Allahabad High Court
Allahabad High Court 
ಸುದ್ದಿಗಳು

ಪ್ರಾಪ್ತೆಯೊಂದಿಗೆ ಸಮ್ಮತ ಲೈಂಗಿಕ ಕ್ರಿಯೆ ಅಪರಾಧವಲ್ಲ ಆದರೆ ಅನೈತಿಕ, ದುರಾಚಾರ: ಅಲಾಹಾಬಾದ್ ಹೈಕೋರ್ಟ್

Bar & Bench

ವಯಸ್ಸಿಗೆ ಬಂದ ಹುಡುಗಿಯೊಂದಿಗೆ ಸಮ್ಮತಿಯ ಲೈಂಗಿಕ ಕ್ರಿಯೆ ನಡೆಸುವುದು ಕಾನೂನಿನಡಿಯಲ್ಲಿ ಅಪರಾಧವಲ್ಲ ಆದರೆ ಅದು ಅನೈತಿಕ, ದುರಾಚಾರ ಹಾಗೂ ಭಾರತೀಯ ರೂಢಿಗತ ಸಂಪ್ರದಾಯಗಳಿಗೆ ವಿರುದ್ಧವಾದುದು ಎಂದು ಅಲಹಾಬಾದ್‌ ಹೈಕೋರ್ಟ್‌ ತಿಳಿಸಿದೆ. ಬೇರೆ ಆರೋಪಿಗಳೊಂದಿಗೆ ಸೇರಿ ತನ್ನ ಗೆಳತಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಹೊತ್ತ ರಾಜು ಎಂಬ ವ್ಯಕ್ತಿಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ಅದು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಜುವಿಗೆ ಜಾಮೀನು ನಿರಾಕರಿಸಿದ ನ್ಯಾ. ರಾಹುಲ್‌ ಚತುರ್ವೇದಿ ನೇತೃತ್ವದ ಏಕಸದಸ್ಯ ಪೀಠ ಇತರ ಆರೋಪಿಗಳು ತನ್ನ ಗೆಳತಿಗೆ ಲೈಂಗಿಕ ಕಿರುಕುಳ ನೀಡುತ್ತಿರುವಾಗ ಆಕೆಯನ್ನು ರಕ್ಷಿಸುವುದು ಆತನ ಕರ್ತವ್ಯವಾಗಿತ್ತು ಎಂದು ಹೇಳಿತು.

"ಸಂತ್ರಸ್ತೆಯು ತನ್ನ ಪ್ರಿಯತಮೆ ಎಂದು ಅರ್ಜಿದಾರ ಹೇಳಿದಾಕ್ಷಣವೇ ತನ್ನ ಪ್ರಿಯತಮೆಯ ಘನತೆ, ಮರ್ಯಾದೆ ಮತ್ತು ಪ್ರತಿಷ್ಠೆಯನ್ನು ಕಾಪಾಡುವುದು ಆತನ ಕರ್ತವ್ಯವಾಗುತ್ತದೆ. ಪ್ರಾಪ್ತ ಯುವತಿಯೊಂದಿಗೆ ಆಕೆಯ ಸಮ್ಮತಿ ಪಡೆದು ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಲ್ಲ. ಆದರೆ, ಅದು ಖಚಿತವಾಗಿಯೂ ಅನೈತಿಕ, ದುರಾಚಾರ ಮತ್ತು ಭಾರತೀಯ ಸಮಾಜದ ರೂಢಿಗತ ನಡವಳಿಕೆಗೆ ಹೊರತಾದದ್ದು" ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ಹೇಳಿದ್ದಾರೆ.

ಅರ್ಜಿದಾರನ ಕೃತ್ಯ ಅತ್ಯಂತ ಹೇಯವಾದುದು, ಗೆಳೆಯನಾಗಲು ಯೋಗ್ಯವಲ್ಲದ್ದು ಎಂದು ಬಣ್ಣಿಸಿದ ನ್ಯಾಯಾಲಯ ಸಹ ಆರೋಪಿಗಳು ತನ್ನ ಪ್ರಿಯತಮೆಯನ್ನು ಆತನ ಮುಂದೆಯೇ ಕ್ರೂರವಾಗಿ ಲೈಂಗಿಕವಾಗಿ ಶೋಷಿಸುತ್ತಿದ್ದಾಗ ಆತ ಮೂಕಪ್ರೇಕ್ಷಕನಾಗಿದ್ದ ಮತ್ತು ಸಂತ್ರಸ್ತೆಯ ಆತ್ಮ ಮತ್ತು ದೇಹವನ್ನು ಈ ಮಾಂಸದ ರಣಹದ್ದುಗಳಿಂದ ಕಾಪಾಡಲು ತೀವ್ರ ಪ್ರತಿರೋಧ ಒಡ್ಡುವ ಯಾವುದೇ ಯತ್ನ ಮಾಡಲಿಲ್ಲ ಎಂದು ನ್ಯಾಯಾಲಯ ಕಿಡಿ ಕಾರಿತು.

ದಾಖಲೆಯಲ್ಲಿ ಸಲ್ಲಿಸಲಾದ ಮಾಹಿತಿ ಮತ್ತು ಎಫ್‌ಐಆರ್‌ನ ಅಂಶಗಳನ್ನು ಪರಿಶೀಲಿಸಿದ ನಂತರ, ನ್ಯಾಯಾಲಯ ಅರ್ಜಿದಾರನಿಗೆ ಜಾಮೀನು ನಿರಾಕರಿಸಿತು, ಅರ್ಜಿದಾರನಿಗೆ ಸಹ-ಆರೋಪಿಗಳೊಂದಿಗೆ ಯಾವುದೇ ಸಂಬಂಧ ಅಥವಾ ಸಂಪರ್ಕವಿಲ್ಲ ಎಂದು ಖಚಿತವಾಗಿ ಹೇಳಲಾಗದು ಎಂಬುದಾಗಿ ಅದು ತಿಳಿಸಿತು.

"ಅಪರಾಧದ ಸ್ವರೂಪ, ಅದರ ಮಹತ್ವ, ಅದನ್ನು ಬೆಂಬಲಿಸುವ ಪುರಾವೆಗಳು ಮತ್ತು ಪ್ರಕರಣದ ಒಟ್ಟಾರೆ ಸಂದರ್ಭವನ್ನು ಗಮನಿಸಿದಾಗ ಅರ್ಜಿದಾರನ ಪರವಾಗಿ ಸಿಆರ್‌ಪಿಸಿ ಸೆಕ್ಷನ್‌ 439ರ ಅಡಿ ನನ್ನ ವಿವೇಚನಾಧಿಕಾರ ಚಲಾಯಿಸಲು ಬಯಸುವುದಿಲ್ಲ. ಹೀಗಾಗಿ ಆತನ ಜಾಮೀನು ಮನವಿಯನ್ನು ತಿರಸ್ಕರಿಸಲಾಗಿದೆ” ಎಂದು ನ್ಯಾಯಾಧೀಶರು ತಿಳಿಸಿದರು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Raju_v__State_of_Uttar_Pradesh.pdf
Preview