Sunny leone
Sunny leone  Facebook
ಸುದ್ದಿಗಳು

ವಂಚನೆ ಪ್ರಕರಣ: ನಟಿ ಸನ್ನಿ ಲಿಯೋನ್‌ಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದ ಕೇರಳ ಹೈಕೋರ್ಟ್

Bar & Bench

ನಟಿ ಸನ್ನಿ ಲಿಯೋನ್ (ಕರಣ್‌ಜಿತ್‌ ಕೌರ್ ವೋಹ್ರಾ), ಆಕೆಯ ಪತಿ ಡೇನಿಯಲ್ ವೆಬರ್ ಹಾಗೂ ಅವರ ಉದ್ಯೋಗಿಯೊಬ್ಬರ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣವನ್ನು ರದ್ದುಗೊಳಿಸುವುದು ಸೂಕ್ತ ಎಂದು ಕೇರಳ ಹೈಕೋರ್ಟ್‌ ಗುರುವಾರ ತಿಳಿಸಿದೆ [ಕರಣ್‌ಜಿತ್‌ ಕೌರ್ ವೋಹ್ರಾ ಮತ್ತಿತರರು ಹಾಗೂ ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಸನ್ನಿ ಅವರು ಕ್ರಿಮಿನಲ್‌ ಅಪರಾಧ ಎಸಗಿದಂತೆ ತೋರುತ್ತಿಲ್ಲ. ಅವರಿಗೆ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ನ್ಯಾ. ಬೆಚು ಕುರಿಯನ್‌ ಥಾಮಸ್‌ ಹೇಳಿದರು.

"ಇದರಲ್ಲಿ ಕ್ರಿಮಿನಲ್ ಅಪರಾಧ ಯಾವುದು? ನೀವು ಆ ವ್ಯಕ್ತಿಗೆ (ಸನ್ನಿ ಲಿಯೋನ್) ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದೀರಿ. ಇದನ್ನು ರದ್ದುಗೊಳಿಸುವುದು ಸೂಕ್ತ" ಎಂದು ನ್ಯಾಯಾಲಯ ಹೇಳಿತು. ಆದರೂ ತನಿಖೆ ಮುಂದುವರಿಸಬಹುದು ಎಂದು ತಿಳಿಸಿದ ನ್ಯಾಯಾಲಯ ಪ್ರಕರಣವನ್ನು ಮಾರ್ಚ್ 31ಕ್ಕೆ ಮುಂದೂಡಿತು. ಈ ಮೂವರ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆಗೆ ನ್ಯಾಯಾಲಯ ನವೆಂಬರ್ 16, 2022ರಲ್ಲಿ ತಡೆ ನೀಡಿತ್ತು.

ಕೇರಳ ಮೂಲದ ಕಾರ್ಯಕ್ರಮ ವ್ಯವಸ್ಥಾಪಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ತಮ್ಮ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಮತ್ತು ಪ್ರದರ್ಶನ ನೀಡಲು ಸನ್ನಿ ಲಿಯೋನ್‌ ಅವರಿಗೆ ಲಕ್ಷಾಂತರ ರೂಪಾಯಿ ಪಾವತಿಸಿದ್ದರೂ ಅವರು ಪಾಲ್ಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಐಪಿಸಿಯ 406 (ನಂಬಿಕೆ ದ್ರೋಹ), 420 (ವಂಚನೆ) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಎಸಗಿದ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಹಿಂದೆ ಇದೇ ಆರೋಪಗಳನ್ನಿರಿಸಿಕೊಂಡು ದೂರುದಾರರು ಸಿವಿಲ್‌ ಮೊಕದ್ದಮೆಯನ್ನು ದಾಖಲಿಸಿದ್ದರಾದರೂ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಇದೇ ವರ್ಷದ ಜುಲೈನಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿತ್ತು. ಹೀಗಾಗಿ ತಮ್ಮ ವಿರುದ್ಧದ ಮೊಕದ್ದಮೆ ರದ್ದುಗೊಳಿಸಬೇಕು ಎಂದು ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.