ಸಮೀಕ್ಷೆ ವೇಳೆ ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾದ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ನಿರ್ಬಂಧಿಸುವಂತೆ ವಾರಾಣಸಿ ಸ್ಥಳೀಯ ನ್ಯಾಯಾಲಯ ಆದೇಶಿಸಿರುವುದಾಗಿ ವರದಿಯಾಗಿದೆ.
ಶಿವಲಿಂಗ ಪತ್ತೆಯಾದ ಪ್ರದೇಶವನ್ನು ಜನ ಪ್ರವೇಶಿಸದ ರೀತಿಯಲ್ಲಿ ನಿರ್ಬಂಧ ವಿಧಿಸಬೇಕು ಎಂದು ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ಆದೇಶಿಸಿದ್ದಾರೆ.
ಮೊಹರು ಮಾಡಿದ ಪ್ರದೇಶವು ಸುರಕ್ಷಿತವಾಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ನ್ಯಾಯಾಲಯವು ನಿರ್ದೇಶನ ನೀಡಿದೆ.
"78 ಜಿ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯನ್ನು ಪುರಸ್ಕರಿಸಲಾಗಿದೆ. ಶಿವಲಿಂಗ ಪತ್ತೆಯಾದ ಸ್ಥಳವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾರಾಣಸಿ ಜಿಲ್ಲಾಧಿಕಾರಿಯವರು ನಿರ್ಬಂಧಿಸಬೇಕು ಎಂದು ಆದೇಶಿಸಲಾಗಿದೆ ಮತ್ತು ಮೊಹರು ಮಾಡಿದ ಸ್ಥಳದಲ್ಲಿ ಯಾವುದೇ ವ್ಯಕ್ತಿಯ ಪ್ರವೇಶವನ್ನು ನಿಷೇಧಿಸಬೇಕಿದೆ. ಸ್ಥಳವನ್ನು ರಕ್ಷಿಸಲು ವಾರಾಣಸಿಯ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಹಾಗೂ ಸಿಆರ್‌ಪಿಎಫ್ ಕಮಾಂಡೆಂಟ್ ಅವರು ವೈಯಕ್ತಿಕವಾಗಿ ಜವಾಬ್ದಾರರು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಸೀದಿಯಲ್ಲಿ ಹಿಂದೂ ದೈವಗಳ ವಿಗ್ರಹಗಳಿದ್ದು, ಹಿಂದೂಗಳಿಗೆ ಆ ಸ್ಥಳದಲ್ಲಿ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಹಿಂದೂ ಪಕ್ಷಕಾರರು ಸಲ್ಲಿಸಿದ ಮೊಕದ್ದಮೆಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯ ಈ ಆದೇಶ ನೀಡಿದೆ.
ಸಮೀಕ್ಷೆ ವೇಳೆ ಶಿವಲಿಂಗ ಪತ್ತೆಯಾಗಿದ್ದು ಕೂಡಲೇ ಈ ಪ್ರದೇಶವನ್ನು ಸೀಲ್ ಮಾಡಬೇಕು ಎಂದು ಫಿರ್ಯಾದುದಾರರ ಪರ ವಕೀಲ ಹರಿಶಂಕರ್ ಜೈನ್ ವಾದಿಸಿದ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ.
ಸಮೀಕ್ಷೆ ಪ್ರಶ್ನಿಸಿ ಅಂಜುಮನ್ ಇಂತೆಜಾಮಿಯಾ ಮಸ್ಜಿದ್ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸುವುದು ಒಂದು ದಿನ ಬಾಕಿ ಇರುವಂತೆಯೇ ಈ ಬೆಳವಣಿಗೆ ನಡೆದಿದೆ.
ಕೆಳಹಂತದ ನ್ಯಾಯಾಲಯ ಈ ಹಿಂದೆ ಸ್ಥಳ ಸಮೀಕ್ಷೆ ಮತ್ತು ವೀಡಿಯೊಗ್ರಫಿ ನಡೆಸಲು ಕೋರ್ಟ್ ಕಮಿಷನರ್ ಅವರನ್ನು ನೇಮಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ವಜಾಗೊಳಿಸಿತ್ತು. ತರುವಾಯ ಮಸೀದಿ ಸಮಿತಿಯು ಕೋರ್ಟ್ ಕಮಿಷನರ್ ಪೂರ್ವಾಗ್ರಹ ಪೀಡಿತರಾಗಿದ್ದು ಅವರನ್ನು ಬದಲಿಸಬೇಕು ಎಂದು ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದನ್ನು ಗುರುವಾರ ತಿರಸ್ಕರಿಸಿದ್ದರಿಂದ ಸಮೀಕ್ಷೆ ಮುಂದುವರೆದಿತ್ತು.