿರುದ್ಧದ ಮಾದಕ ವಸ್ತು ಇರಿಸಿದ್ದ ಪ್ರಕರಣ ರದ್ದುಮಾಡಲು ಗುಜರಾತ್ ಹೈಕೋರ್ಟ್ ನಕಾರ

ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಭಟ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಸಮೀರ್ ದವೆ ಅವರಿದ್ದ ಏಕಸದಸ್ಯ ಪೀಠ ತಿರಸ್ಕರಿಸಿತು.

Bar & Bench

ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಉದ್ದೇಶದಿಂದ ಮಾದಕ ವಸ್ತು ಇರಿಸಿದ್ದ ಇಪ್ಪತ್ತೇಳು ವರ್ಷ ಹಳೆಯದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಗೊಳಿಸಲು ಗುಜರಾತ್‌ ಹೈಕೋರ್ಟ್‌ ಇಂದು ನಿರಾಕರಿಸಿದೆ (ಸಂಜೀವ್ ರಾಜೇಂದ್ರಭಾಯ್ ಭಟ್ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣ).

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಭಟ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಮೀರ್ ದವೆ ಅವರಿದ್‌ ಏಕಸದಸ್ಯ ಪೀಠ ತಿರಸ್ಕರಿಸಿತು.

ಆದೇಶದ ಪರಿಣಾಮವನ್ನು ತಡೆ ಹಿಡಿಯುವಂತೆ ಅಥವಾ ಒಂದು ತಿಂಗಳ ಕಾಲ ವಿಚಾರಣೆಗೆ ತಡೆ ನೀಡುವಂತೆ ಭಟ್ ಪರ ವಕೀಲರು ಮಾಡಿದ ಮನವಿಯನ್ನು ನ್ಯಾಯಮೂರ್ತಿಗಳು ನಿರಾಕರಿಸಿದರು.

"ವಿಚಾರಣೆ ವಿರುದ್ಧ ಈ ಹಿಂದೆ ತಡೆಯಾಜ್ಞೆ ನೀಡದೇ ಇರುವಾಗ ನಾನು ವಿಚಾರಣೆಗೆ ತಡೆ ನೀಡುವುದು ಹೇಗೆ? ಕ್ಷಮಿಸಿ, ತಡೆ ನೀಡಲಾಗದು," ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಹೇಳಿದರು.

ಮಾದಕವಸ್ತು ಹೊಂದಿದ್ದ ಆರೋಪದಡಿ ರಾಜಸ್ಥಾನ ಮೂಲದ ವಕೀಲರೊಬ್ಬರನ್ನು 1996ರಲ್ಲಿ ಬನಾಸ್‌ಕಾಂಠ ಪೊಲೀಸರು ಬಂಧಿಸಿದ್ದರು. ಈ ವೇಳೆ ಭಟ್‌ ಅವರು ಬನಾಸ್‌ಕಾಂಠ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು.

ಆದರೆ ಇದೊಂದು ಸುಳ್ಳು ಪ್ರಕರಣವಾಗಿದ್ದು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಕೀಲರನ್ನು ಬೆದರಿಸುವ ಉದ್ದೇಶದಿಂದ ಕೇಸ್‌ ದಾಖಲಿಸಲಾಗಿತ್ತು ಎಂದು ರಾಜಸ್ಥಾನ ಪೊಲೀಸರು ನಂತರ ಹೇಳಿದ್ದರು. ಭಟ್ ಅವರನ್ನು ಸೆಪ್ಟೆಂಬರ್ 2018ರಲ್ಲಿ ಬಂಧಿಸಲಾಗಿದ್ದು ಅಂದಿನಿಂದ ಅವರು ಜೈಲಿನಲ್ಲಿದ್ದಾರೆ. ಭಟ್ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ತೀವ್ರ ಟೀಕೆಯಿಂದಾಗಿ ದೇಶದ ಗಮನ ಸೆಳೆದಿದ್ದರು.