ಐಟಿ ಕಾರಿಡಾರ್‌ ಭೂಮಿ ಅಕ್ರಮ ಡಿನೋಟಿಫಿಕೇಶನ್‌: ಯಡಿಯೂರಪ್ಪ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನ್ಯಾಯಾಲಯದ ಆದೇಶ

ಸರ್ಕಾರಿ ಅಧಿಸೂಚನೆಯ ಮೂಲಕ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿದ್ದ 15.30 ಗುಂಟೆ ಜಮೀನನ್ನು 2006ರ ಜೂನ್‌ 21ರಂದು ಯಡಿಯೂರಪ್ಪ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
Bangalore City civil court and B S Yediyurappa
Bangalore City civil court and B S Yediyurappa

ಬೆಂಗಳೂರಿನ ವೈಟ್‌ಫೀಲ್ಡ್‌ ಮತ್ತು ಎಲೆಕ್ಟ್ರಾನಿಕ್‌ ಸಿಟಿ ನಡುವೆ ಮಾಹಿತಿ ತಂತ್ರಜ್ಞಾನ (ಐಟಿ) ಕಾರಿಡಾರ್‌ ನಿರ್ಮಿಸಲು ಸ್ವಾಧೀನಪಡಿಸಿಕೊಳ್ಳಲಾಗಿದ್ದ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿರುವ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಈಚೆಗೆ ಮಹತ್ವದ ಆದೇಶ ಮಾಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಖುದ್ದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

ಬೆಂಗಳೂರಿನ ಬೆಳ್ಳಂದೂರು ನಿವಾಸಿ ವಾಸುದೇವ ರೆಡ್ಡಿ ಅವರು 2013ರಲ್ಲಿ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ 110ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹಾಗೂ ಹಾಲಿ ಮತ್ತು ಮಾಜಿ ಶಾಸಕ ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ ಜಯಂತ್‌ ಕುಮಾರ್ ಅವರು ಆದೇಶ ಮಾಡಿದ್ದಾರೆ.

ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 13(1)(ಡಿ) ಜೊತೆ ಸೆಕ್ಷನ್‌ 13(2)ರ ಅಡಿ ಪ್ರಕರಣ ದಾಖಲಿಸಲು ನ್ಯಾಯಾಲಯವು ಆದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ: ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಗಿದ್ದ ಬಿ ಎಸ್‌ ಯಡಿಯೂರಪ್ಪ ಅವರು 2006ರ ಜೂನ್‌ 21ರಂದು ಸರ್ಕಾರಿ ಅಧಿಸೂಚನೆಯ ಮೂಲಕ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿದ್ದ 15.30 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ, ಕಾಂಗ್ರೆಸ್‌ ಶಾಸಕ ಆರ್‌ ವಿ ದೇಶಪಾಂಡೆ ಅವರನ್ನು ಪ್ರಥಮ ಆರೋಪಿಯನ್ನಾಗಿಯೂ, ಬಿ ಎಸ್‌ ಯಡಿಯೂರಪ್ಪ ಅವರನ್ನು ಎರಡನೇ ಆರೋಪಿಯನ್ನಾಗಿಯೂ ಮಾಡಿ ಒಟ್ಟು ಹತ್ತು ಮಂದಿಯ ವಿರುದ್ಧ ವಾಸುದೇವ ರೆಡ್ಡಿ ದಾವೆ ಹೂಡಿದ್ದರು.

ಇದನ್ನು ಪರಿಗಣಿಸಿದ್ದ ಬೆಂಗಳೂರಿನ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರು 2015ರ ಫೆಬ್ರವರಿ 18ರಂದು ದೇಶಪಾಂಡೆ ಮತ್ತು ಯಡಿಯೂರಪ್ಪ ಅವರ ವಿರುದ್ಧ ತನಿಖೆಗೆ ಆದೇಶಿಸಿದ್ದರು. ಉಳಿದವರ ವಿರುದ್ಧದ ಆರೋಪವನ್ನು ನ್ಯಾಯಾಲಯ ಕೈಬಿಟ್ಟಿತ್ತು. ಆರ್‌ ವಿ ದೇಶಪಾಂಡೆ ಅವರು ತಮ್ಮ ವಿರುದ್ಧ ಆರೋಪವನ್ನು ನಿರಾಕರಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನು ಪುರಸ್ಕರಿಸಿದ್ದ ಹೈಕೋರ್ಟ್‌, 2015ರ ಅಕ್ಟೋಬರ್‌ 9ರಂದು ದೇಶಪಾಂಡೆ ಅವರನ್ನು ಆರೋಪ ಮುಕ್ತಗೊಳಿಸಿತ್ತು.

ಈ ಮಧ್ಯೆ, ತಮ್ಮ ವಿರುದ್ಧದ ಆರೋಪವನ್ನು ಪ್ರಶ್ನಿಸಿ ಯಡಿಯೂರಪ್ಪ 2015ರ ಫೆಬ್ರವರಿ 18ರಂದು ಹೈಕೋರ್ಟ್‌ ಮೆಟ್ಟಿಲೇರಿದ್ದರಾದರೂ ನ್ಯಾಯಾಲಯವು ಬಿಎಸ್‌ವೈ ಮನವಿಯನ್ನು 2020ರ ಡಿಸೆಂಬರ್‌ 22ರಂದು ವಜಾ ಮಾಡಿತ್ತು. ಹೀಗಾಗಿ, ಇಡೀ ಪ್ರಕರಣದಲ್ಲಿ ಯಡಿಯೂರಪ್ಪ ಏಕೈಕ ಆರೋಪಿಯಾಗಿ ಉಳಿದ್ದಾರೆ. ಈ ನಡುವೆ ಲೋಕಾಯುಕ್ತ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 2021ರ ಫೆಬ್ರವರಿ 23ರಂದು ಅಂತಿಮ ಬಿ ರಿಪೋರ್ಟ್‌ ಸಲ್ಲಿಸಿದ್ದರು. ಇದನ್ನು ತಿರಸ್ಕರಿಸಿದ್ದ ನ್ಯಾಯಾಲಯವು ಹೆಚ್ಚುವರಿ ಅಂತಿಮ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ದೂರುದಾರರ ಪ್ರತಿಭಟನಾ ಮನವಿ ಆಲಿಸಿದ್ದ ನ್ಯಾಯಾಲಯವು ಮತ್ತೊಮ್ಮೆ 2021ರ ಸೆಪ್ಟೆಂಬರ್‌ 17ರಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಹೆಚ್ಚುವರಿ ಬಿ ಅಂತಿಮ ವರದಿಯನ್ನು ತಿರಸ್ಕರಿಸಿದ್ದು, ಯಡಿಯೂರಪ್ಪ ವಿರುದ್ಧದ ಆರೋಪವನ್ನು ಪರಿಗಣಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶ ಮಾಡಿದೆ.

ಯಡಿಯೂರಪ್ಪ ವಿರುದ್ಧದ ಆರೋಪವೇನು?

ಜೆಡಿಎಸ್‌ ಜೊತೆಗೂಡಿ ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಬಿಜೆಪಿಯ ಬಿ ಎಸ್‌ ಯಡಿಯೂರಪ್ಪ ಅವರು 3.2.2006 ಮತ್ತು 8.10.2007ರ ವರೆಗೆ ಉಪ ಮುಖ್ಯಮಂತ್ರಿಯಾಗಿದ್ದರು. ಸಾರ್ವಜನಿಕ ಹಿತಾಸಕ್ತಿಯ ಹೊರತಾಗಿ ಯಡಿಯೂರಪ್ಪ ಅವರು ಅಕ್ರಮವಾಗಿ ಜಮೀನು ಡಿನೋಟಿಫಿಕೇಶನ್‌ ಮಾಡಿದ್ದು, ಇದು ಕಾನೂನುಬಾಹಿರ. ಈ ಮೂಲಕ ತಮ್ಮ ಸಾರ್ವಜನಿಕ ಕಚೇರಿಯನ್ನು ಸಾರ್ವಜನಿಕ ಹಿತಾಸಕ್ತಿ ವಿರುದ್ಧವಾಗಿ ದುರುಪಯೋಗ ಮಾಡಿಕೊಂಡು ಸರ್ಕಾರದ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗೆ ವರ್ಗಾಯಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಖಾಸಗಿ ವ್ಯಕ್ತಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂಬುದು ದೂರುದಾರರ ಆರೋಪವಾಗಿದೆ.

ಬೆಂಗಳೂರು-ಬೆಳ್ಳಂದೂರು, ದೇವರಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ ಮತ್ತು ಅಮಾನಿ ಬೆಲ್ಲಂದೂರು ಖಾನೆ ಪ್ರದೇಶದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ (ಕೆಐಎಡಿಬಿ) ಕಾಯಿದೆ 1966ರ ಸೆಕ್ಷನ್‌ 28(1)ರ ಅಡಿ 434 ಎಕರೆ ಭೂಮಿ ವಶಪಡಿಸಿಕೊಳ್ಳಲು 2001ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಬೆಂಗಳೂರು ಮತ್ತು ಕರ್ನಾಟಕಕ್ಕೆ ಮೂಲಸೌಕರ್ಯ ಕಾರಿಡಾರ್‌ ನಿರ್ಮಿಸುವುದು ಭೂಮಿ ವಶಪಡಿಸಿಕೊಂಡಿದ್ದರ ಹಿಂದಿನ ಉದ್ದೇಶವಾಗಿತ್ತು. ಅಂತೆಯೇ 2004ರ ಮೇ 7ರಂದು ಕೆಐಎಡಿಬಿ ಕಾಯಿದೆ ಸೆಕ್ಷನ್‌ 28(4)ರ ಅಡಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.

ಆದರೆ, ಈ ಅಂತಿಮ ಅಧಿಸೂಚನೆಗೆ ಒಳಪಟ್ಟ ಭೂಮಿಯನ್ನು ಯಡಿಯೂರಪ್ಪ ಅವರು ಅಕ್ರಮವಾಗಿ ಡಿನೋಟಿಫಿಕೇಶನ್‌ ಮಾಡಿದ್ದು, ಖಾಸಗಿ ಅವರಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂಬುದು ದೂರುದಾರರ ಆರೋಪವಾಗಿದೆ.

Also Read
ಮತ್ತೊಂದು ಡಿನೋಟಿಫಿಕೇಷನ್‌ ಪ್ರಕರಣ: ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಕಾರ, ಬಿಎಸ್‌ವೈಗೆ ಮತ್ತೆ ಹಿನ್ನೆಡೆ

ಯಡಿಯೂರಪ್ಪ ಉಪಮುಖ್ಯಮಂತ್ರಿಯಾದ ತಕ್ಷಣ ಕೆಲವು ಭೂ ಮಾಲೀಕರು ಎಚ್‌ ಮುನಿರೆಡ್ಡಿ ನೇತೃತ್ವದಲ್ಲಿ ಕೆಐಎಡಿಬಿಗೆ ತಮ್ಮ ಭೂಮಿಯನ್ನು ಡಿನೋಟಿಫೈ ಮಾಡುವಂತೆ ಕೋರಿಕೆ ಸಲ್ಲಿಸಿದ್ದರು. ಇದನ್ನು ಪರಿಶೀಲಿಸುವಂತೆ ಕೆಐಎಡಿಬಿಗೆ ಸೂಚಿಸಿದ್ದ ಯಡಿಯೂರಪ್ಪ ಅವರು ಪ್ರಧಾನ ಕಾರ್ಯದರ್ಶಿ ಅಭಿಪ್ರಾಯ ತಿಳಿಸಬೇಕು ಎಂದು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಐಎಡಿಬಿ ಮುಖ್ಯ ನಿರ್ವಹಣಾಧಿಕಾರಿ ಅವರು ಭೂಮಾಲೀಕರ ಮನವಿ ಅನರ್ಹವಾಗಿದೆ. ಇದರಿಂದ ಸರ್ಕಾರಕ್ಕೆ ಹೇಗೆ ನಷ್ಟವಾಗಲಿದೆ ಎಂಬುದರ ಕುರಿತು ವಿಸ್ತೃತ ವರದಿ ಸಲ್ಲಿಸಿದ್ದರು. ಅದಾಗ್ಯೂ, ನಕಲಿ, ಅಪ್ರಾಮಾಣಿಕ ಮತ್ತು ದೋಷಪೂರಿತ ವಿವರಣೆಗಳನ್ನು ಆಧರಿಸಿ 2006ರ ಜೂನ್‌ 16ರಂದು ಯಡಿಯೂರಪ್ಪ ಅವರು ಖಾಸಗಿ ವ್ಯಕ್ತಿಗಳಿಗೆ ಭೂಮಿಯನ್ನು ಡಿನೋಟಿಫೈ ಮಾಡಿಕೊಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಕಾರಿಡಾರ್‌ ನಿರ್ಮಿಸಲು ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು, ಅದರಲ್ಲೂ ವರ್ತುಲ ರಸ್ತೆಗೆ ಸೇರಿದ ಭೂಮಿಯನ್ನು ಡಿನೋಟಿಫೈ ಮಾಡುವುದರಿಂದ ಮೂಲಸೌಕರ್ಯ ಸಂಪರ್ಕಕ್ಕೆ ಎರವಾಗಲಿದ್ದು, ಸರ್ಕಾರಕ್ಕೆ ವೆಚ್ಚ ಹೆಚ್ಚಾಗಲಿದೆ ಎಂದು ತಜ್ಞರ ಸಮಿತಿಯು ಆಕ್ಷೇಪಿಸಿತ್ತು ಎಂದು ದೂರುದಾರರು ಪೀಠದ ಗಮನಕ್ಕೆ ತಂದಿದ್ದರು. ಇದೆಲ್ಲವನ್ನೂ ನ್ಯಾಯಾಲಯ ಪರಿಗಣಿಸಿದೆ.

Attachment
PDF
Vasudev Reddy V. B S Yediyurappa.pdf
Preview

Related Stories

No stories found.
Kannada Bar & Bench
kannada.barandbench.com