ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿರುವ ಮೈಸೂರಿನ ಅರ್ಜಿದಾರ ಸ್ನೇಹಮಯಿ ಕೃಷ್ಣ ಅವರು ಇದೇ ದಾವೆಯಲ್ಲಿ ಜಾರಿ ನಿರ್ದೇಶನಾಲಯವನ್ನೂ ಪಕ್ಷಕಾರರನ್ನಾಗಿ ಮಾಡಬೇಕು ಎಂದು ಕೋರಿರುವ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಪುರಸ್ಕರಿಸಿದ್ದು, ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.
ಅಲ್ಲದೇ, ಹೈಕೋರ್ಟ್‌ನ ಹಿಂದಿನ ಆದೇಶದಂತೆ ಲೋಕಾಯುಕ್ತ ಪೊಲೀಸರು ಡಿಸೆಂಬರ್ 10ರವರೆಗಿನ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು. ಇದನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅಧಿಕೃತವಾಗಿ ಸ್ವೀಕರಿಸಿತು. ಲೋಕಾಯುಕ್ತ ವರದಿಯಲ್ಲಿ ಸಾಕ್ಷಿಗಳ ಹೇಳಿಕೆ ಒಳಗೊಂಡ ಸಿ ಡಿ ಮತ್ತಿತರ ದಾಖಲೆಗಳು ಸೇರಿವೆ ಎಂದು ಲೋಕಾಯುಕ್ತ ಪೊಲೀಸ್ ಪರ ವಕೀಲ ವೆಂಕಟೇಶ್ ಅರಬಟ್ಟಿ ನ್ಯಾಯಾಲಯಕ್ಕೆ ವಿವರಿಸಿದರು.
ಇನ್ನು, ಸಿಬಿಐ ತನಿಖೆಗೆ ಕೋರಿರುವ ಅರ್ಜಿಯ ವಿಚಾರಣೆ ಮುಂದೂಡಿಕೆಗೆ ಸಂಬಂಧಿಸಿದಂತೆ ಆಕ್ಷೇಪಾರ್ಹವಾದ ಭೂಮಿಯ ಮಾಲೀಕ ಜೆ ದೇವರಾಜು ಸಲ್ಲಿಸಿರುವ ಅರ್ಜಿ ಹಾಗೂ ಹೈಕೋರ್ಟ್ ಅನುಮತಿ ಪಡೆಯದೇ ಲೋಕಾಯುಕ್ತ ಪೊಲೀಸರು ಡಿಸೆಂಬರ್ 24ರ ಒಳಗೆ ಅಂತಿಮ ತನಿಖಾ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸದಂತೆ ಆದೇಶಿಸಬೇಕು ಎಂಬ ಅರ್ಜಿದಾರ ಸ್ನೇಹಮಯಿ ಕೃಷ್ಣ ಪರ ವಕೀಲರ ಕೋರಿಕೆಯನ್ನು ಡಿಸೆಂಬರ್ 19ರ ವಿಚಾರಣೆಯಂದು ಪರಿಗಣಿಸಲಾಗುವುದು ಎಂದು ಪೀಠ ಹೇಳಿತು. ಅಲ್ಲದೇ, ಸಿಬಿಐ ತನಿಖೆ ಕೋರಿರುವ ಅರ್ಜಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ ಎಂ ಪಾರ್ವತಿ, ಅವರ ಸಹೋದರ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ನೋಟಿಸ್ ತಲುಪಿಸಲು ಆದೇಶಿಸಿತು.
ಇದಕ್ಕೂ ಮುನ್ನ, ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಸಿಬಿಐ ತನಿಖೆ ಕೋರಿರುವ ಅರ್ಜಿಯಲ್ಲಿ ಪ್ರತಿವಾದಿಗಳಾದ ಸಿಎಂ ಸಿದ್ದರಾಮಯ್ಯ, ಬಿ ಎಂ ಪಾರ್ವತಿ ಮತ್ತು ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಇನ್ನೂ ನೋಟಿಸ್ ತಲುಪಿಲ್ಲ” ಎಂದರು.
ಆನಂತರ ಜೆ ದೇವರಾಜು ಪ್ರತಿನಿಧಿಸಿರುವ ಹಿರಿಯ ವಕೀಲ ದುಷ್ಯಂತ್ ದವೆ ಅವರು “ಮೊದಲಿಗೆ ಲೋಕಾಯುಕ್ತ ತನಿಖೆ ಬೇಕು ಎಂದು ಕೋರಿದವರು ಅರ್ಜಿದಾರರು. ಈಗ ಲೋಕಾಯುಕ್ತ ತನಿಖೆ ನಡೆಸಬಾರದು ಎನ್ನುತ್ತಿದ್ದಾರೆ. ಇದು ಯಾವ ರೀತಿಯ ವಾದ. ಇದು ಕಾನೂನಿನ ದುರ್ಬಳಕೆಯಾಗಿದೆ” ಎಂದು ಆಕ್ಷೇಪಿಸಿದರು.
ಇದಕ್ಕೆ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ ಜಿ ರಾಘವನ್ ಅವರು “ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 17ಎ ಅಡಿ ರಾಜ್ಯಪಾಲರ ಅನುಮತಿ ಎತ್ತಿ ಹಿಡಿಯಲಾಗಿದೆ. ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರದ ಸಂಸ್ಥೆಗೆ ತನಿಖೆಯ ಜವಾಬ್ದಾರಿ ನೀಡಬೇಕು. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆಯೇ ಎಂದು ತಿಳಿಯಲು ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ತನಿಖಾ ವರದಿ ಸಲ್ಲಿಸಲು ಸೂಚಿಸಿದೆ. ಅದನ್ನು ನ್ಯಾಯಾಲಯದ ಮುಂದಿಡಬೇಕು” ಎಂದರು.
ಅಲ್ಲದೇ, “ಹಿರಿಯ ವಕೀಲರಾದ ಕಪಿಲ್ ಸಿಬಲ್ ಹೇಳಿದಂತೆ ಈ ಅರ್ಜಿಯನ್ನು ಪುರಸ್ಕರಿಸಿದರೆ ವಿಭಾಗೀಯ ಪೀಠದ ಮುಂದಿರುವ ಮೇಲ್ಮನವಿ ಅಮಾನ್ಯವಾಗಲಿದೆ. ಹಾಗೆಯೇ ಡಿಸೆಂಬರ್ 24ಕ್ಕೆ ಲೋಕಾಯುಕ್ತ ಪೊಲೀಸರು ಅಂತಿಮ ತನಿಖಾ ವರದಿ ಸಲ್ಲಿಸಬೇಕು ಎಂದು ವಿಚಾರಣಾಧೀನ ನ್ಯಾಯಾಲಯ ಗಡುವು ವಿಧಿಸಿದೆ. ಆಗ ಈ ಅರ್ಜಿ ಅಮಾನ್ಯವಾಗಲಿದೆ. ಹೀಗಾಗಿ, ಹೈಕೋರ್ಟ್ ಅನುಮತಿ ಪಡೆಯದೇ ಲೋಕಾಯುಕ್ತ ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬಾರದು ಎಂದು ಆದೇಶಿಸಬೇಕು” ಎಂದು ಕೋರಿದರು.
ರಾಜ್ಯ ಸರ್ಕಾರ ಪ್ರತಿನಿಧಿಸಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು “ಆರೋಪಿತರ ಅನುಪಸ್ಥಿತಿಯಲ್ಲಿ ಯಾವುದೇ ಪ್ರಕರಣದ ತನಿಖೆಯನ್ನು ಯಾವುದೇ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗದು. ಒಂದೊಮ್ಮೆ ಈ ನ್ಯಾಯಾಲಯವು ಸಿಬಿಐ ತನಿಖೆಗೆ ಕೋರಿರುವ ಅರ್ಜಿಯನ್ನು ಪುರಸ್ಕರಿಸಿದರೆ ಅದಕ್ಕೆ ಆಕ್ಷೇಪಿಸಿರುವ ಮೇಲ್ಮನವಿಯು ಅಮಾನ್ಯವಾಗಲಿದೆ. ಮೇಲ್ಮನವಿಗಳಲ್ಲಿ ಹಲವು ಸಾಂವಿಧಾನಿಕ ಪ್ರಶ್ನೆಗಳಿವೆ. ಈಗಾಗಲೇ ಪ್ರಕರಣವನ್ನು ಲೋಕಾಯುಕ್ತ ಪೊಲೀಸ್ ತನಿಖೆ ನಡೆಸುತ್ತಿರುವುದರಿಂದ ಈ ಅರ್ಜಿಯ ವಿಚಾರಣೆಯನ್ನು ಮೂಂದೂಡಿದರೆ ಆಕಾಶ ಕಳಚಿ ಬೀಳದು. ಒಂದೊಮ್ಮೆ ನ್ಯಾಯಾಲಯವು ಅರ್ಜಿ ವಿಚಾರಣೆ ನಡೆಸಲು ಬಯಸಿದರೆ ಮುಂದೂಡಿಕೆ ಕೋರಿರುವ ಅರ್ಜಿಯನ್ನು ಔಪಚಾರಿಕವಾಗಿ ವಜಾ ಮಾಡಬೇಕು. ಇದರ ಮೇಲೆ ನಾವು ಮುಂದಿನ ನ್ಯಾಯಾಲಯದಲ್ಲಿ ಪರಿಹಾರ ಕೋರಬಹುದಾಗಿದೆ” ಎಂದರು.
ವಿಚಾರಣೆಯ ಒಂದು ಹಂತದಲ್ಲಿ ಪೀಠವು ರಾಘವನ್ ಅವರಿಗೆ “ಲೋಕಾಯುಕ್ತ ಪೊಲೀಸರು ಒಂದೊಮ್ಮೆ ವಿಚಾರಣಾಧೀನ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದರೂ ಸಿಬಿಐ ತನಿಖೆಗೆ ಸಂಬಂಧಿಸಿದಂತೆ ಆದೇಶ ಮಾಡಲು ಹೈಕೋರ್ಟ್‌ಗೆ ನಿರ್ಬಂಧವಿದೆಯೇ?” ಎಂದು ಪ್ರಶ್ನಿಸಿತು.
ಇದಕ್ಕೆ ರಾಘವನ್ ಅವರು “ಎಲ್ಲವೂ ಕ್ಲಿಷ್ಟವಾಗುತ್ತದೆ” ಎಂದರು. ಆಗ ಪೀಠವು “ಯಾವುದೇ ಕಾರಣಕ್ಕೂ ಕ್ಲಿಷ್ಟವಾಗುವುದಿಲ್ಲ. ಅರ್ಜಿದಾರರು ಅದಾಗಲೇ ನ್ಯಾಯಾಲಯದ ಮುಂದಿರುವುದರಿಂದ ಸಮಸ್ಯೆಯಾಗುವುದಿಲ್ಲ” ಎಂದು ವಿವರಿಸಿದರು.
ಇದೇ ವೇಳೆ ಮಧ್ಯಪ್ರವೇಶಿಸಿದ ದವೆ ಅವರು “ರಾಘವನ್ ತಪ್ಪಾಗಿ ಕಾನೂನು ವಿವರಿಸಿರುವುದರಿಂದ ಸೆಪ್ಟೆಂಬರ್ 24ರ ಏಕಸದಸ್ಯ ಪೀಠ (ನ್ಯಾ. ನಾಗಪ್ರಸನ್ನ) ತಪ್ಪು ಆದೇಶ ಮಾಡಿದೆ. ರಾಜ್ಯಪಾಲರ ಅನುಮತಿಯ ಕುರಿತಾಗಿ ಮಾತ್ರ ಹೈಕೋರ್ಟ್ ನಿರ್ಧರಿಸಬೇಕಿತ್ತು. ದೂರಿನ ಮೆರಿಟ್ ಏಕಸದಸ್ಯ ಪೀಠದ ಮುಂದೆ ಇರಲಿಲ್ಲ. ದೂರು ಮತ್ತು ಆರೋಪ ಸರಿಯಾಗಿದೆ ಎಂದು ಪೀಠ ಹೇಳಿದೆ. ನಮ್ಮ ಕಕ್ಷಿದಾರ ದೇವರಾಜು ವಂಚನೆ ಆರೋಪಕ್ಕೆ ಗುರಿಯಾಗಿದ್ದಾರೆ” ಎಂದರು.
ಇದಕ್ಕೆ ಪೀಠವು “ರಾಜ್ಯಪಾಲರ ಅನುಮತಿ ನಿರ್ಧರಿಸುವಾಗ ಎಲ್ಲವನ್ನೂ ಅರ್ಜಿದಾರರು ಮತ್ತು ಪ್ರತಿವಾದಿಗಳ ವಕೀಲರು ವಾದಿಸಿದರು. ಹೀಗಾಗಿ, ಎಲ್ಲದಕ್ಕೂ ಉತ್ತರಿಸಲಾಗಿದೆ. ಪ್ರಕರಣದ ಮೆರಿಟ್ ಅನ್ನೂ ನಮ್ಮ ಮುಂದೆ ಇಡಲಾಗಿತ್ತು. ಒಂದೊಮ್ಮೆ ಅಗತ್ಯವಾಗಿದ್ದರೆ ಅರ್ಜಿದಾರರು (ಸಿದ್ದರಾಮಯ್ಯ) ದೇವರಾಜು ಅವರನ್ನು ಪಕ್ಷಕಾರರನ್ನಾಗಿಸಬೇಕಿತ್ತು. ಆಕ್ಷೇಪಿತ ಆದೇಶದಲ್ಲಿ ಮೇಲ್ನೋಟಕ್ಕೆ ಇರುವುದು ಫೈಂಡಿಂಗ್ ಮಾತ್ರ” ಎಂದಿತು.
ಆಗ ದವೆ ಅವರು “ನ್ಯಾ. ನಾಗಪ್ರಸನ್ನ ಅವರ ಪೀಠದಿಂದ ಆದೇಶ ಬಂದಿದೆ ಎಂದರೆ ನಾವು ಅದನ್ನು ಅಂತಿಮ ಫೈಂಡಿಂಗ್ ಎಂದು ಪರಿಗಣಿಸುತ್ತೇವೆ” ಎಂದು ನಕ್ಕರು.