Karnataka HC and Dr. Shivamurthy Muruga Sharanaru
Karnataka HC and Dr. Shivamurthy Muruga Sharanaru 
ಸುದ್ದಿಗಳು

ಮಠ ಹಾಗೂ ವಿದ್ಯಾಪೀಠದ ಚೆಕ್‌ಗಳಿಗೆ ಸಹಿ ಹಾಕಲು ಮುರುಘಾ ಶ್ರಿಗಳಿಗೆ ಅನುಮತಿಸಿದ ಹೈಕೋರ್ಟ್‌

Bar & Bench

ಚಿತ್ರದುರ್ಗದ ಮುರುಘ ರಾಜೇಂದ್ರ ಬೃಹನ್ಮಠ ಮತ್ತು ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ವೇತನ ಪಾವತಿಸಲು ಮಠ ಮತ್ತು ವಿದ್ಯಾಪೀಠದ ಚೆಕ್‌ಗಳಿಗೆ ಸಹಿ ಹಾಕಲು ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಮುರುಘಾ ಶರಣರಿಗೆ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಅನುಮತಿಸಿದೆ.

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೊ ಮತ್ತು ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಕಾಯಿದೆ ಅಡಿ ಬಂಧಿತರಾಗಿರುವ ಆರೋಪಿ ಮುರುಘಾ ಶರಣರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ಮಠ ಮತ್ತು ವಿದ್ಯಾಪೀಠದ ಉದ್ಯೋಗಿಗಳು ಹಾಗೂ ಸಿಬ್ಬಂದಿಗೆ ವೇತನ ನೀಡುವುದಕ್ಕಾಗಿ ಚೆಕ್‌ಗಳಿಗೆ ಅಕ್ಟೋಬರ್‌ 3, 6 ಮತ್ತು 10ರಂದು ಮಾತ್ರ ಸಹಿ ಹಾಕಬಹುದು. ಸಹಿ ಪಡೆಯುವ ವ್ಯಕ್ತಿಯು ಚಿತ್ರದುರ್ಗ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದುಕೊಳ್ಳಬೇಕು. ಈ ಸಂದರ್ಭದಲ್ಲಿ ಪ್ರಕರಣದ ತನಿಖಾಧಿಕಾರಿ ಹಾಗೂ ಜೈಲು ಮೇಲ್ವಿಚಾರಕರು ಹಾಜರಿರಬೇಕು ಎಂದು ಪೀಠವು ಆದೇಶ ಮಾಡಿದೆ.

ಅಲ್ಲದೇ, ಸಹಿ ಮಾಡಿದ ಚೆಕ್‌ಗಳ ನಕಲು (ಜೆರಾಕ್ಸ್) ಪ್ರತಿಗಳನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಆದೇಶವು ಅಕ್ಟೋಬರ್ ತಿಂಗಳಿಗೆ ಮಾತ್ರ ಅನ್ವಯಿಸಲಿದೆ. ಮುಂದಿನ ತಿಂಗಳಿನಿಂದ ಚೆಕ್‌ಗಳಿಗೆ ಸಹಿ ಹಾಕುವ ಅಧಿಕಾರವನ್ನು ಶರಣರಿಂದ ಮತ್ತೊಬ್ಬರಿಗೆ ವರ್ಗಾಯಿಸುವ ಸಂಬಂಧ ಪವರ್ ಆಫ್ ಅಟಾರ್ನಿ ವ್ಯವಸ್ಥೆ ಮಾಡಬೇಕು. ಈ ಕುರಿತಾದ ಮನವಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿಬೇಕು. ಕಾನೂನು ಪ್ರಕಾರ ವಿಚಾರಣಾಧೀನ ನ್ಯಾಯಾಲಯವು ಆದೇಶ ಮಾಡಬಹುದು ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.