Jitendra Tyagi (Waseem Rizvi) and Supreme Court 
ಸುದ್ದಿಗಳು

ಶಾಂತಿಯಿಂದ ಒಟ್ಟಿಗೆ ಬದುಕಿ, ಜೀವನ ಆನಂದಿಸಿ: ದ್ವೇಷ ಭಾಷಣ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್

ಹರಿದ್ವಾರ ಧರ್ಮ ಸಂಸದ್ನಲ್ಲಿ ದ್ವೇಷ ಭಾಷಣ ಮಾಡಿ ಬಂಧಿತರಾದ ವಸೀಂ ರಿಜ್ವಿ ಅವರ (ಈಗ ಜಿತೇಂದ್ರ ತ್ಯಾಗಿ) ಜಾಮೀನು ಅರ್ಜಿ ಕುರಿತು ನೋಟಿಸ್ ಜಾರಿ ಮಾಡಿದ ಪೀಠ.

Bar & Bench

ಡಿಸೆಂಬರ್ 2021ರಲ್ಲಿ ನಡೆದಿದ್ದ ಹರಿದ್ವಾರ ಧರ್ಮ ಸಂಸದ್‌ನಲ್ಲಿ ದ್ವೇಷಭಾಷಣ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಜಿತೇಂದ್ರ ತ್ಯಾಗಿ (ಹಿಂದಿನ ವಸೀಮ್ ರಿಜ್ವಿ) ಜಾಮೀನು ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಸಮುದಾಯಗಳ ನಡುವೆ ಶಾಂತಿ ಮತ್ತು ಪ್ರೀತಿಯ ಭಾವ ಇರಲಿ ಎಂದು ಕಿವಿಮಾತು ಹೇಳಿತು. [ತ್ಯಾಗಿ ಅಲಿಯಾಸ್ ವಾಸಿಂ ರಿಜ್ವಿ ಮತ್ತು ಉತ್ತರಾಖಂಡ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಇಂತಹ ಭಾಷಣಗಳು ಸಮಾಜವನ್ನು ಹಾಳು ಮಾಡುತ್ತವೆ ಎಂದು ನ್ಯಾಯಮೂರ್ತಿಗಳಾದ ಅಜಯ್‌ ರಾಸ್ತೋಗಿ ಮತ್ತು ವಿಕ್ರಮ್‌ ನಾಥ್‌ ಅವರಿದ್ದ ಪೀಠ ಹೇಳಿತು. ಸೌಹಾರ್ದಯುತವಾಗಿ ಬಾಳಲು ಜನರಿಗೆ ಕರೆ ನೀಡಿದ ನ್ಯಾಯಾಲಯ “ಶಾಂತಿಯಿಂದ ಒಟ್ಟಿಗೆ ಬದುಕಿ, ಜೀವನ ಆನಂದಿಸಿ” ಎಂದು ನುಡಿಯಿತು.

ಇದೇ ವೇಳೆ ರಿಜ್ವಿ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಉತ್ತರಾಖಂಡ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿತು. ಇತ್ತೀಚೆಗಷ್ಟೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ತ್ಯಾಗಿ ಅವರನ್ನು ಹರಿದ್ವಾರ ಧರ್ಮ ಸಂಸದ್‌ನಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಡಿ ಉತ್ತರಾಖಂಡ ಪೊಲೀಸರು ಕಳೆದ ಜನವರಿಯಲ್ಲಿ ಬಂಧಿಸಿದ್ದರು.

ತ್ಯಾಗಿ ಪರವಾಗಿ ಹಿರಿಯ ನ್ಯಾಯವಾದಿ ಸಿದ್ಧಾರ್ಥ್‌ ಲೂತ್ರಾ ವಾದ ಮಂಡಿಸಿದರು. ದೂರುದಾರರ ಪರ ವಕೀಲರು ಜಾಮೀನು ಅರ್ಜಿಯನ್ನು ವಿರೋಧಿಸಿದರು. ಸಂಕ್ಷಿಪ್ತವಾಗಿ ವಾದ ಆಲಿಸಿದ ನ್ಯಾಯಾಲಯ ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ ಮೇ 17ಕ್ಕೆ ಪ್ರಕರಣ ಮುಂದೂಡಿತು.