ಸುದ್ದಿಗಳು

[ಜ್ಞಾನವಾಪಿ ಪ್ರಕರಣ] ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂ: ಇಂದು ವಿಚಾರಣೆ ನಡೆಸದಿರಲು ಕೆಳ ನ್ಯಾಯಾಲಯಕ್ಕೆ ಸೂಚನೆ

ಪ್ರಕರಣವನ್ನು ಮುಂದೂಡುವಂತೆ ಹಿಂದೂ ಪಕ್ಷಕಾರರ ಮನವಿಗೆ ಸಮ್ಮತಿಸಿದ ಪೀಠ ಇಂದು ವಿಚಾರಣೆ ನಡೆಸದಂತೆ ಅಥವಾ ಆದೇಶ ನೀಡದಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತು.

Bar & Bench

ಹಿಂದೂ ಪಕ್ಷಕಾರರ ಕೋರಿಕೆ ಮೇರೆಗೆ ಜ್ಞಾನವಾಪಿ ಮಸೀದಿ- ಕಾಶಿ ವಿಶ್ವನಾಥ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆಗೆ ಮುಂದೂಡಿದ್ದು ವಿಚಾರಣಾ ನ್ಯಾಯಾಲಯ ಇಂದು ಪ್ರಕರಣದ ವಿಚಾರಣೆ ನಡೆಸದಂತೆ ಹಾಗೂ ಆದೇಶ ನೀಡದಂತೆ ಸೂಚಿಸಿದೆ.

ವಕೀಲ ವಿಷ್ಣು ಜೈನ್‌ ಮನವಿಗೆ ಸ್ಪಂದಿಸಿದ ನ್ಯಾಯಾಲಯ “ವಿಚಾರಣಾ ನ್ಯಾಯಾಲಯದ ಮುಂದೆ ಪ್ರಕ್ರಿಯೆಗಳು ಮುಂದುವರೆಯಬಾರದು ಎಂದು ಅರ್ಜಿದಾರರು ಕೋರಿದ್ದು ಇದನ್ನು ಜೈನ್‌ ಒಪ್ಪಿದ್ದಾರೆ. ಇಲ್ಲಿನ ವ್ಯವಸ್ಥೆಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಲು ವಿಚಾರಣಾ ನ್ಯಾಯಾಲಯಕ್ಕೆ ನಾವು ಆದೇಶಿಸುತ್ತೇವೆ. ಅದು ಯಾವುದೇ ಆದೇಶಗಳನ್ನು ನೀಡಬಾರದು” ಎಂದು ಪೀಠ ಸೂಚಿಸಿತು.

ವಿಚಾರಣಾ ನ್ಯಾಯಾಲಯದ ಮುಂದೆ ವಿಚಾಣೆ ನಡೆಯುತ್ತಿದ್ದು ಮಸೀದಿಯ ವಝು ಖಾನಾ ಬಳಿ ಗೋಡೆಯನ್ನು ಕೆಡವಲು ಅರ್ಜಿ ಸಲ್ಲಿಸಲಾಗಿದೆ ಎಂಬುದನ್ನು ಮುಸ್ಲಿಂ ಪಕ್ಷಕಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಹುಝೆಫಾ ಅಹ್ಮದಿ ನ್ಯಾಯಾಲಯದ ಗಮನಕ್ಕೆ ತಂದರು. ಜೊತೆಗೆ ಇತರ ಮಸೀದಿಗಳನ್ನು ನಿರ್ಬಂಧಿಸುವಂತೆಯೂ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಗ ವಕೀಲ ಜೈನ್‌ ಅವರನ್ನು ಉದ್ದೇಶಿಸಿ “ನಿಮ್ಮ ಸ್ಥಳೀಯ ವಕೀಲರಿಗೆ ಮುಂದುವರೆಯದಂತೆ ತಿಳಿಸಿ. ವಿಚಾರಣಾ ನ್ಯಾಯಾಧೀಶರು ಟಿಕರ್‌ ಟೇಪ್‌ (ಮಾಹಿತಿಯನ್ನು ರವಾನಿಸುವ ಎಲೆಕ್ಟ್ರಾನಿಕ್‌ ಸಾಧನ) ಹೊಂದಿಲ್ಲ" ಎಂದು ನ್ಯಾ. ಚಂದ್ರಚೂಡ್‌ ನಗುತ್ತಾ ಪ್ರತಿಕ್ರಿಯಿಸಿದರು.

ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ನಾಳೆ ಮಧ್ಯಾಹ್ನ 3 ಗಂಟೆಗೆ ನಡೆಸಲಿದೆ.