Hathras Gang Rape 
ಸುದ್ದಿಗಳು

ಹಾಥ್‌ರಸ್ ಸಂತ್ರಸ್ತೆಯ ಅಂತ್ಯ ಸಂಸ್ಕಾರ ಯೋಜಿತ ಕೃತ್ಯ: ಸುಪ್ರೀಂ ಕೋರ್ಟ್‌ಗೆ ಸಿಜೆಪಿಯಿಂದ ಮಧ್ಯಪ್ರವೇಶ ಮನವಿ

ಸಿಜೆಪಿ ಸಲ್ಲಿಸಿರುವ ಮಧ್ಯಪ್ರವೇಶ ಮನವಿಯಲ್ಲಿ ವಾಲ್ಮೀಕಿ ಸಮುದಾಯ ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಹಕ್ಕುಗಳನ್ನು ಕೇಂದ್ರವಾಗಿಟ್ಟುಕೊಂಡು ನಿಧನರಾದವರ ಹಕ್ಕುಗಳ ಬಗ್ಗೆ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.

Bar & Bench

ಹಾಥ್‌ರಸ್ ಪ್ರಕರಣದ ವಿಚಾರಣೆಯಲ್ಲಿ ಮಧ್ಯಪ್ರವೇಶಕ್ಕೆ ಅವಕಾಶ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ 'ನ್ಯಾಯ ಮತ್ತು ಶಾಂತಿಗಾಗಿ ನಾಗರಿಕರು' [ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ (ಸಿಜೆಪಿ)] ವೇದಿಕೆಯು ಮಧ್ಯಪ್ರವೇಶ ಮನವಿ ಸಲ್ಲಿಸಿದೆ. ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಬೇಕು ಮತ್ತು ಸಾಕ್ಷಿಗಳಿಗೆ ಸೂಕ್ತ ಭದ್ರತೆ ಒದಗಿಸುವುದನ್ನು ಖಾತರಿಪಡಿಸುವಂತೆ ಸಿಜೆಪಿ ಮನವಿಯಲ್ಲಿ ವಿವರಿಸಿದೆ.

ಸುಪ್ರೀಂ ಕೋರ್ಟ್‌ ವಕೀಲೆ ಅಪರ್ಣಾ ಭಟ್ ಅವರ ಮೂಲಕ ಸಿಜೆಪಿ ಮುಖ್ಯಸ್ಥೆ ತೀಸ್ತಾ ಸೆಟಲ್‌ವಾಡ್ ಮಧ್ಯಪ್ರವೇಶ ಮನವಿ ಸಲ್ಲಿಸಿದ್ದಾರೆ. "ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಘೋರ ಅಪರಾಧದ ಪ್ರಾಮುಖ್ಯತೆ ಕುಗ್ಗಿಸುವ ಮತ್ತು ಪೂರ್ವಾಗ್ರಹ ಪೀಡಿತಗೊಳಿಸುವ ಯತ್ನ ಮಾಡುತ್ತಿದ್ದಾರೆ” ಎಂದು ಅವರು ವಿವರಿಸಿದ್ದಾರೆ.

ತನಿಖೆಯಲ್ಲಿ ಪಾಲ್ಗೊಂಡಿರುವ ವ್ಯಕ್ತಿಯೊಬ್ಬರು ಯುವತಿಯ ಮೇಲೆ ಲೈಂಗಿಕ ದಾಳಿ ನಡೆದಿಲ್ಲ ಎಂದು ಹೇಳಿರುವ ವರದಿಗಳತ್ತ ಮನವಿಯಲ್ಲಿ ಗಮನಸೆಳೆಯಲಾಗಿದೆ. ಉತ್ತರ ಪ್ರದೇಶ ಕೇಡರ್‌ನವರಲ್ಲದವರನ್ನು ಒಳಗೊಂಡಿರುವ ಅರೆ ಸೇನಾ ಪಡೆಯನ್ನು ಸಾಕ್ಷಿಗಳ ಭದ್ರತೆಗೆ ನಿಯೋಜಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ. ಸಂತ್ರಸ್ತೆಯ ಕುಟುಂಬ ಸದಸ್ಯರ ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸಿ ಮತ್ತು 'ಹೆಚ್ಚಿನ ಪರಕೀಯತೆ ಮತ್ತು ಬೆದರಿಕೆ ತಪ್ಪಿಸಲು ಭದ್ರತೆ ಅಗತ್ಯ' ಎಂದು ಹೇಳಲಾಗಿದೆ .

“2018ರ ಸಾಕ್ಷ್ಯ ರಕ್ಷಣಾ ಯೋಜನೆಯು ಕಳೆದ ಒಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದು, ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಅದನ್ನು ಜಾರಿಗೊಳಿಸದೇ ಹಾಗೆ ಸಾಗುತ್ತಿದೆ ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ವಾಲ್ಮೀಕಿ ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳನ್ನು ಕೇಂದ್ರವಾಗಿಟ್ಟು ನಿಧನರಾದವರ ಹಕ್ಕನ್ನು ಪ್ರಮುಖವಾಗಿ ಮಧ್ಯಪ್ರವೇಶ ಮನವಿಯಲ್ಲಿ ಉಲ್ಲೇಖಿಸಲಾಗಿದೆ. 2002ರಲ್ಲಿ ಸುಪ್ರೀಂ ಕೋರ್ಟ್‌ನ ಆಶ್ರಯ್ ಅಧಿಕಾರ್ ಅಭಿಯಾನ್ ಪ್ರಕರಣದ ತೀರ್ಪು ಸೇರಿದಂತೆ ಹಲವು ತೀರ್ಪುಗಳನ್ನು ಉಲ್ಲೇಖಿಸಲಾಗಿದ್ದು, ನಿರ್ಗತಿಕ ಸಾವನ್ನಪ್ಪಿದ ವ್ಯಕ್ತಿಗೂ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತ್ಯ ಸಂಸ್ಕಾರದ ಹಕ್ಕಿದೆ ಎಂದು ನ್ಯಾಯಾಲಯ ಹೇಳಿರುವುದನ್ನು ಉಲ್ಲೇಖಿಸಲಾಗಿದೆ.

ಸಂತ್ರಸ್ತೆಯ ಕುಟುಂಬಸ್ಥರಿಗೆ ಸುಳ್ಳುಪತ್ತೆ ಮತ್ತು ಮಂಪರು ಪರೀಕ್ಷೆ ನಡೆಸುವ ಉತ್ತರ ಪ್ರದೇಶ ಸರ್ಕಾರದ ವಾದವನ್ನು ಉಲ್ಲೇಖಿಸಿರುವ ಸಿಜೆಪಿಯು ಹೀಗೆ ಮಾಡಿದಲ್ಲಿ ಸೆಲ್ವಿ ವರ್ಸಸ್ ಕರ್ನಾಟಕ ಸರ್ಕಾರದ ಪ್ರಕರಣದ ತೀರ್ಪಿನ ಉಲ್ಲಂಘನೆಯಾಗಲಿದೆ ಎಂದು ಹೇಳಿದೆ.

ಸುಪ್ರೀಂ ಕೋರ್ಟ್ ನಿಗಾವಣೆಯಲ್ಲಿ ಸಿಬಿಐ ತನಿಖೆಗೆ ಆಗ್ರಹಿಸಿರುವುದನ್ನು ಸಮರ್ಥಿಸಿರುವ ಮಧ್ಯಪ್ರವೇಶ ಮನವಿಯು ಸಂತ್ರಸ್ತೆಯ ತಾಯಿಯು ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಹೇಳಿದ್ದಾರೆ. ಅಲ್ಲದೇ ಯುವತಿಯು ತನ್ನ ವಿಡಿಯೋ ಹೇಳಿಕೆಯಲ್ಲಿ ಮೇಲ್ಜಾತಿಯ ಯುವಕರು ತನ್ನ ಮೇಲೆ ಲೈಂಗಿಕ ದಾಳಿ ನಡೆಸಿದ್ದು, ಅತ್ಯಾಚಾರ ಮಾಡಿರುವುದಾಗಿ ಹೇಳಿದ್ದಾರೆ. ಅದಾಗ್ಯೂ ಯುವತಿಯು ಮೇಲೆ ಅತ್ಯಾಚಾರವಾಗಿದೆ ಎಂದು ಆಕೆ ಹೇಳಿಲ್ಲ ಎಂಬ ದುರುದ್ದೇಶಪೂರಿತ ವಿಡಿಯೋಗಳನ್ನು ಹರಿಯಬಿಡಲಾಗಿದೆ ಎಂದು ಹೇಳಲಾಗಿದೆ.

ಸೂರ್ಯೋದಯಕ್ಕೂ ಮುನ್ನ ಯುವತಿಯ ಕುಟುಂಬ ಸದಸ್ಯರ ಒಪ್ಪಿಗೆ ನಡೆಯದೇ ಆಕೆಯ ಶವ ಸಂಸ್ಕಾರ ಮಾಡುವ ಪರಿಸ್ಥಿತಿ ಏಕೆ ನಿರ್ಮಾಣವಾಯಿತು ಎಂಬುದನ್ನು ಪತ್ತೆಹಚ್ಚಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯನ್ನು ನೇಮಿಸಿಬೇಕೆಂದು ಮಧ್ಯಪ್ರವೇಶ ಮನವಿಯಲ್ಲಿ ಕೋರಲಾಗಿದೆ.