19 ವರ್ಷದ ದಲಿತ ಮಹಿಳೆಯೊಬ್ಬರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಹಾಥ್‌ರಸ್ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ವಹಿಸಿಕೊಂಡಿದೆ.
ಕೆಲದಿನಗಳ ಹಿಂದೆ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಉತ್ತರಪ್ರದೇಶ ಸರ್ಕಾರ ಈ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವಂತೆ ಸಿಬಿಐ ಸಂಸ್ಥೆಯನ್ನು ಕೋರಿತ್ತು.
ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಯಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇದೆ.
ಸಾಕ್ಷಿಗಳಿಗೆ ನೀಡುವ ರಕ್ಷಣೆಯ ಕುರಿತು ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಉತ್ತರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು, ಜೊತೆಗೆ ಸಂತ್ರಸ್ತೆಯ ಕುಟುಂಬದ ಪರ ವಕಾಲತ್ತು ವಹಿಸಲು ವಕೀಲರನ್ನು ಆಯ್ಕೆ ಮಾಡಿಕೊಂಡಿದೆಯೇ ಎಂದು ಪ್ರಶ್ನಿಸಿತ್ತು.
ಅಲಹಾಬಾದ್ ಹೈಕೋರ್ಟ್ನಲ್ಲಿ ನಡೆಯುವ ವಿಚಾರಣೆಯ ವ್ಯಾಪ್ತಿಯನ್ನು ಹೇಗೆ ವಿಸ್ತರಿಸಬಹುದು ಎಂಬುದರ ಕುರಿತು ನ್ಯಾಯಾಲಯ ಸಲಹೆಗಳನ್ನು ಕೇಳಿದೆ.
ಅಕ್ಟೋಬರ್ 12ರಂದು ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆ ನಡೆಸಲಿದ್ದು ಅಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಹಾಜರಾಗುವಂತೆ ಸೂಚಿಸಲಾಗಿದೆ.
ಸಂತ್ರಸ್ತೆಯ ದೇಹದಲ್ಲಿ ವೀರ್ಯದ ಮಾದರಿ ಇಲ್ಲ ಎಂಬ ವಿಧಿವಿಜ್ಞಾನ ಸಂಸ್ಥೆಯ ವರದಿ ಆಧರಿಸಿ ಉತ್ತರಪ್ರದೇಶ ಪೊಲೀಸರು ಅತ್ಯಾಚಾರ ನಡೆದಿರುವುದನ್ನು ನಿರಾಕರಿಸಿದ್ದರು.
ಈ ವಿಷಯವನ್ನು ಅಕ್ಟೋಬರ್ 12 ರಂದು ಕೈಗೆತ್ತಿಕೊಳ್ಳಲು ಪಟ್ಟಿ ಮಾಡಲಾಗಿದೆ. ಅಂದು ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನಿರ್ದೇಶಿಸಲಾಗಿದೆ,