Ram Bhakt Gopal
Ram Bhakt Gopal twitter.com
ಸುದ್ದಿಗಳು

ದ್ವೇಷ ಭಾಷೆಯು ಸಾಂಕ್ರಾಮಿಕಕ್ಕಿಂತ ಹೆಚ್ಚಿನ ಹಾನಿ ಉಂಟು ಮಾಡುತ್ತದೆ: ಗುರುಗ್ರಾಮ್‌ ನ್ಯಾಯಾಲಯ

Bar & Bench

ಹರಿಯಾಣದ ಮಹಾಪಂಚಾಯತ್‌ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ಮತ್ತು ದ್ವೇಷಭಾಷೆ ಬಳಸಿದ ಆರೋಪ ಎದುರಿಸುತ್ತಿರುವ ರಾಮ್‌ ಭಗತ್‌ ಗೋಪಾಲ್‌ ಜಾಮೀನು ಮನವಿಯನ್ನು ಗುರುಗ್ರಾಮದ ನ್ಯಾಯಾಲಯವು ವಜಾ ಮಾಡಿದೆ.

ಕಠಿಣ ಶಬ್ದಗಳನ್ನು ಒಳಗೊಂಡ ಆದೇಶ ಹೊರಡಿಸಿರುವ ಮ್ಯಾಜಿಸ್ಟ್ರೇಟ್‌ ಮೊಹಮ್ಮದ್‌ ಸಗೀರ್‌ ಅವರು ಕೋಮು ದ್ವೇಷ ಹರಡುವ ಭಾಷಣ ಮಾಡುವವರು ಮತ್ತು ಸಮಾಜದ ಶಾಂತಿ ಕದಡುವವರು ಕೋವಿಡ್‌ ಸಾಂಕ್ರಾಮಿಕಕ್ಕಿಂತ ಹೆಚ್ಚು ಅಪಾಯಕಾರಿ ಎಂದಿದ್ದಾರೆ.

“ಇತ್ತೀಚಿನ ದಿನಗಳಲ್ಲಿ ಧರ್ಮ ಅಥವಾ ಜಾತಿ ಆಧಾರಿತ ದ್ವೇಷದ ಮಾತು ಫ್ಯಾಷನ್ ಆಗಿ ಮಾರ್ಪಟ್ಟಿದೆ. ಪೊಲೀಸರು ಇಂತಹ ಘಟನೆಗಳನ್ನು ಎದುರಿಸಲು ಅಸಹಾಯಕರಾಗಿದ್ದಾರೆ. ಸಾಮಾನ್ಯ ಜನರಲ್ಲಿ ಅಸಾಮರಸ್ಯ ಮತ್ತು ದ್ವೇಷವನ್ನು ಉಂಟುಮಾಡಲು ಪ್ರಯತ್ನಿಸುತ್ತಿರುವ ಇಂತಹ ಜನರು ಸಾಂಕ್ರಾಮಿಕ ರೋಗಕ್ಕಿಂತ ಹೆಚ್ಚಾಗಿ ಈ ದೇಶಕ್ಕೆ ಹಾನಿ ಮಾಡುತ್ತಿದ್ದಾರೆ” ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಆರೋಪಿ ಗೋಪಾಲ್‌, ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ಗುರಿಯಾಗಿಸಿ ದ್ವೇಷ ಭಾಷಣ ಮಾಡಿದ್ದಲ್ಲದೇ, ಆ ಸಮುದಾಯದ ಹೆಣ್ಣು ಮಕ್ಕಳು ಹಾಗೂ ಆ ಸಮುದಾಯದ ಜನರನ್ನು ಅಪಹರಿಸಿ ಕೊಲೆಗೆ ಪ್ರಚೋದಿಸಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು.

“ದ್ವೇಷ ಭಾಷಣವು ತಾರತಮ್ಯ, ಬಹಿಷ್ಕಾರ, ಪ್ರತ್ಯೇಕತೆ, ಗಡೀಪಾರು, ಹಿಂಸೆ ಮತ್ತು ಅತ್ಯಂತ ವಿಪರೀತ ಸಂದರ್ಭಗಳಲ್ಲಿ, ನರಮೇಧದವರೆಗಿನ ದುರ್ಬಲರ ಮೇಲಿನ ವ್ಯಾಪಕವಾದ ದಾಳಿಗೆ ಅಡಿಪಾಯವನ್ನು ಹಾಕುತ್ತದೆ. ದ್ವೇಷ ಭಾಷಣವು ಸಂರಕ್ಷಿತ ಗುಂಪುಗಳು ಪ್ರಮುಖ ವಿಚಾರಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಆ ಮೂಲಕ ನಮ್ಮ ಪ್ರಜಾಪ್ರಭುತ್ವದಲ್ಲಿ ಅವರ ಪೂರ್ಣ ಭಾಗವಹಿಸುವಿಕೆಗೆ ಗಂಭೀರ ತೊಡರಾಗುತ್ತುದೆ” ಎಂದು ನ್ಯಾಯಾಲಯ ಹೇಳಿದೆ.

ಆರೋಪಿಯ ಕೃತ್ಯವು ದ್ವೇಷದ ಮಾತುಗಳಿಗೆ ಸಮನಾಗಿದೆ. ಅದು "ನಮ್ಮ ಸಮಾಜದ ನಾಶಕ್ಕೆ" ಕಾರಣವಾಗಬಹುದು ಎಂದು ಹೇಳಿರುವ ನ್ಯಾಯಾಲಯವು ಜಾಮೀನು ಮನವಿಯನ್ನು ವಜಾ ಮಾಡಿದೆ. “ನಿರ್ದಿಷ್ಟ ಧಾರ್ಮಿಕ ಸಮುದಾಯದ ಹುಡುಗಿಯರು ಮತ್ತು ವ್ಯಕ್ತಿಗಳನ್ನು ಅಪಹರಿಸಿ ಕೊಲ್ಲುವುದನ್ನು ಪ್ರಚೋದಿಸುವ ಆರೋಪಿಯ ವರ್ತನೆಯೇ ಒಂದು ಬಗೆಯ ಹಿಂಸಾಚಾರವಾಗಿದೆ. ಅಂತಹ ಜನರು ಮತ್ತು ಅವರ ಪ್ರಚೋದನಕಾರಿ ಭಾಷಣಗಳು ನಿಜವಾದ ಪ್ರಜಾಪ್ರಭುತ್ವ ಮನೋಭಾವದ ಬೆಳವಣಿಗೆಗೆ ಅಡ್ಡಿಯಾಗಿವೆ. ಇದು ಧರ್ಮದ ಆಧಾರದ ಮೇಲೆ ಜನರು ಬಡಿದಾಡುವಂತೆ ಮಾಡುವ ಮೂಲಕ ನಮ್ಮ ಸಮಾಜದ ನಾಶಕ್ಕೆ ಕಾರಣವಾಗುತ್ತದೆ” ಎಂದು ಆದೇಶದಲ್ಲಿ ತಿಳಿಸಿದೆ.