Gyanvapi Mosque 
ಸುದ್ದಿಗಳು

ಜ್ಞಾನವಾಪಿ ಮಸೀದಿ ಸಮೀಕ್ಷೆ ಕುರಿತು ಸುಳ್ಳು ಸುದ್ದಿ ಪ್ರಸರಣ: ವಾರಾಣಸಿ ನ್ಯಾಯಾಲಯದ ಮೊರೆ ಹೋದ ಮುಸ್ಲಿಂ ಪಕ್ಷಕಾರರು

ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಜುಲೈ 21 ರಂದು ನೀಡಿದ ನಿರ್ದೇಶನದ ಮೇರೆಗೆ ಎಎಸ್ಐ ಪ್ರಸ್ತುತ ಜ್ಞಾನವಾಪಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸುತ್ತಿದೆ.

Bar & Bench

ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆಯುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮೀಕ್ಷೆಯ ಬಗ್ಗೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ಸುಳ್ಳು ಸುದ್ದಿ ಹರಡುವುದಕ್ಕೆ ನಿರ್ಬಂಧ ವಿಧಿಸಬೇಕೆಂದು ಕೋರಿ ಮಸೀದಿಯ ಮೇಲ್ವಿಚಾರಣೆ ನಡೆಸುತ್ತಿರುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ವಾರಾಣಸಿ ನ್ಯಾಯಾಲಯದ ಮೆಟ್ಟಿಲೇರಿದೆ.

ನಾಲ್ವರು ಹಿಂದೂ ಮಹಿಳಾ ಆರಾಧಕರು ಹೂಡಿದ್ದ 2022 ರ ಶೃಂಗಾರ್ ಗೌರಿ ಆರಾಧನೆ ಪ್ರಕರಣದಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ. ಮಸೀದಿಯಲ್ಲಿ ವರ್ಷವಿಡೀ ಪೂಜಾ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಮಹಿಳೆಯರು ಕೋರಿದ್ದರು.

ನಡೆಯುತ್ತಿರುವ ಸಮೀಕ್ಷೆ ಬಗ್ಗೆ ಎಎಸ್‌ಐ ಆಗಲೀ ಅಥವಾ ಅದರ ಅಧಿಕಾರಿಗಳಾಗಲೀ ಯಾವುದೇ ಹೇಳಿಕೆಗಳನ್ನು ನೀಡಿಲ್ಲವಾದರೂ ಸಮೀಕ್ಷೆಗೆ ಸಂಬಂಧಿಸಿದ ತಪ್ಪು ಮತ್ತು ಸುಳ್ಳು ಮಾಹಿತಿಯನ್ನು ಸಾಮಾಜಿಕ ಮಾಧ್ಯಮ, ಮುದ್ರಣ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬೇಕೆಂದ ಹಾಗೆ ಪ್ರಸಾರ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

“ಮಾಧ್ಯಮಗಳು ಇಲ್ಲಿಯವರೆಗೆ ಸಮೀಕ್ಷೆ ನಡೆಸದ ಮಸೀದಿಯ ಒಳಗಿನ ಜಾಗಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಕಟ ಮತ್ತು ಪ್ರಸಾರ ಮಾಡುತ್ತಿದ್ದಾರೆ. ಇದು ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಅವರ ಮನಸ್ಸಿನಲ್ಲಿ ವಿವಿಧ ರೀತಿಯ ವಿಚಾರಗಳು ರೂಪುತಳೆಯಲಿದ್ದು ದ್ವೇಷ ಹರಡುತ್ತಿದೆ'' ಎಂದು ಅರ್ಜಿಯಲ್ಲಿ ಹೇಳಲಾಗಿದೆ.