ಮಹಾಲೇಖಪಾಲರ (ಸಿಎಜಿ) ವರದಿ ಆಧರಿಸಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಬೆಂಗಳೂರಿನ ಹಳಗೇವಡೇರನಹಳ್ಳಿಯಲ್ಲಿ ಸುಮಾರು 2.20 ಎಕರೆ ಭೂಮಿ ಡಿನೋಟಿಫೈ ಮಾಡಿದ್ದಕ್ಕೆ ಸಂಬಂಧಿಸಿದಂತೆ ದಾಖಲಿಸಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾ ಮಾಡಿದೆ [ಬಿ ಎಸ್ ಯಡಿಯೂರಪ್ಪ ವರ್ಸಸ್ ಕರ್ನಾಟಕ ರಾಜ್ಯ ಮತ್ತು ಇತರರು].
ಬಿ ಎಸ್ ಯಡಿಯೂರಪ್ಪ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.
ಸಿಎಜಿ ವರದಿಯನ್ನು ಆಧರಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗದು ಮತ್ತು ಅದನ್ನು ತನಿಖೆಯ ಭಾಗವಾಗಿಸಲಾಗದು ಎಂಬುದನ್ನು ಹೈಕೋರ್ಟ್‌ನ ಬೇರೊಂದು ಪೀಠವು 2015ರಲ್ಲಿ ಎತ್ತಿ ಹಿಡಿದಿದೆ ಎಂದು ಯಡಿಯೂರಪ್ಪ ಅವರ ಪರ ವಕೀಲ ಸಂದೀಪ್ ಪಾಟೀಲ್ ಅವರು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠಕ್ಕೆ ವಿವರಿಸಿದರು. ಇದನ್ನು ನ್ಯಾಯಾಲಯವು ಪುರಸ್ಕರಿಸಿದೆ.
ಸಿಎಜಿ ವರದಿ ಆಧರಿಸಿ ಎಫ್‌ಐಆರ್ ದಾಖಲಿಸಲಾಗದು. ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ವಾದಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ನ್ಯಾಯಾಲಯವು 2015ರಲ್ಲಿ ಎಫ್‌ಐಆರ್‌ಗಳನ್ನು ವಜಾ ಮಾಡುವಾಗ ಹೇಳಿತ್ತು.
ಪ್ರಕರಣದ ಹಿನ್ನೆಲೆ: 2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಭೂಮಿ ಡಿನೋಟಿಫೈ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದ ಸಿಎಜಿ ವರದಿ ಆಧರಿಸಿ ಬೆಂಗಳೂರಿನ ಜಯಕುಮಾರ್ ಹಿರೇಮಠ ಎಂಬವರು ಲೋಕಾಯುಕ್ತಕ್ಕೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ 15 ಎಫ್‌ಐಆರ್‌ಗಳನ್ನು ಲೋಕಾಯುಕ್ತ ಪೊಲೀಸರು ದಾಖಲಿಸಿದ್ದರು. ಹಲಗೇವಡೇರಹಳ್ಳಿ, ಬಿಲಕೆಹಳ್ಳಿ ಮತ್ತು ಜೆ ಬಿ ಕಾವಲ್‌ನಲ್ಲಿ ಭೂಮಿ ಡಿನೋಟಿಫೈ ಮಾಡಿದ ಆರೋಪದಲ್ಲಿ ಮೊದಲಿಗೆ ಮೂರು ಎಫ್‌ಐಆರ್ ದಾಖಲಿಸಲಾಗಿತ್ತು. ಆನಂತರ ಜೆಪಿ ನಗರ, ಎಚ್‌ಆರ್‌ಬಿಆರ್ ಲೇಔಟ್, ಜಯನಗರ 8ನೇ ಹಂತ ಮತ್ತು ರಾಚನೇಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿನ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಮತ್ತೆ 12 ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಬಳಿಕ ಹಲಗೇವಡೇರಹಳ್ಳಿಯಲ್ಲಿ 2.20 ಎಕರೆ ಭೂಮಿ ಡಿನೋಟಿಫೈ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 16ನೇ ಎಫ್‌ಐಆರ್ ದಾಖಲಿಸಲಾಗಿತ್ತು.
2015ರಲ್ಲಿ ಹೈಕೋರ್ಟ್ 15 ಎಫ್‌ಐಆರ್‌ಗಳನ್ನು ವಜಾ ಮಾಡಿತ್ತು. ಇದೇ ಆರೋಪದ ಮೇಲೆ ದಾಖಲಾಗಿದ್ದ 16ನೇ ಎಫ್‌ಐಆರ್ ಅನ್ನು ಈಗ ಹೈಕೋರ್ಟ್ ವಜಾ ಮಾಡಿದೆ. 15 ಎಫ್‌ಐಆರ್‌ಗಳನ್ನು ವಜಾ ಮಾಡಿರುವುದನ್ನು ಲೋಕಾಯುಕ್ತವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದ್ದು, ವಿಚಾರಣೆಗೆ ಬಾಕಿ ಉಳಿದಿವೆ.