ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದ ಆರೋಪದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಭೂಮಾಲೀಕ ಜೆ ದೇವರಾಜು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಶನಿವಾರ ಮಾರ್ಚ್ 22ಕ್ಕೆ ಮುಂದೂಡಿತು.
ಸಿಎಂ ಸೆಪ್ಟೆಂಬರ್ 24ರಂದು ಏಕಸದಸ್ಯ ಪೀಠ ನೀಡಿರುವ ಆದೇಶ ಪ್ರಶ್ನಿಸಿದ್ದು, ಸಂಬಂಧವಿಲ್ಲದಿದ್ದರೂ ತನ್ನನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ ಎಂದು ವಿವಾದಿತ ಜಮೀನನ್ನು ಸಿಎಂ ಭಾಮೈದ ಮಲ್ಲಿಕಾರ್ಜುನಸ್ವಾಮಿಗೆ ಮಾರಾಟ ಮಾಡಿದ್ದ ಭೂಮಾಲೀಕ ಜೆ ದೇವರಾಜು ಪ್ರತ್ಯೇಕವಾಗಿ ಸಲ್ಲಿಸಿರುವ ಎರಡು ಮೇಲ್ಮನವಿಗಳು ಇಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದ್ದವು.
ಸಿಎಂ ಸಿದ್ದರಾಮಯ್ಯ ಪರವಾಗಿ ಹಾಜರಾದ ವಕೀಲ ಶತಭಿಷ್ ಶಿವಣ್ಣ ಅವರು “ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರನ್ನು ನಿಯೋಜಿಸಲಾಗಿದ್ದು, ಸಿಎಂ ಪರವಾಗಿ ವಾದ ಮಂಡಿಸಲಿದ್ದಾರೆ. ಹೀಗಾಗಿ, ಯಾವುದಾದರೂ ಶನಿವಾರ ಪ್ರಕರಣದ ವಿಚಾರಣೆ ನಡೆಸಬಹುದು. ಮಾರ್ಚ್ 22ರಂದು ಹೈಕೋರ್ಟ್ ಕಾರ್ಯನಿರ್ವಹಿಸಲಿದೆ. ಪ್ರಕರಣದಲ್ಲಿ ಮೊದಲಿಗರಾಗಿ ಸಿಂಘ್ವಿ ವಾದ ಆರಂಭಿಸಲಿದ್ದು, ಭೌತಿಕವಾಗಿ ಅವರು ಪೀಠದ ಮುಂದೆ ಹಾಜರಾಗಲಿದ್ದಾರೆ” ಎಂದರು.
ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ನ್ಯಾಯಾಲಯಕ್ಕೆ ಅನುಕೂಲವಾಗುವ ಯಾವುದಾದರೂ ದಿನಾಂಕದಂದು ಮೇಲ್ಮನವಿಗಳ ವಿಚಾರಣೆ ನಡೆಸಬಹುದು” ಎಂದರು.
ಆಗ ಪೀಠವು ಶತಭಿಷ್ ಅವರನ್ನು ಕುರಿತು “ಪ್ರತಿವಾದಿಗಳಿಗೆ ಯಾವುದೇ ಶನಿವಾರದಂದು ಪ್ರಕರಣ ವಿಚಾರಣೆಗೆ ನಿಗದಿಪಡಿಸುಬಹುದೇ ಎಂದು ಕೇಳಿ. ಎಲ್ಲರೂ ಇಂದು ಹಾಜರಾಗಿದ್ದಾರೆಯೇ” ಎಂದಿತು.
ರಾಜ್ಯಪಾಲರ ಪರವಾಗಿ ವಕೀಲ ಕೆ ಅಭಿಷೇಕ್ ಹಾಜರಾಗಿದ್ದಾರೆ ಎಂದು ಎಜಿ ಹೇಳಿದರು.
ಅಂತಿಮವಾಗಿ ಪೀಠವು ಮೇಲ್ಮನವಿದಾರ ಸಿದ್ದರಾಮಯ್ಯ ಅವರನ್ನು ಪ್ರತಿನಿಧಿಸಿರುವ ವಕೀಲ ಶತಭಿಷ್ ಶಿವಣ್ಣ ಅವರ ಕೋರಿಕೆಯ ಮೇರೆಗೆ ಹಾಗೂ ಪಕ್ಷಕಾರರ ಜಂಟಿ ಮನವಿಯ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮಾರ್ಚ್ 22ಕ್ಕೆ ಮುಂದೂಡಲಾಗಿದೆ. ಯಾವೆಲ್ಲಾ ಪ್ರತಿವಾದಿಗಳಿಗೆ ಅರ್ಜಿಯ ಪ್ರತಿ ಹಂಚಿಲ್ಲ ಅವರಿಗೆ ಪ್ರತಿ ನೀಡಬೇಕು ಮತ್ತು ಕಚೇರಿ ಎತ್ತಿರುವ ಆಕ್ಷೇಪಣೆಗಳನ್ನು ಸರಿಪಡಿಸಬೇಕು ಎಂದು ಮೇಲ್ಮನವಿದಾರರಿಗೆ ನಿರ್ದೇಶಿಸಿ, ನ್ಯಾಯಾಲಯವು ಅರ್ಜಿ ವಿಚಾರಣೆ ಮುಂದೂಡಿತು.