Supreme Court, Hathras Stampede  
ಸುದ್ದಿಗಳು

ಹಾಥ್‌ರಸ್‌ ಕಾಲ್ತುಳಿತ ದುರಂತ: ನ್ಯಾಯಾಂಗ ತನಿಖೆ ಕೋರಿ ಸುಪ್ರೀಂ ಕೋರ್ಟ್‌, ಅಲಾಹಾಬಾದ್‌ ಹೈಕೋರ್ಟ್‌ನಲ್ಲಿ ಅರ್ಜಿ

Bar & Bench

ಉತ್ತರ ಪ್ರದೇಶದ ಹಾಥ್‌ರಸ್‌ ಜಿಲ್ಲೆಯ ಫೂಲರಾಯ್‌ ಗ್ರಾಮದಲ್ಲಿ ನಿನ್ನೆ (ಮಂಗಳವಾರ) ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದ ವೇಳೆ ಉಂಟಾದ ಕಾಲ್ತುಳಿತದಲ್ಲಿ 121 ಜನ ಪ್ರಾಣತೆತ್ತ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಗಣ್ಯರು ಅಥವಾ ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿರುವುದರಿಂದ ಇಂತಹ ಕಾರ್ಯಕ್ರಮಗಳಲ್ಲಿ ಸಾಮಾನ್ಯ ಜನರು ಹೆಚ್ಚು ತೊಂದರೆ ಅನುಭವಿಸುತ್ತಾರೆ ಎಂದು ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿರುವ ಅರ್ಜಿತಿಳಿಸಿದೆ.

ಈ ಹಿಂದೆ ಸೂರಜ್ ಪಾಲ್ ಎಂದು ಕರೆಯಲಾಗುತ್ತಿದ್ದ ಸ್ವಯಂ-ಘೋಷಿತ ದೇವಮಾನವ ನಾರಾಯಣ್ ಸಾಕರ್ ಹರಿ ಅಲಿಯಾಸ್ 'ಭೋಲೆ ಬಾಬಾ' ಅವರ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ ದುರಂತ ಉಂಟಾಗಿತ್ತು. 80,000 ಮಂದಿಗೆ ಪಾಲ್ಗೊಳ್ಳಲು ಅನುಮತಿ ನೀಡಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು ಎರಡು ಲಕ್ಷ ಜನ ಭಾಗಿಯಾಗಿದ್ದರು. ಈ ಸಂಬಂಧ ಉತ್ತರ ಪ್ರದೇಶ ಪೊಲೀಸರು ಕಾರ್ಯಕ್ರಮದ ಆಯೋಜಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಭೋಲೆ ಬಾಬಾ ತಲೆಮರೆಸಿಕೊಂಡಿದ್ದಾರೆ.

 ಅರ್ಜಿಯ ಪ್ರಮುಖಾಂಶಗಳು

  • ರಾಜ್ಯ ಸರ್ಕಾರ ಮತ್ತು ಪಾಲಿಕೆಗಳ ಕರ್ತವ್ಯ ಲೋಪವನ್ನು ಇಂತಹ ಘಟನೆಗಳು ಸಾರುತ್ತವೆ. ನೆರೆದಿದ್ದ ಜನರನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

  • 1954ರಲ್ಲಿ ನಡೆದ ಕುಂಭಮೇಳ ಕಾಲ್ತುಳಿತದಲ್ಲಿ ಸುಮಾರು 800 ಮಂದಿ ಮೃತಪಟ್ಟಿದ್ದರು. 2007ರಲ್ಲಿ 16 ಮಂದಿ ಸಾವನ್ನಪ್ಪಿದ ಮೆಕ್ಕಾ ಮಸೀದಿ ಕಾಲ್ತುಳಿತ, 2022ರಲ್ಲಿ ದೇವಿ ದೇಗುಲ ದುರಂತ, 2014ರಲ್ಲಿ ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ದಸರಾ ಆಚರಣೆಯ ಸಂದರ್ಭದಲ್ಲಿ ಉಂಟಾದ ಸಾವುನೋವು, ಕೇರಳದ ಇಡುಕ್ಕಿ ಜಿಲ್ಲೆಯ ಪುಲ್ಮೇಡುವಿನಲ್ಲಿ ನಡೆದಿದ್ದ ಸುಮಾರು 104 ಶಬರಿಮಲೆ ಭಕ್ತರ ಸಾವು ಸೇರಿದಂತೆ ಹಲವು ದುರಂತಗಳು ಈ ಹಿಂದೆ ನಡೆದಿವೆ.

  • ಹಾಥ್‌ರಸ್‌ ಕಾಲ್ತುಳಿತದ ಬಗ್ಗೆ ತನಿಖೆ ಮಾಡಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಐದು ಸದಸ್ಯರ ತಜ್ಞರ ಸಮಿತಿ ನೇಮಿಸಬೇಕು;

  • ಸಾರ್ವಜನಿಕ ಸಭೆಗಳಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಮಾರ್ಗಸೂಚಿ ರೂಪಿಸುವಂತೆ ಸಮಿತಿಗೆ ನಿರ್ದೇಶನ ನೀಡಬೇಕು;

  • ಉತ್ತರ ಪ್ರದೇಶ ಸರ್ಕಾರ ಸ್ಥಿತಿಗತಿ ವರದಿಯನ್ನು ಸಲ್ಲಿಸಿ ನಿರ್ಲಕ್ಷ್ಯದಿಂದ ವರ್ತಿಸಿದವರ ವಿರುದ್ಧ ಕಾನೂನು ಕ್ರಮ  ಜರುಗಿಸಬೇಕು;

  • ಧಾರ್ಮಿಕ ಅಥವಾ ಇತರ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರ ಸುರಕ್ಷತೆಗಾಗಿ ರಾಜ್ಯಗಳು ಮಾರ್ಗಸೂಚಿಗಳನ್ನು ಹೊರಡಿಸುವಂತೆ ಸೂಚಿಸಬೇಕು;

  • ಕಾಲ್ತುಳಿತ ಘಟನೆಗಳನ್ನು ಎದುರಿಸಲು ವಿವಿಧ ಹಂತಗಳಲ್ಲಿ ಲಭ್ಯ ಇರುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ವರದಿ ಸಲ್ಲಿಸಬೇಕು.  

ಮತ್ತೊಂದೆಡೆ ಹಾಥ್‌ರಸ್‌ ಕಾಲ್ತುಳಿತದ ಬಗ್ಗೆ ಸಿಬಿಐ ತನಿಖೆ ಕೋರಿ ವಕೀಲರೊಬ್ಬರು ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಪಿಐಎಲ್‌ ದಾಖಲಿಸಿದ್ದಾರೆ. ಘಟನೆಯ ಸಂಬಂಧ ಸಿಬಿಐ ತನಿಖೆಗೂ ಅರ್ಜಿಯಲ್ಲಿ ಕೋರಲಾಗಿದೆ.