Justice B Verappa and Karnataka HC
Justice B Verappa and Karnataka HC 
ಸುದ್ದಿಗಳು

ನಾಸಿಕ್‌ನಲ್ಲಿ ತಾಯಿ ಜೊತೆಗಿದ್ದ ಹೆಣ್ಣು ಮಕ್ಕಳನ್ನು ಹೈಕೋರ್ಟ್‌ ಮುಂದೆ ಹಾಜರುಪಡಿಸಿದ ಪೊಲೀಸರು; ಪೀಠದ ಮೆಚ್ಚುಗೆ

Bar & Bench

ಬೆಂಗಳೂರಿನಲ್ಲಿರುವ ಗಂಡನ ಮನೆ ತೊರೆದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ನೆಲೆಸಿದ್ದ ಮಹಿಳೆಯ ಸುಪರ್ದಿನಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಕರ್ನಾಟಕ ಹೈಕೋರ್ಟ್ ಮುಂದೆ ಹಾಜರುಪಡಿಸುವಲ್ಲಿ ಗುರುವಾರ ಮಾರತಹಳ್ಳಿ ಠಾಣಾ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಪತ್ನಿಯು ತನ್ನ ಅಪ್ರಾಪ್ತ ಹೆಣ್ಣು ಮಕ್ಕಳಿಬ್ಬರನ್ನು ಅಕ್ರಮವಾಗಿ ಕರೆದೊಯ್ದು ನಾಸಿಕ್‌ನಲ್ಲಿ ನೆಲೆಸಿದ್ದಾರೆ. ಮಕ್ಕಳನ್ನು ನೋಡಲು ಅವಕಾಶ ನೀಡುತ್ತಿಲ್ಲ. ಹೀಗಾಗಿ, ಮಕ್ಕಳನ್ನು ತನ್ನ ಸುಪರ್ದಿಗೆ ನೀಡುವಂತೆ ಪತ್ನಿಗೆ ಆದೇಶಿಸುವಂತೆ ಕೋರಿ ನಗರದ ಕರಿಯಮ್ಮನ ಅಗ್ರಹಾರ ಬಡಾವಣೆ ನಿವಾಸಿಯಾದ ಪತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ (ವ್ಯಕ್ತಿಯ ಸಾಕ್ಷಾತ್‌ ಹಾಜರಿ ಆಜ್ಞೆ) ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಪೊಲೀಸರು ಇಬ್ಬರು ಹೆಣ್ಣು ಮಕ್ಕಳನ್ನೂ ಹೈಕೋರ್ಟ್‌ಗೆ ಹಾಜರುಪಡಿಸಿದ್ದು, ತಾಯಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ. ಮಕ್ಕಳನ್ನು ಮೂರು ದಿನಗಳ ಕಾಲ ತಂದೆಯ ಸುಪರ್ದಿಗೆ ನೀಡಲಾಗಿದೆ. ವಿಚಾರಣೆಯನ್ನು ಆಗಸ್ಟ್‌ 22ಕ್ಕೆ ಮುಂದೂಡಲಾಗಿದ್ದು, ಅಂದು ತಾಯಿ ಸಹ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಬೇಕು ಎಂದು ಪೀಠ ನಿರ್ದೇಶಿಸಿತು.

ನ್ಯಾಯಾಲಯದ ಮುಂದೆ ಮಕ್ಕಳನ್ನು ಹಾಜರುಪಡಿಸುವಲ್ಲಿ ಅವಿರತ ಶ್ರಮ ವಹಿಸಿದ ಪೊಲೀಸರು ಮತ್ತು ಅಗತ್ಯ ನೆರವು ನೀಡಿದ ಸರ್ಕಾರಿ ವಕೀಲ ತೇಜೇಶ್ ಅವರಿಗೆ ಪೀಠವು ಇದೇ ವೇಳೆ ಮೆಚ್ಚುಗೆ ಸೂಚಿಸಿತು.

ಮಕ್ಕಳ ಹಿತ ಹಾಗೂ ಭವಿಷ್ಯದ ದೃಷ್ಟಿಯಿಂದ ಪೋಷಕರು ತಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ಒಂದಾಗಿ ಜೀವಿಸಬೇಕು. ತಂದೆ-ತಾಯಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಮಾತಿನಂತೆ ಆಗಬಾರದು. ಪೋಷಕರ ಮಧ್ಯೆ ಗಲಾಟೆಯಾದರೆ ಮೊದಲು ತೊಂದರೆ ಅನುಭವಿಸುವುದೇ ಮಕ್ಕಳು. ಪೋಷಕರ ಗಲಾಟೆಯು ಮಕ್ಕಳ ಸೂಕ್ಷ್ಮ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಹಂ ಇಂದ ಪತಿ-ಪತ್ನಿ ನಡುವೆ ಜಗಳ ಹೆಚ್ಚಾಗುತ್ತದೆ. ಅಹಂ ಬಿಟ್ಟರೆ ಎಲ್ಲವೂ ಸರಿಹೋಗುತ್ತದೆ. ಮಕ್ಕಳ ಸಂತೋಷವೇ ತಂದೆ-ತಾಯಿ ಮೊದಲ ಆದ್ಯತೆಯಾಗಬೇಕು. ಅವರಿಗಾಗಿ ಕಲಹ ಕೈಬಿಟ್ಟು ಒಟ್ಟಿಗೆ ಬಾಳಿ ಎಂದು ವಿಚಾರಣೆಗೆ ಹಾಜರಿದ್ದ ದಂಪತಿಗೆ ಪೀಠವು ಬುದ್ಧಿ ಹೇಳಿತು.

ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್‌

ನ್ಯಾಯಾಲಯವು ಹಲವು ಬಾರಿ ಸೂಚನೆ ನೀಡಿ, ಸಾಕಷ್ಟು ಕಾಲಾವಕಾಶ ಕಲ್ಪಿಸಿದ್ದರೂ ಮತ್ತು ನಾಸಿಕ್ ಪೊಲೀಸರ ಮೂಲಕ ಸಮನ್ಸ್ ಜಾರಿ ಮಾಡಿದ್ದರೂ ತಾಯಿ ಮಾತ್ರ ಮಕ್ಕಳನ್ನು ಪೀಠದ ಮುಂದೆ ಹಾಜರುಪಡಿಸಿರಲಿಲ್ಲ. ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವುದಾಗಿ ಸುಳ್ಳು ಮಾಹಿತಿ ನೀಡಿ ಹೈಕೋರ್ಟ್‌ ದಿಕ್ಕು ತಪ್ಪಿಸಿದ್ದರು. ಅಲ್ಲದೇ, ಶಾಲೆಯಲ್ಲಿ ಪೋಷಕರ ಸಭೆಗೆ ಹಾಜರಾಗಬೇಕಾದ ಕಾರಣ ನ್ಯಾಯಾಲಯಕ್ಕೆ ಬರಲಾಗದು ಎಂದು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ನ್ಯಾಯಾಲಯದ ಆದೇಶ ಧಿಕ್ಕರಿಸಿದ್ದರು.

ಮಹಿಳೆಯ ಈ ನಡೆಯಿಂದ ಅಸಮಾಧಾನಗೊಂಡಿದ್ದ ನ್ಯಾಯಾಲಯವು ನಾಸಿಕ್ ಪೊಲೀಸ್ ಆಯುಕ್ತರ ಮೂಲಕ ಆಗಸ್ಟ್‌ 18ರಂದು ಮಗು ಮತ್ತು ತಾಯಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ರಾಜ್ಯ ಗೃಹ ಇಲಾಖೆ, ನಗರ ಪೊಲೀಸ್ ಆಯುಕ್ತರು, ಮಾರತಹಳ್ಳಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಮತ್ತು ವೈಟ್‌ಫೀಲ್ಡ್ ವಿಭಾಗದ ಆಯುಕ್ತರಿಗೆ ಆಗಸ್ಟ್‌ 4ರಂದು ಆದೇಶಿಸಿತ್ತು.

ನ್ಯಾಯಾಲಯದ ಸೂಚನೆಯಂತೆ ನಾಸಿಕ್‌ಗೆ ತೆರಳಿದ್ದ ಮಾರತಹಳ್ಳಿ ಠಾಣಾ ಪೊಲೀಸರು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ತಾಯಿ ಮತ್ತವರ ಮಕ್ಕಳನ್ನು ಪತ್ತೆ ಮಾಡಿದ್ದರು. ಅಲ್ಲದೇ, ನ್ಯಾಯಾಲಯದ ಆದೇಶದ ಬಗ್ಗೆ ತಿಳಿಸಿದ್ದರು.