ಶಿವಮೊಗ್ಗದ ಬಜರಂಗ ದಳದ ಕಾರ್ಯಕರ್ತ ಹರ್ಷ ಅಲಿಯಾಸ್ ಹಿಂದೂ ಹರ್ಷ ಕೊಲೆ ಮಾಡಿದ ಆರೋಪಿಗಳಿಗೆ ಕಾರು ನೀಡಿದ್ದ ಆರೋಪ ಎದುರಿಸುತ್ತಿರುವ ಜಾಫರ್ ಸಾದಿಕ್ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಈಚೆಗೆ ಜಾಮೀನು ನಿರಾಕರಿಸಿದೆ.
ಪ್ರಕರಣದಲ್ಲಿ ಹತ್ತನೇ ಆರೋಪಿಯಾಗಿರುವ ಜಾಫರ್ ಸಾದಿಕ್ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಸಿ ಎಂ ಅವರು ಜಾಮೀನು ಕೋರಿಕೆಯನ್ನು ತಿರಸ್ಕರಿಸಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಲಾಗದು ಎಂಬುದನ್ನು ಜಾಮೀನು ಮನವಿಯಲ್ಲಿ ಅರ್ಜಿದಾರರು ಪ್ರಶ್ನಿಸಿಲ್ಲ. ಹರ್ಷ ಕೊಲೆ ಪ್ರಕರಣದಲ್ಲಿ ತಾನು ನೇರವಾಗಿ ಭಾಗಿಯಾಗಿಲ್ಲ. ಎಫ್‌ಐಆರ್‌ನಲ್ಲಿ ತಮ್ಮ ಹೆಸರು ಉಲ್ಲೇಖಿಸಲಾಗಿಲ್ಲ ಎಂದು ವಾದಿಸಿದ್ದಾರೆ. ಕೊಲೆ ಆರೋಪಿಗಳಿಗೆ ತಾನು ಕಾರು ನೀಡಿದ್ದೆ ಎಂಬ ಆರೋಪ ಮಾಡಲಾಗಿದೆ. ಹೀಗಾಗಿ, ಜಾಮೀನಿಗೆ ಅರ್ಹ ಎಂದು ವಾದಿಸಿದ್ದಾರೆ. ಇತ್ತ ತನಿಖಾಧಿಕಾರಿಯು ಆರೋಪಿಯು ದೊಡ್ಡ ಪಿತೂರಿಯ ಭಾಗವಾಗಿದ್ದಾರೆ ಎಂಬುದಕ್ಕೆ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಇನ್ನೂ ತನಿಖೆ ನಡೆಯುತ್ತಿದೆ. ಪಿತೂರಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಇನ್ನೂ ಹಲವು ದಾಖಲೆಗಳನ್ನು ಸಂಗ್ರಹಿಸಬೇಕಿದೆ. ಯುಎಪಿಎ ಸೆಕ್ಷನ್ 43-D(5) ಜಾಮೀನು ನೀಡಲು ನಿರ್ಬಂಧವಿದೆ. ಶಿವಮೊಗ್ಗದವರಾದ ಅರ್ಜಿದಾರರು ಹಾಲಿ ನ್ಯಾಯಾಲಯದ ಹೊರಗಿನವರಾಗಿದ್ದು, ಜಾಮೀನು ನೀಡಿದರೆ ವ್ಯಾಪ್ತಿಯಿಂದ ನಾಪತ್ತೆಯಾಗುವ ಸಾಧ್ಯತೆ ಇದೆ. ಅಲ್ಲದೇ, ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಹೀಗಾಗಿ, ಜಾಮೀನು ನೀಡಲಾಗದು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಎನ್‌ಐಎ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರು “ಅರ್ಜಿದಾರ ಜಾಫರ್ ಸಾದಿಕ್ ಅವರು ಶಿವಮೊಗ್ಗದಲ್ಲಿ ಕಾರು ಮಾರಾಟ ಉದ್ಯಮ ನಡೆಸುತ್ತಿದ್ದು, ಮಾರಕಾಸ್ತ್ರಗಳನ್ನು ಖರೀದಿಸಲು ಮತ್ತು ಅವುಗಳನ್ನು ಸಾಗಿಸಲು ಮತ್ತು ಹರ್ಷನನ್ನು ಬೆನ್ನತ್ತಲು ಮಾರುತಿ ಸ್ವಿಫ್ಟ್ ಕಾರ್ ಅನ್ನು ಆರೋಪಿಗಳಿಗೆ ನೀಡಿದ್ದರು. ಈ ಮೂಲಕ, ಮಾರಕಾಸ್ತ್ರಗಳನ್ನು ಸಂಗ್ರಹಿಸಲು ಇತರೆ ಆರೋಪಿಗಳಿಗೆ ಸಹಕರಿಸಿದ್ದರು. ಆರನೇ ಆರೋಪಿ ಜೊತೆಗೂಡಿ ತಪ್ಪಿಸಿಕೊಳ್ಳಲು ಇನ್ನೊಂದು ಕಾರನ್ನು ಸಾದಿಕ್ ಬಳಕೆ ಮಾಡಿದ್ದರು. ಸಾದಿಕ್ ದೊಡ್ಡ ಪಿತೂರಿಯ ಭಾಗವಾಗಿದ್ದಾರೆ. ಹೀಗಾಗಿ, ಅವರಿಗೆ ಜಾಮೀನು ನೀಡಬಾರದು” ಎಂದು ಆಕ್ಷೇಪಿಸಿದ್ದರು. ಸಾದಿಕ್ ಪರವಾಗಿ ವಕೀಲ ಚಿದಂಬರ ವಾದಿಸಿದ್ದರು.
2022ರ ಫೆಬ್ರುವರಿ 20ರಂದು ರಾತ್ರಿ 9 ಗಂಟೆಯ ವೇಳೆಯಲ್ಲಿ ಶಿವಮೊಗ್ಗದಲ್ಲಿ ಹರ್ಷ ಹತ್ಯೆಯಾಗಿತ್ತು. ಇದುವರೆಗೆ ಆರೋಪಿಗಳಾದ ರಿಹಾನ್ ಶರೀಫ್, ಮೊಹಮ್ಮದ್ ಖಾಸಿಫ್, ಅಸೀಫ್ ಉಲ್ಲಾ ಖಾನ್, ಅಬ್ದುಲ್ ಅಫ್ವಾನ್, ಸಯದ್ ಫಾರೂಕ್, ಅಬ್ದುಲ್ ಖಾದರ್ ಜಿಲಾನ್, ರೋಷನ್, ಫರಾಜ್ ಪಾಷಾ, ಸಯದ್ ನದೀಮ್ ಮತ್ತು ಜಾಫರ್ ಸಾದಿಕ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ)–1967ರ ಕಲಂ 43ಡಿ (2)(ಬಿ) ಅಡಿಯಲ್ಲಿ 90 ರಿಂದ 180 ದಿನಗಳಿಗೆ ವಿಸ್ತರಿಸಿ ಕಳೆದ ತಿಂಗಳು ವಿಶೇಷ ನ್ಯಾಯಾಲಯವು ಆದೇಶ ಮಾಡಿತ್ತು.