ಜ್ಞಾನವಾಪಿ ಮಸೀದಿಯ ಸಮೀಕ್ಷೆಗಾಗಿ ರಚಿಸಲಾಗಿದ್ದ ಸಮಿತಿಯಿಂದ ಕೋರ್ಟ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಅವರನ್ನು ಬಿಡುಗಡೆಗೊಳಿಸಿರುವ ವಾರಾಣಸಿ ನ್ಯಾಯಾಲಯ ಇನ್ನೆರಡು ದಿನಗಳಲ್ಲಿ ಸಮೀಕ್ಷೆ ಮತ್ತು ವೀಡಿಯೊಗ್ರಫಿಯ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ನಿನ್ನೆ ಸಮೀಕ್ಷೆ ವೇಳೆ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಕೂಡಲೇ ಸ್ಥಳ ನಿರ್ಬಂಧಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಸಮೀಕ್ಷೆ ಮುಕ್ತಾಯಗೊಂಡಿದ್ದು ಅಡ್ವೊಕೇಟ್ ಕಮಿಷನರ್ ವರದಿ ಇನ್ನಷ್ಟೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗಬೇಕಿದೆ.
ಜ್ಞಾನವಾಪಿ ಮಸೀದಿಯ ವಿಚಾರದಲ್ಲಿ ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಒದಗಿಸಲಾಗಿರುವ ಧರ್ಮ ಪ್ರತಿಪಾದನೆಯ ಹಕ್ಕನ್ನು ತಮಗೆ ನಿರಾಕರಿಸಲಾಗಿದೆ. ಸ್ಥಳದಲ್ಲಿ ಗೌರಿ, ಗಣೇಶ ಮತ್ತು ಹನುಮಾನ್ ಮುಂತಾದ ದೇವತಾ ಮೂರ್ತಿಗಳಿದ್ದು ಅವುಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ರಾಖಿ ಸಿಂಗ್ ಮತಿತ್ತರ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕೋರ್ಟ್ ಕಮಿಷನರ್ ನೇತೃತ್ವದಲ್ಲಿ ಸಮೀಕ್ಷೆ ನಡೆಸಿ ಸಾಕ್ಷ್ಯ ಸಂಗ್ರಹಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ವಜಾಗೊಳಿಸಿತ್ತು. ತರುವಾಯ ಮಸೀದಿ ಸಮಿತಿಯು ಕೋರ್ಟ್ ಕಮಿಷನರ್ ಪೂರ್ವಾಗ್ರಹ ಪೀಡಿತರಾಗಿದ್ದು ಅವರನ್ನು ಬದಲಿಸಬೇಕು ಎಂದು ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದನ್ನು ಕಳೆದ ಗುರುವಾರ ತಿರಸ್ಕರಿಸಿದ್ದರಿಂದ ಸಮೀಕ್ಷೆ ಮುಂದುವರೆದಿತ್ತು.