Preetham J. Gowda and Karnataka HC 
ಸುದ್ದಿಗಳು

ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಹಂಚಿಕೆ: ಮಾಜಿ ಶಾಸಕ ಪ್ರೀತಮ್‌ ಗೌಡ ವಿರುದ್ಧ ತನಿಖೆ ಮುಂದುವರಿಯಲಿ ಎಂದ ಹೈಕೋರ್ಟ್‌

“ತನಿಖೆಗೆ ಸಮನ್ವಯ ಪೀಠವು ತಡೆ ನೀಡಿಲ್ಲ. ತನಿಖೆ ಮುಂದುವರಿಯಬೇಕು ಅದಕ್ಕೆ ಪ್ರೀತಮ್‌ ಗೌಡ ಸಹಕರಿಸಬೇಕು. ಬಂಧನದಿಂದ ರಕ್ಷಣೆ ಮಾಡಿರುವ ಆದೇಶ ಮುಂದವರಿಯಲಿದೆ” ಎಂದಿರುವ ನ್ಯಾಯಾಲಯ.

Bar & Bench

ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪದ ಸಂಬಂಧ ಹಾಸನದ ಬಿಜೆಪಿಯ ಮಾಜಿ ಶಾಸಕ ಪ್ರೀತಮ್‌ ಗೌಡ ಅವರ ವಿರುದ್ಧ ತನಿಖೆ ಮುಂದುವರಿಯಬೇಕು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ನಡೆಸುತ್ತಿದೆ.

ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಬೆಂಗಳೂರಿ ಸೈಬರ್‌ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ನಂತರದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಪ್ರೀತಮ್‌ ಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಪ್ರೀತಮ್‌ ಗೌಡ ಪರ ವಕೀಲ ಸಂದೀಪ್‌ ಪಾಟೀಲ್‌ ಅವರು “ಅರ್ಜಿಯನ್ನು ದಸರಾ ರಜೆಯ ಬಳಿಕ ವಿಚಾರಣೆಗೆ ತೆಗೆದುಕೊಳ್ಳಬೇಕು. ನಿನ್ನೆ ಪ್ರೀತಮ್‌ ಗೌಡ ವಿಚಾರಣೆಯಲ್ಲಿ ಭಾಗಿಯಾಗಿ, ಎಸ್‌ಐಟಿಯ ಮುಂದೆ ಹೇಳಿಕೆ ದಾಖಲಿಸಿದ್ದಾರೆ” ಎಂದರು.

ಆಗ ಪೀಠವು “ವಿಚಾರಣೆ ಮುಂದುವರಿಯಲಿ. ಇಲ್ಲಿಯವರೆಗೆ ತನಿಖೆ ಏನಾಗಿದೆ?” ಎಂದು ಪ್ರಾಸಿಕ್ಯೂಷನ್‌ಗೆ ಪ್ರಶ್ನಿಸಿದರು.

ಈ ಮಧ್ಯೆ, ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್‌ ಅವರು “ವಿಡಿಯೊಗಳಿಗೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗೆ ಕಾಯುತ್ತಿದ್ದೇವೆ. ಇದು ಡಿಜಿಟಲ್‌ ಅಪರಾಧ” ಎಂದರು.

ಆಗ ಪೀಠವು “ವಿಚಾರಣೆಯನ್ನು ಅಕ್ಟೋಬರ್‌ 24ಕ್ಕೆ ನಿಗದಿಗೊಳಿಸಲಾಗಿದೆ. ಅಲ್ಲಿಯವರೆಗೆ ಎಫ್‌ಎಸ್‌ಎಲ್‌ ವರದಿ ಬರಬಹುದು” ಎಂದರು. ಅಲ್ಲದೇ, ತನಿಖೆಗೆ ಸಮನ್ವಯ ಪೀಠವು ತಡೆ ನೀಡಿಲ್ಲ. ತನಿಖೆ ಮುಂದುವರಿಯಬೇಕು ಅದಕ್ಕೆ ಪ್ರೀತಮ್‌ ಗೌಡ ಸಹಕರಿಸಬೇಕು. ಬಂಧನದಿಂದ ರಕ್ಷಣೆ ಮಾಡಿರುವ ಆದೇಶ ಮುಂದವರಿಯಲಿದೆ” ಎಂದರು.

ಆಗ ಪ್ರೊ. ಕುಮಾರ್‌ ಅವರು “ಸ್ಥಿತಿಗತಿ ವರದಿ ಸಿದ್ಧವಿದೆ” ಎಂದರು. ಇದನ್ನು ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸುವಂತೆ ಆದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ಅಕ್ಟೋಬರ್‌ 24ಕ್ಕೆ ಮುಂದೂಡಿತು.

ಕಳೆದ ವಿಚಾರಣೆಯಲ್ಲಿ ಪೀಠವು “ಮಾಜಿ ಶಾಸಕ ಪ್ರೀತಮ್‌ ಗೌಡ ಅವರು ಅಶ್ಲೀಲ ವಿಡಿಯೊಗಳನ್ನು ಒಳಗೊಂಡ ಪೆನ್‌ಡ್ರೈವ್‌ ಹಂಚಿಕೆ ಮಾಡಿಸಿದ್ದರೆ ಅದು ದೊಡ್ಡ ಪಾಪ. ಇದರಿಂದ ಸಂತ್ರಸ್ತೆಯರನ್ನು ಅತೀವ ಅವಮಾನಕ್ಕೆ ನೂಕಲಾಗಿದೆ” ಎಂದಿತ್ತು.

ಪ್ರಕರಣದ ಹಿನ್ನೆಲೆ: ಹಾಸನದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಮ್‌ ಗೌಡ ಸೇರಿದಂತೆ ಮತ್ತಿತರರ ವಿರುದ್ಧ ಬೆಂಗಳೂರಿನ ಸೈಬರ್‌ ಅಪರಾಧ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 354ಎ, 354ಡಿ, 354ಬಿ ಮತ್ತು 506ರ ಅಡಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 67, 66ಇ ಅಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನು ವಿಶೇಷ ತನಿಖಾ ದಳದ ತನಿಖೆಗೆ ವಹಿಸಲಾಗಿದೆ. ಇದರ ರದ್ದತಿಯನ್ನು ಪ್ರೀತಮ್‌ ಗೌಡ ಕೋರಿದ್ದಾರೆ.