ಹರ್ಷ ಕೊಲೆ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನವನ್ನು 90ರಿಂದ 180 ದಿನಗಳಿಗೆ ವಿಸ್ತರಿಸಿದ ಎನ್‌ಐಎ ವಿಶೇಷ ನ್ಯಾಯಾಲಯ

ಎನ್‌ಐಎ ಪರ ವಕೀಲ ಪಿ ಪ್ರಸನ್ನಕುಮಾರ್‌ ಅವರು ಸಲ್ಲಿಸಿದ್ದ ಮನವಿಯನ್ನು 69ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಾ. ಕಸನಪ್ಪ ನಾಯ್ಕ್‌ ವಿಚಾರಣೆ ನಡೆಸಿದರು.
Harsha
Harsha

ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಹತ್ತು ಮಂದಿ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಹೆಚ್ಚಿನ ತನಿಖೆಗಾಗಿ 90 ದಿನಗಳಿಂದ 180 ದಿನಗಳಿಗೆ ಹೆಚ್ಚಿಸಬೇಕೆಂಬ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮನವಿಯನ್ನು ವಿಶೇಷ ನ್ಯಾಯಾಲಯವು ಬುಧವಾರ ಪುರಸ್ಕರಿಸಿದೆ.

ಎನ್‌ಐಎ ಪರ ವಕೀಲ ಪಿ ಪ್ರಸನ್ನಕುಮಾರ್‌ ಅವರು ಸಲ್ಲಿಸಿದ್ದ ಮನವಿಯನ್ನು 69ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಾ. ಕಸನಪ್ಪ ನಾಯ್ಕ್‌ ವಿಚಾರಣೆ ನಡೆಸಿದರು.

ಎನ್‌ಐಎ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್‌ ಅವರು ಪ್ರಕರಣದಲ್ಲಿ ಈಗಾಗಲೇ ಆರೋಪಿಗಳ ಗುರುತು ಪತ್ತೆಯ ಪೆರೇಡ್‌ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಆದರೆ, ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ. ಅಂತೆಯೇ, ಆರೋಪಿಗಳು ಬಳಸುತ್ತಿದ್ದ ಎಲೆಕ್ಟ್ರಾನಿಕ್‌ ವಸ್ತುಗಳು ಮತ್ತು ಸಿಡಿಆರ್ ವಿಶ್ಲೇಷಣೆಯು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇನ್ನೂ ನಡೆಯಬೇಕಿದೆ ಎಂದರು.

ಹತ್ಯೆ ನಡೆಸಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಲು ನಡೆಸಲಾದ ಪಿತೂರಿ ಮತ್ತು ಸಂಚನ್ನು ಕಾರ್ಯಗತಗೊಳಿಸಿದ ಬಗೆ, ಇದಕ್ಕಾಗಿ ಎಲ್ಲಿಂದ ಹಣಕಾಸಿನ ನೆರವು ಪಡೆಯಲಾಯಿತು ಎಂಬುದನ್ನೆಲ್ಲಾ ಪತ್ತೆ ಹಚ್ಚಬೇಕಿದೆ. ಹೀಗಾಗಿ, ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ)–1967ರ ಕಲಂ 43ಡಿ (2)(ಬಿ) ಅಡಿಯಲ್ಲಿ 180 ದಿನಗಳಿಗೆ ವಿಸ್ತರಿಸಿ ಆದೇಶಿಸಬೇಕು ಎಂದು ಕೋರಿದರು.

ಇದಕ್ಕೆ ಸಮ್ಮತಿಸಿದ ನ್ಯಾಯಾಲಯವು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು 180 ದಿನಗಳಿಗೆ ವಿಸ್ತರಿಸಿ ಆದೇಶಿಸಿತು. 2022ರ ಫೆಬ್ರುವರಿ 20ರಂದು ರಾತ್ರಿ 9 ಗಂಟೆಯ ವೇಳೆಯಲ್ಲಿ ಶಿವಮೊಗ್ಗದಲ್ಲಿ ಹರ್ಷ ಹತ್ಯೆಯಾಗಿತ್ತು. ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಲಾಗಿದ್ದು ಇದುವರೆಗೆ ಆರೋಪಿಗಳಾದ ರಿಹಾನ್‌ ಶರೀಫ್‌, ಮೊಹಮ್ಮದ್‌ ಖಾಸಿಫ್‌, ಅಸೀಫ್‌ ಉಲ್ಲಾ ಖಾನ್‌, ಅಬ್ದುಲ್‌ ಅಫ್ವಾನ್‌, ಸಯದ್‌ ಫಾರೂಕ್‌, ಅಬ್ದುಲ್‌ ಖಾದರ್‌ ಜಿಲಾನ್‌, ರೋಷನ್‌, ಫರಾಜ್‌ ಪಾಷಾ, ಸಯದ್‌ ನದೀಮ್‌ ಮತ್ತು ಜಾಫರ್‌ ಸಾದಿಕ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

Also Read
[ಹರ್ಷ ಹತ್ಯೆ] ಐವರು ಆರೋಪಿಗಳನ್ನು ಮೇ 9ರವರೆಗೆ ವಿಚಾರಣೆಗಾಗಿ ಎನ್‌ಐಎ ಪೊಲೀಸರ ಕಸ್ಟಡಿಗೆ ನೀಡಿದ ವಿಶೇಷ ನ್ಯಾಯಾಲಯ

ಸಾಕ್ಷಿ ದಾಖಲಿಸಿಕೊಳ್ಳಲಿರುವ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌: ಎನ್‌ಐಎ ವಿಶೇಷ ನ್ಯಾಯಾಲಯವು ವಿಚಾರಣಾಧೀನ ನ್ಯಾಯಾಲಯವಾಗಿರುವುದರಿಂದ ಇಲ್ಲಿ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗದು. ಹೀಗಾಗಿ, ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಜವಾಬ್ದಾರಿಯನ್ನು ಬೆಂಗಳೂರಿನ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರಿಗೆ ವಹಿಸಲಾಗಿದೆ. ಸಾಕ್ಷಿ ದಾಖಲಿಸಿಕೊಂಡ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಆದಷ್ಟು ಶೀಘ್ರ ಈ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ಗೆ ನಿರ್ದೇಶನ ನೀಡಲಾಗಿದೆ. ವಿಶೇಷ ಸರ್ಕಾರಿ ಅಭಿಯೋಜಕರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ಸಾಕ್ಷಿಗಳನ್ನು ಈ ಆದೇಶದ ಜೊತೆಗೆ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ಗೆ ಕಳುಹಿಸಿಕೊಡಬೇಕು ಎಂದು ಪೀಠವು ಆದೇಶದಲ್ಲಿ ಹೇಳಿದೆ.

Related Stories

No stories found.
Kannada Bar & Bench
kannada.barandbench.com