ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೊ ಮತ್ತು ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಕಾಯಿದೆ ಅಡಿ ಬಂಧಿತರಾಗಿರುವ ಚಿತ್ರದುರ್ಗದ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಜೈಲಿನಿಂದಲೇ ಮಠದ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ನೀಡಬೇಕು ಎಂಬ ಕೋರಿಕೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಮೆಮೊ ಹಾಗೂ ಜೊತೆಗಿನ ದಾಖಲೆಗಳ ಕುರಿತು ಕರ್ನಾಟಕ ಹೈಕೋರ್ಟ್ ಗುರುವಾರ ತೀವ್ರ ಅತೃಪ್ತಿ ವ್ಯಕ್ತಪಡಿಸಿತು.
ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮುರುಘಾ ಶರಣರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲೆ ಸ್ವಾಮಿನಿ ಗಣೇಶ್ ಮೋಹನಂಬಾಳ್ ಅವರು ಶರಣರು ಯಾವೆಲ್ಲಾ ಚೆಕ್ ಗಳಿಗೆ ಸಹಿ ಮಾಡುತ್ತಾರೆ ಎಂಬ ದಾಖಲೆಗಳನ್ನು ಪೀಠಕ್ಕೆ ಸಲ್ಲಿಸಿದರು.
ಚೆಕ್ ಗಳನ್ನು ವಿವರವಾಗಿ ಪರಿಶೀಲಿಸಿದ ಪೀಠವು "ಚೆಕ್‌ಗಳ ಮೇಲೆ ಸೆಲ್ಫ್ ಆರ್‌ಟಿಜಿಎಸ್ ಎಂದು ಬರೆಯಲಾಗಿದೆ. ₹ 14 ಲಕ್ಷ, ₹ 30... ಲಕ್ಷಗಳಷ್ಟು ಬೃಹತ್ ಮೊತ್ತದ ಈ ಚೆಕ್‌ಗಳನ್ನು ಸೆಲ್ಫ್ ಎಂದು ನಮೂದಿಸಿಕೊಂಡು ಬಂದಿದ್ದೀರಿ. ಇದು ಸರಿ ಕಾಣುತ್ತಿಲ್ಲ. ನಿಮ್ಮ ಮೆಮೊದಲ್ಲಿ ಸ್ಪಷ್ಟತೆ ಇಲ್ಲ. ನೌಕರರಿಗೆ ಸಂಬಳ ನೀಡಬೇಕಾದ ಚೆಕ್‌ಗಳು ಸೆಲ್ಫ್ ಎಂದು ತೋರಿಸುತ್ತಿದ್ದೀರಲ್ಲಾ" ಎಂದು ಶಂಕೆ ವ್ಯಕ್ತಪಡಿಸಿತು.
ಅರ್ಜಿದಾರರ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ ಕಿರಣ್ ಜವಳಿ ಅವರು "ಅರ್ಜಿದಾರರು ಸಲ್ಲಿಸಿರುವ ಪ್ರಸ್ತಾವ ಮೇಲ್ನೋಟಕ್ಕೆ ಸಮರ್ಪಕವಾಗಿಲ್ಲ. ಈ ಪ್ರಸ್ತಾವವನ್ನು ಪೀಠವು ಚಿತ್ರದುರ್ಗ ಸತ್ರ ನ್ಯಾಯಾಲಯಕ್ಕೆ ವರ್ಗಾಯಿಸುವುದು ಸೂಕ್ತ. ಅಲ್ಲಿನ ನ್ಯಾಯಾಧೀಶರೇ ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ನಿರ್ಧರಿಸಬೇಕು ಎಂದು ನಿರ್ದೇಶಿಸಬೇಕು" ಎಂದು ಕೋರಿದರು.
ಇದಕ್ಕೆ ಮೌಖಿಕವಾಗಿ ಸಮ್ಮತಿಸಿದ ಪೀಠವು "ನಿಮ್ಮ ಪ್ರಸ್ತಾವವನ್ನು ಸ್ಪಷ್ಟವಾಗಿ ವಿವರಿಸಿ. ನೌಕರರು ಹಸಿವಿನಿಂದ ಬಳಲಬಾರದು ಎಂಬುದಷ್ಟೇ ನಮ್ಮ ಕಾಳಜಿ. ಆದರೆ, ನೀವು ಈ ರೀತಿ ಸೆಲ್ಫ್ ಚೆಕ್ ಗಳನ್ನು ತೋರಿಸುತ್ತಿರುವುದು ಸರಿಯಲ್ಲ. ಸತ್ರ ನ್ಯಾಯಾಲಯ ಇದನ್ನು ತಕ್ಷಣವೇ ಪರಿಶೀಲಿಸುವಂತೆ ಆದೇಶಿಸುತ್ತೇವೆ" ಎಂದಿತು. ಅಲ್ಲದೇ, ಸ್ಪಷ್ಟವಾದ ಮೆಮೊ ಸಲ್ಲಿಸುವಂತೆ ಸೂಚಿಸಿ, ನಾಳೆಗೆ ವಿಚಾರಣೆ ಮುಂದೂಡಿತು.