Preetham J. Gowda and Karnataka HC
Preetham J. Gowda and Karnataka HC

ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಹಂಚಿಕೆಯನ್ನು ಪ್ರೀತಮ್‌ ಗೌಡ ಮಾಡಿಸಿದ್ದರೆ ಅದು ದೊಡ್ಡ ಪಾಪಕೃತ್ಯ: ಹೈಕೋರ್ಟ್‌

“(ಪ್ರೀತಮ್‌ ಗೌಡಗೆ) ಯಾಕೆ ನೋಟಿಸ್‌ ನೀಡಿಲ್ಲ? ಮೊದಲಿಗೆ ಹೈಪ್‌ ಸೃಷ್ಟಿಸುತ್ತೀರಿ. ಆಮೇಲೆ ಏನೂ ಇಲ್ಲ. ಯಾವುದೇ ಆಸಕ್ತಿ ಇಲ್ಲವೇ ಇಲ್ಲ” ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ನ್ಯಾಯಾಲಯ.
Published on

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಶಾಸಕ ಪ್ರೀತಮ್‌ ಗೌಡ ಅವರು ಅಶ್ಲೀಲ ವಿಡಿಯೊಗಳನ್ನು ಒಳಗೊಂಡ ಪೆನ್‌ಡ್ರೈವ್‌ ಹಂಚಿಕೆ ಮಾಡಿಸಿದ್ದರೆ ಅದು ದೊಡ್ಡ ಪಾಪ. ಇದರಿಂದ ಸಂತ್ರಸ್ತೆಯರನ್ನು ತೀರ ಅವಮಾನಕ್ಕೆ ನೂಕಲಾಗಿದೆ” ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಹೇಳಿತು.

ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಬೆಂಗಳೂರಿ ಸೈಬರ್‌ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ನಂತರದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಬಿಜೆಪಿ ಮಾಜಿ ಶಾಸಕ ಪ್ರೀತಮ್‌ ಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿ ಕೈಗೆತ್ತಿಕೊಳ್ಳುತ್ತಿದ್ದಂತೆ ಪೀಠವು “ಈ ಅರ್ಜಿಯು ನ್ಯಾಯಾಲಯದ ಮುಂದೆ ಬರದೇ ನಾಪತ್ತೆಯಾಗಿತ್ತು. ಅದಕ್ಕಾಗಿ ಈ ಅರ್ಜಿಯನ್ನು ಇಂದು ಪಟ್ಟಿ ಮಾಡುವಂತೆ ಸೂಚಿಸಿದ್ದೆ. (ಜೂನ್‌ 28ರಂದು ನ್ಯಾಯಾಲಯವು ಪ್ರೀತಮ್‌ ಗೌಡ ಅವರನ್ನು) ಬಂಧಿಸಬಾರದು ಎಂದು ಆದೇಶಿಸಿದೆ. ಆದರೆ, ಅರ್ಜಿದಾರರು ಜಾಮೀನು ಪಡೆದಿಲ್ಲ” ಎಂದು ಹೇಳಿತು.

ಆಗ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಪ್ರೀತಮ್‌ ಗೌಡ ಅವರನ್ನು ನಾನು ಪ್ರತಿನಿಧಿಸುತ್ತಿದ್ದೇನೆ. ವಾದ ಮಂಡಿಸಲು ನಾನು ಸಿದ್ಧನಿದ್ದೇನೆ. ವಿಶೇಷ ತನಿಖಾ ದಳವು ತನಿಖೆ ಮುಂದುವರಿಸಬಹುದು. ಅದಕ್ಕೆ ನಮ್ಮ ಆಕ್ಷೇಪವಿಲ್ಲ” ಎಂದರು.

ಆಗ ಪೀಠವು “ನೀವು ವಿಚಾರಣೆಗೆ ಸಹಕರಿಸುತ್ತಿಲ್ಲವೇ” ಎಂದು ನಾಗೇಶ್‌ ಅವರನ್ನು ಪ್ರಶ್ನಿಸಿತು. ಇದಕ್ಕೆ ನಾಗೇಶ್‌ ಅವರು “ಎಸ್‌ಐಟಿಯು ವಿಚಾರಣೆಗೆ ಬರುವಂತೆ ನೋಟಿಸ್‌ ಅನ್ನೇ ನೀಡಿಲ್ಲ” ಎಂದರು.

ಆಗ ಪೀಠವು “ಯಾಕೆ ನೋಟಿಸ್‌ ನೀಡಿಲ್ಲ? ಮೊದಲಿಗೆ ಹೈಪ್‌ ಸೃಷ್ಟಿಸುತ್ತೀರಿ. ಆಮೇಲೆ ಏನೂ ಇಲ್ಲ. ಯಾವುದೇ ಆಸಕ್ತಿ ಇಲ್ಲವೇ ಇಲ್ಲ” ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತು.

ಆಗ ಮಧ್ಯಪ್ರವೇಶಿಸಿದ ನಾಗೇಶ್‌ ಅವರು “ಪೆನ್‌ಡ್ರೈವ್‌ ಹಂಚಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಅದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ” ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಆಗ ನ್ಯಾಯಮೂರ್ತಿಗಳು “ಅದು ಸತ್ಯವಿರಬಹುದು. ನೀವು (ಪ್ರೀತಮ್‌ ಗೌಡ) ವಿಡಿಯೋಗಳನ್ನು ಹಂಚಿಕೆ ಮಾಡಿದ್ದರೆ ಅದು ನೀವು ಎಸಗಿರುವ ದೊಡ್ಡ‌ ಪಾಪ. ಏಕೆಂದರೆ ಪ್ರತಿಯೊಬ್ಬ ಮಹಿಳೆಯನ್ನು ಅವಮಾನಕ್ಕೆ ನೂಕಲಾಗಿದೆ” ಎಂದರು.

ಈ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು “ಈ ವಾದವನ್ನು ಕೇಳಿಯೇ ಮಧ್ಯಂತರ ಆದೇಶವನ್ನು ನ್ಯಾಯಾಲಯ ತಿರಸ್ಕರಿಸಿತ್ತು” ಎಂದರು.

Also Read
ಹಾಸನ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣ: ಬಿಜೆಪಿ ಮಾಜಿ ಶಾಸಕ ಪ್ರೀತಮ್‌ ಗೌಡ ಬಂಧಿಸದಂತೆ ಆದೇಶಿಸಿದ ಹೈಕೋರ್ಟ್‌

ಅದಕ್ಕೆ ಸಿ ವಿ ನಾಗೇಶ್‌ ಅವರು “ಮಧ್ಯಂತರ ಆದೇಶವಿದೆ” ಎಂದರು. ಆಗ ಪೀಠವು “ಬಂಧಿಸಬಾರದು ಎಂದಷ್ಟೇ ಹೇಳಲಾಗಿದೆ” ಎಂದಿತು.

ಇದಕ್ಕೆ ನಾಗೇಶ್‌ ಅವರು “ಹಾಗಾದರೆ ಅದು ಮಧ್ಯಂತರ ಆದೇಶವಲ್ಲವೇ?” ಎಂದರು. ಆಗ ಪ್ರೊ. ರವಿವರ್ಮ ಕುಮಾರ್‌ ಅವರು ತಮ್ಮ ಮಧ್ಯಂತರ ಕೋರಿಕೆಯನ್ನು ಮನ್ನಿಸಿಲ್ಲ ಎಂದರು. ಅಂತಿಮವಾಗಿ ಪೀಠವು ಬಂಧಿಸದಂತೆ ನ್ಯಾಯಾಲಯ ಮಾಡಿರುವ ಹಿಂದಿನ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 26ಕ್ಕೆ ಮುಂದೂಡಿತು. 

Also Read
ಅತ್ಯಾಚಾರ ಪ್ರಕರಣ: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿಗಳ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಹಾಸನದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಮ್‌ ಗೌಡ ಸೇರಿದಂತೆ ಮತ್ತಿತರರ ವಿರುದ್ಧ ಬೆಂಗಳೂರಿನ ಸೈಬರ್‌ ಅಪರಾಧ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 354ಎ, 354ಡಿ, 354ಬಿ ಮತ್ತು 506ರ ಅಡಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 67, 66ಇ ಅಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನು ವಿಶೇಷ ತನಿಖಾ ದಳದ ತನಿಖೆಗೆ ವಹಿಸಲಾಗಿದೆ. ಇದರ ರದ್ದತಿಯನ್ನು ಪ್ರೀತಮ್‌ ಗೌಡ ಕೋರಿದ್ದಾರೆ.

Kannada Bar & Bench
kannada.barandbench.com