Karnataka High Court
Karnataka High Court 
ಸುದ್ದಿಗಳು

ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣಕ್ಕೆ ಹೈಕೋರ್ಟ್‌ ಅಸ್ತು

Bar & Bench

ಕ್ಷಯ ರೋಗ ಮತ್ತು ರಾಜೀವ್ ಗಾಧಿ ಎದೆರೋಗಗಳ ಆಸ್ಪತ್ರೆಯ ಆವರಣದಲ್ಲಿ ‘ಗ್ಯಾಸ್ಟ್ರೋಎಂಟರಾಲಜಿ ಮತ್ತು ಅಂಗಾಂಗ ಕಸಿ ಆಸ್ಪತ್ರೆ’ ಕಟ್ಟಡ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಕೈಗೊಂಡಿದ್ದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಆರ್ ಚಂದ್ರಶೇಖರ ಮತ್ತು ವೈದ್ಯ ಡಾ. ಬಿ ರುದ್ರಪ್ಪ ಅವರು 2017ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠ ಈಚೆಗೆ ನಡೆಸಿತು.

“ಯಾವ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂಬ ಬಗ್ಗೆ ಸರ್ಕಾರ, ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು ಮತ್ತು ತಜ್ಞರು ನಿರ್ಧಾರ ಮಾಡಬೇಕು. ಉದ್ದೇಶಿತ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಅರ್ಜಿ ಪುರಸ್ಕರಿಸಲು ಯಾವುದೇ ಸೂಕ್ತ ಕಾರಣ ಇಲ್ಲ” ಎಂದು ಪೀಠವು ಅಭಿಪ್ರಾಯಪಟ್ಟಿತು.

“ಉದ್ದೇಶಿತ ಗ್ಯಾಸ್ಟ್ರೋಎಂಟರಾಲಜಿ ಮತ್ತು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಮತ್ತು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು” ಎಂದು ನಿರ್ದೇಶಿಸಿ ಅರ್ಜಿ ವಜಾಗೊಳಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ಆರ್‌. ರಮೇಶ್‌ ಅವರು “ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ಖಾಲಿ ಜಾಗದಲ್ಲಿ ಮತ್ತೊಂದು ಆಸ್ಪತ್ರೆ ನಿರ್ಮಾಣ ಮಾಡಿದರೆ ಅದು ಅಲ್ಲಿ ಈಗಾಗಲೇ ಚಿಕಿತ್ಸೆ ಪಡೆಯುವ ಕ್ಷಯ ರೋಗಿಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಕ್ಷಯ ರೋಗಿಗಳಿಗೆ ಶುದ್ಧ ಹಾಗೂ ಸ್ವಚ್ಛ ಗಾಳಿ ಪಡೆಯಲು ಸಾಧ್ಯವಾಗುವುದಿಲ್ಲ. ಆಸ್ಪತ್ರೆಯು ತನ್ನ ಜಾಗವನ್ನು ಕಳೆದುಕೊಳ್ಳಬೇಕಾಗುತ್ತದೆ. ರಾಜ್ಯ ಸರ್ಕಾರವು ಬೇರೊಂದು ಪ್ರದೇಶದಲ್ಲಿ ಗ್ಯಾಸ್ಟ್ರೋಎಂಟರಾಲಜಿ ಮತ್ತು ಅಂಗಾಂಗ ಕಸಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ಮಾಡಬಹುದು. ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿಯೇ ನಿರ್ಮಾಣ ಮಾಡುವ ಅಗತ್ಯ ಇಲ್ಲ” ಎಂದು ತಿಳಿಸಿದರು.

ಸರ್ಕಾರಿ ವಕೀಲರು “ಗ್ಯಾಸ್ಟ್ರೋಎಂಟರಾಲಜಿ ಮತ್ತು ಅಂಗಾಂಗ ಕಸಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ. ಕರ್ನಾಟಕವೊಂದರಲ್ಲೇ 2,000 ಯಕೃತ್ ಸಮಸ್ಯೆಯಿಂದ ನರಳುತ್ತಿರುವ ರೋಗಿಗಳು ಮತ್ತು 1,700 ಕಿಡ್ನಿ ಸಮಸ್ಯೆ ಹೊಂದಿರುವ ರೋಗಿಗಳು ಕಸಿಗೆ ಕಾಯುತ್ತಿದ್ದಾರೆ. ಕಳೆದ ವರ್ಷದಲ್ಲಿ ರಾಜ್ಯದಲ್ಲಿ ಕೇವಲ 60 ಅಂಗಾಂಗ ಕಸಿ ನಡೆದಿದೆ” ಎಂದು ಪೀಠದ ಗಮನಕ್ಕೆ ತಂದರು.

“ಅಂಗಾಂಗ ಕಸಿಗೆ ಅಗತ್ಯ ಮೂಲಭೂತ ಸೌರ್ಕಯ ಕಲ್ಪಿಸಲು 2014ರಲ್ಲಿ ರಾಜ್ಯ ಸರ್ಕಾರ ನಿರ್ಣಯಿಸಿದೆ. ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ಆವರಣದಲ್ಲಿ ಹೊಸದಾಗಿ 200ರಿಂದ 500 ಬೆಡ್ ಸಾಮರ್ಥ್ಯದ ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮಾಡಲು ಘೋಷಣೆ ಮಾಡಿತ್ತು. ಈ ಆಸ್ಪತ್ರೆ ನಿರ್ಮಾಣಗೊಂಡರೆ ಯಕೃತ್ ಮತ್ತು ಕಿಡ್ನಿ ಕಸಿ ಚಿಕಿತ್ಸೆಯ ವೆಚ್ಚ ಕಡಿಮೆಯಾಗಲಿದ್ದು, ಸಾರ್ವಜನಿಕರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ” ಎಂದರು.