Hathras Gang Rape  
ಸುದ್ದಿಗಳು

ಹಾಥ್‌ರಸ್‌: ಅಧಿಕಾರಿಗಳ ವಿರುದ್ಧ ಐಪಿಸಿ, ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಹೊಸ ಪಿಐಎಲ್

ತಪ್ಪಿತಸ್ಥ ಅಧಿಕಾರಿಗಳು ಮತ್ತು ರಾಜಕಾರಣಿಗಳು “ಎಷ್ಟೇ ಪ್ರಭಾವಶಾಲಿಯಾಗಿದ್ದರೂ" ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Bar & Bench

ಹಾಥ್‌ರಸ್‌ ಪ್ರಕರಣದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯಡಿ ಪ್ರಕರಣ ದಾಖಲಿಸಬೇಕೆಂದು ಕೋರಿ ಸುಪ್ರೀಂಕೋರ್ಟಿಗೆ ಹೊಸದಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

"ಸಾಕ್ಷ್ಯಾಧಾರಗಳ ನಾಶ" ಮತ್ತು "ಆರೋಪಿಗಳ ರಕ್ಷಣೆಯಲ್ಲಿ" ಪಾತ್ರವಹಿಸಿದ್ದಾರೆ ಎನ್ನಲಾದ ಪೊಲೀಸ್ ಅಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ, ವೈದ್ಯಕೀಯ ಅಧಿಕಾರಿಗಳು ಹಾಗೂ ಇತರೆ ಸರ್ಕಾರಿ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

"... ಹಾಥ್‌ರಸ್‌ನಲ್ಲಿ ನಡೆದ ಘಟನೆ ಅತ್ಯಂತ ಆಘಾತಕಾರಿ. ಏಕೆಂದರೆ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳುವ ಹೊಣೆಯೊಂದಿಗೆ ಸಾಂವಿಧಾನಿಕವಾಗಿ ನಿಯೋಜಿಸಲಾದ ಅಧಿಕಾರಿಗಳು, ತೀವ್ರ ಗಾಯಗೊಂಡು ಪ್ರಾಣತೊರೆದ ಕೆಳಜಾತಿಯ ಯುವತಿಯ ವಿರುದ್ಧ ನಡೆದ ಈ ಘೋರ ಅಪರಾಧವನ್ನು ಮುಚ್ಚಿಹಾಕಲು ಮುಂದಾಗಿದ್ದಾರೆ," ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ತಪ್ಪಿತಸ್ಥ ಅಧಿಕಾರಿಗಳು ಮತ್ತು ರಾಜಕಾರಣಿಗಳು “ಎಷ್ಟೇ ಪ್ರಭಾವಶಾಲಿಯಾಗಿದ್ದರೂ" ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಐಪಿಸಿ ಸೆಕ್ಷನ್ 166-ಎ, 193, 201, 202, 203, 212, 217, 153-ಎ ಹಾಗೂ 339ರ ಅಡಿ ಪ್ರಕರಣ ದಾಖಲಿಸಿಕೊಳ್ಳಬೇಕು. ಮಾತ್ರವಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯ ಸೆಕ್ಷನ್ 3 (2) ಮತ್ತು 4 ರ ಅಡಿಯಲ್ಲಿ ಮೊಕದ್ದಮೆ ಹೂಡಬೇಕು ಎಂದು ಕೋರಲಾಗಿದೆ.

ಸಾಮಾಜಿಕ ಕಾರ್ಯಕರ್ತ ಚೇತನ್ ಜನಾರ್ಧನ್ ಕಾಂಬ್ಳೆ ಅವರು ಸಲ್ಲಿಸಿರುವ ಈ ಪಿಐಎಲ್, ಪೊಲೀಸರು, ಜಿಲ್ಲಾಡಳಿತ ಅಥವಾ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ, ರಾಜ್ಯದ ಅಧಿಕಾರಿಗಳು ಘಟನೆಯಲ್ಲಿ ವಹಿಸಿರುವ ಪಾತ್ರ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಕಾನೂನಿನ ವಿಚಾರದಲ್ಲಿ ಜನರ ವಿಶ್ವಾಸ ಅಳಿಯದಂತೆ ನೋಡಿಕೊಳ್ಳಲು ಇಂತಹ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಡಲಾಗಿದೆ.

ವರದಿಯಾದ ಘಟನಾ ಸರಣಿಯಿಂದ ಸಾಕ್ಷ್ಯಗಳ ನಾಶದಲ್ಲಿ ರಾಜ್ಯದ ಅಧಿಕಾರಿಗಳು ಭಾಗಿಯಾಗಿರುವುದು ಸ್ಪಷ್ಟವಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದ್ದು ಅಧಿಕಾರಿಗಳು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂಬುದನ್ನು ಎತ್ತಿ ತೋರುತ್ತದೆ ಎಂದು ವಿವರಿಸಲಾಗಿದೆ.

ಅರ್ಜಿಯ ಮುಖ್ಯಾಂಶಗಳು:

  • ಘಟನೆ ನಂತರ ಅಲಿಗಢ ಸರ್ಕಾರಿ ಆಸ್ಪತ್ರೆಗೆ ಸಂತ್ರಸ್ತೆಯನ್ನು ಕರೆದೊಯ್ದಾಗ ಲೈಂಗಿಕ ಅಪರಾಧ ಎಸಗಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದರೂ ವೈದ್ಯಕೀಯ ಸಾಕ್ಷ್ಯಗಳನ್ನು ಸಂಗ್ರಹಿಸಲಿಲ್ಲ. ವಿಧಿವಿಜ್ಞಾನ ಪರೀಕ್ಷೆ ತಡವಾಗಿ ನಡೆಸಿದ್ದರಿಂದ ವೀರ್ಯದ ಮಾದರಿ ಪತ್ತೆಯಾಗಿಲ್ಲ.

  • ತನಿಖೆ ಮುಕ್ತಾಯಗೊಳ್ಳುವ ಮೊದಲೇ , ಅನೇಕ ಉನ್ನತ ಅಧಿಕಾರಿಗಳು ಅತ್ಯಾಚಾರದ ಅಪರಾಧದ ಆಯೋಗವನ್ನು ನಿರಾಕರಿಸಿ ಸಾರ್ವಜನಿಕ ಹೇಳಿಕೆಗಳನ್ನು ನೀಡಿದರು. ಇದು, "ರಾಜ್ಯ ಪೊಲೀಸರು ಮತ್ತು ಆರೋಪಿಗಳ ನಡುವಿನ ಸ್ಪಷ್ಟ ಸಂಬಂಧವನ್ನು ಸೂಚಿಸುತ್ತದೆ".

  • ತೀವ್ರ ಗಾಯಗಳಿಂದ ಪ್ರಾಣ ತೊರೆದ ಸಂತ್ರಸ್ತೆಯ ಮೃತದೇಹವನ್ನು ಮಧ್ಯರಾತ್ರಿ ದಹನ ಮಾಡಿದ್ದು ಪೊಲೀಸ್ ಅಧಿಕಾರಿಗಳು ಇರಿಸಿದ ಮತ್ತೊಂದು ಆಘಾತಕಾರಿ ಹೆಜ್ಜೆ. ‘ಅಪರಾಧವನ್ನು ತನಿಖೆ ಮಾಡುವ ಬದಲು ಅದನ್ನು ನಿಗ್ರಹಿಸಲು ಅವರು ಮುಂದಾಗಿದ್ದಾರೆ’.

  • “ರಾಜ್ಯ ಪೊಲೀಸರು ಮತ್ತಿತರ ಸರ್ಕಾರಿ ಅಂಗಗಳು ಮಾಡಿದ ಅಕ್ಷಮ್ಯ ಅಪರಾಧದಿಂದಾಗಿ ಸಂತ್ರಸ್ತೆಯ ಕುಟುಂಬಕ್ಕೆ ಯುವತಿಯ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನಗಳನ್ನು ಕಲ್ಪಿಸುವ ಮೂಲಭೂತ ಹಕ್ಕನ್ನು ಕೂಡ ನಿರಾಕರಿಸಿದಂತಾಗಿದ್ದು ಇದು ಮನಃಸಾಕ್ಷಿಯ ಅಧಃಪತನ”.

  • ಇಡೀ ಪ್ರಕರಣದ ನಿರ್ವಹಣೆಯಲ್ಲಿ ಉತ್ತರ ಪ್ರದೇಶ ಸರ್ಕಾರದ ದುರುದ್ದೇಶ ಅಡಗಿರುವುದು ಸ್ಪಷ್ಟವಾಗಿದ್ದು ಇದನ್ನು ಅಲಾಹಾಬಾದ್ ಹೈಕೋರ್ಟ್ ಲಕ್ನೋ ಪೀಠ ಗಮನಿಸಿ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಗಣನೆಗೆ ತೆಗೆದುಕೊಂಡಿದೆ.

ಅಲ್ಲದೆ, "ದೋಷರಹಿತ ಋಜುತ್ವ ಹೊಂದಿರುವ ಸ್ವತಂತ್ರ ವಿಶೇಷ ಕಾರ್ಯಪಡೆ"ಯಿಂದ ತನಿಖೆ ನಡೆಸಲು ನಿರ್ದೇಶಿಸಬೇಕೆಂದು ಕೂಡ ಕೋರಲಾಗಿದೆ. ಪ್ರಕರಣದ ವಿಚಾರಣೆ ಬಾಕಿ ಇರುವಾಗ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ಒದಗಿಸಲು ಸಿಆರ್‌ಪಿಎಫ್‌ಗೆ ಸೂಚಿಸೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಅರ್ಜಿಯನ್ನು ವಕೀಲ ವಿಪಿನ್ ನಾಯರ್ ಮೂಲಕ ವಕೀಲರಾದ ಎಸ್ ಬಿ ತಾಲೇಕರ್ ಮತ್ತು ಕಾರ್ತಿಕ್ ಜಯಶಂಕರ್ ಅವರು ಸಲ್ಲಿಸಿದ್ದಾರೆ.