ಕಾನೂನಿಗೆ ವಿರುದ್ಧ ₹1 ಶುಲ್ಕ ಸಂಗ್ರಹಕ್ಕೂ ಅನುಮತಿ ಇಲ್ಲ; ಕಟ್ಟಡ ಸಂಬಂಧಿ ಬಿಬಿಎಂಪಿ ಶುಲ್ಕ ರದ್ದುಪಡಿಸಿದ ಹೈಕೋರ್ಟ್‌

“ಈಗಾಗಲೇ ಶುಲ್ಕ ಪಾವತಿಸಿರುವ ಎಲ್ಲ ಅರ್ಜಿದಾರಿಗೆ ಅದನ್ನು ಮರು ಪಾವತಿ ಮಾಡಬೇಕು. ಶುಲ್ಕ ಮರುಪಾವತಿಗೆ ಅರ್ಜಿದಾರರು ಮನವಿ ಸಲ್ಲಿಸಿದರೆ 12 ವಾರಗಳಲ್ಲಿ ಅಗತ್ಯ ಆದೇಶಗಳನ್ನು ಹೊರಡಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು” ಎಂದು ಪೀಠ ಆದೇಶ ಮಾಡಿದೆ.
BBMP
BBMP

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ತನ್ನ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳಿಂದ ಪಡೆಯುತ್ತಿದ್ದ ವಿವಿಧ ಶುಲ್ಕಗಳಾದ ನೆಲ ಬಾಡಿಗೆ, ಪರವಾನಗಿ ಶುಲ್ಕ, ಕಟ್ಟಡ ನಿರ್ಮಾಣ ಪರವನಾಗಿ ಶುಲ್ಕ, ಪರಿಶೀಲನಾ ಶುಲ್ಕ ಮತ್ತು ಭದ್ರತಾ ಠೇವಣಿಗಳನ್ನು ಪಡೆಯುವ ಅಧಿಕಾರವನ್ನು ಹೊಂದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಮಹತ್ವದ ತೀರ್ಪು ನೀಡಿದೆ.

ಬಿಬಿಎಂ ಆಡಳಿತವು ಕಟ್ಟಡ ಬೈಲಾ ಅಡಿಯಲ್ಲಿ ಹಲವು ಬಗೆಯ ಶುಲ್ಕ ವಿಧಿಸುತ್ತಿರುವುದನ್ನು ಪ್ರಶ್ನಿಸಿ ಸುಂದರ ಶೆಟ್ಟಿ ಸೇರಿದಂತೆ ಹಲವರು ಸಲ್ಲಿಸಿದ್ದ ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ನಡೆಸಿದ್ದು, ಮೇಲೆ ಉಲ್ಲೇಖಿಸಲಾದ ಎಲ್ಲಾ ಶುಲ್ಕಗಳನ್ನು ರದ್ದು ಮಾಡಿ ತೀರ್ಪು ಹೊರಡಿಸಿದೆ.

“ಈಗಾಗಲೇ ಶುಲ್ಕ ಪಾವತಿಸಿರುವ ಎಲ್ಲ ಅರ್ಜಿದಾರಿಗೆ ಅದನ್ನು ಮರು ಪಾವತಿ ಮಾಡಬೇಕು. ಶುಲ್ಕ ಮರುಪಾವತಿಗೆ ಅರ್ಜಿದಾರರು ಮನವಿ ಸಲ್ಲಿಸಿದರೆ 12 ವಾರಗಳಲ್ಲಿ ಅಗತ್ಯ ಆದೇಶಗಳನ್ನು ಹೊರಡಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು” ಎಂದು ನ್ಯಾಯಾಲಯ ಆದೇಶ ಮಾಡಿದೆ.

“ಕರ್ನಾಟಕ ನಗರಾಡಳಿತ (ಕೆಎಂಸಿ) ಕಾಯಿದೆ ಅಥವಾ ನಿಯಮಗಳಿಗೆ ಸೂಕ್ತವಾದ ತಿದ್ದುಪಡಿಗಳನ್ನು ತಂದು ಕಾಯಿದೆಯ ನಿಬಂಧನೆಯಲ್ಲಿ ಆಕ್ಷೇಪಾರ್ಹವಾದ ಶುಲ್ಕಗಳನ್ನು ಸೇರಿಸಲು ರಾಜ್ಯ ಸರ್ಕಾರ ಅಥವಾ ಬಿಬಿಎಂಪಿಯನ್ನು ನಿರ್ಬಂಧಿಸಿಲ್ಲ” ಎಂದು ಪೀಠ ಹೇಳಿದೆ.

“ಸದ್ಯ ಬಿಬಿಎಂಪಿ ಕಟ್ಟಡ ಬೈಲಾ ಪ್ರಕಾರ ವಿಧಿಸುತ್ತಿರುವ ಶುಲ್ಕಗಳು ಕೆಎಂಸಿ ಕಾಯಿದೆಗೆ ವಿರುದ್ಧವಾಗಿವೆ. ಕಾನೂನಿನ ಅನುಮತಿ ಇಲ್ಲದೆ ಸಾರ್ವಜನಿಕರಿಂದ ಒಂದು ರೂಪಾಯಿ ಶುಲ್ಕ ಸಂಗ್ರಹಿಸುವುದಕ್ಕೂ ಅವಕಾಶವಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.

“ಕೆಎಂಸಿ ಕಾಯಿದೆಯ ಅಡಿಯಲ್ಲಿ ಸಂಗ್ರಹಿಸಲು ಅವಕಾಶ ಮಾಡಲಾಗಿರುವ ಶುಲ್ಕಗಳನ್ನು ಮಾತ್ರ ಸಂಗ್ರಹಿಸಬಹುದಾಗಿದೆ. ಕೆಎಂಸಿ ಕಾಯಿದೆಯ ಸೆಕ್ಷನ್‌ 295 ಮತ್ತು 423ರ ಅಡಿಯಲ್ಲಿ ಕಟ್ಟಡ ಬೈಲಾ ರಚಿಸಲು ಅವಕಾಶವಿದೆ. ಈ ಎರಡೂ ಸೆಕ್ಷನ್‌ಗಳು ಜನರ ಮೇಲೆ ಹೊಸ ಬಗೆಯ ಶುಲ್ಕ ಹೇರುವ ಅಧಿಕಾರವನ್ನು ಪಾಲಿಕೆಗೆ ನೀಡಿಲ್ಲ” ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

“ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಆಧರಿಸಿ ಶುಲ್ಕ ವಿಧಿಸುವ ಪದ್ಧತಿಯು ಸೇಚ್ಛೆಯ ತೀರ್ಮಾನವಾಗಿದ್ದು, ಇದು ಸಂವಿಧಾನದ 14ನೇ ವಿಧಿಗೆ ವಿರುದ್ಧವಾಗಿದೆ. ಮಾರ್ಗಸೂಚಿ ದರದ ಆಧಾರದಲ್ಲಿ ಶುಲ್ಕ ವಿಧಿಸುವ ವ್ಯವಸ್ಥೆಯು ಸಾರ್ವಜನಿಕರ ರಕ್ತ ಹೀರುವುದಕ್ಕೆ ಎಡೆಮಾಡಿಕೊಡುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಾರ್ಮಿಕ ಕಲ್ಯಾಣ ಸೆಸ್‌ ಸಂಗ್ರಹವನ್ನು ಊರ್ಜಿತಗೊಳಿಸಿರುವ ಪೀಠವು ಈ ಶುಲ್ಕವನ್ನು ಮುಂಗಡವಾಗಿ ಪಾವತಿಸುವಂತೆ 2007ರ ಜನವರಿ 18 ಮತ್ತು ಫೆಬ್ರುವರಿ 28ರಂದು ಹೊರಡಿಸಿದ್ದ ಆದೇಶಗಳನ್ನು ರದ್ದು ಮಾಡಿದೆ.

ಕೆರೆ ಪುನರುಜ್ಜೀವನ ಶುಲ್ಕ ವಿಧಿಸಲು 2017ರ ಜನವರಿ 27 ಮತ್ತು ಮಾರ್ಚ್‌ 30ರಂದು ಬಿಬಿಎಂಪಿ ಹೊರಡಿಸಿದ್ದ ಸುತ್ತೋಲೆಗಳನ್ನೂ ನ್ಯಾಯಾಲಯ ರದ್ದುಗೊಳಿಸಿದೆ. ನಗರ ಯೋಜನೆ ಕಾಯಿದೆಯ ಪ್ರಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂತಹ ಯೋಜನಾ ಪ್ರಾಧಿಕಾರಗಳಿಗೆ ಮಾತ್ರ ಅಂತಹ ಶುಲ್ಕ ಸಂಗ್ರಹಿಸುವ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲೆ ನಯನತಾರಾ ಅವರು “ಕಟ್ಟಡ ನಿರ್ಮಾಣ ಮಾಡುವವರಿಂದ ಅಭಿವೃದ್ಧಿ ಶುಲ್ಕ ಮತ್ತು ಕಾಂಪೌಂಡ್‌ ಶುಲ್ಕ ಮಾತ್ರ ಪಡೆಯಲು ಕಾನೂನಿನಲ್ಲಿ ಅನುಮತಿಸಲಾಗಿದೆ. ಉಳಿದಂತೆ ಆಕ್ಷೇಪಾರ್ಹವಾದ ಶುಲ್ಕಗಳು ಬಿಬಿಎಂಪಿಗೆ ನೀಡಲಾಗಿರುವ ಅಧಿಕಾರದ ದುರ್ಬಳಕೆ ಮತ್ತು ಕಾನೂನಿಗೆ ವಿರುದ್ಧವಾಗಿದೆ. ಇದು ಶುಲ್ಕವೋ ಅಥವಾ ತೆರಿಗೆಯೋ ಒಂದಕ್ಕೊಂದು ಸಂಬಂಧವಿಲ್ಲ. ಅಲ್ಲದೇ, ಆಕ್ಷೇಪಾರ್ಹವಾದ ಶುಲ್ಕಗಳು ಸಂವಿಧಾನದ 19(1)(ಜಿ) ವಿಧಿಯ ಉಲ್ಲಂಘನೆಯಾಗಿದೆ” ಎಂದು ವಾದಿಸಿದ್ದರು.

Also Read
ಬಿಬಿಎಂಪಿ ಚುನಾವಣೆ ನಡೆಸಲು ಸೂಚಿಸಿದ್ದ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್‌

“ಕರ್ನಾಟಕ ನಗರ ಯೋಜನೆ ಕಾಯಿದೆಯ ಸೆಕ್ಷನ್‌ 18(1)(ಎ) ಅಡಿ ಕೆರೆ ಪುನರುಜ್ಜೀವನ ಶುಲ್ಕವನ್ನು ಸುತ್ತೋಲೆ ಹೊರಡಿಸಿ ವಿಧಿಸಿರುವುದರಿಂದ ಅದಕ್ಕೂ ಅವಕಾಶವಿಲ್ಲ. ಬೈಲಾದ ಅಡಿ ದೊರೆತಿರುವ ಅಧಿಕಾರ ಬಳಸಿ ಪರವಾನಗಿ ಮತ್ತು ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ ವಿಧಿಸಿಸಲಾಗಿದೆ. ಕಾಯಿದೆಯಲ್ಲಿ ಅದಕ್ಕೆ ಅನುಮತಿಸಲಾಗಿಲ್ಲ. ಹೀಗಾಗಿ, ಬೈ-ಲಾಗೆ ಯಾವುದೇ ಅಧಿಕಾರ ಇರುವುದಿಲ್ಲ. ಆದ್ದರಿಂದ, ಅರ್ಜಿದಾರರಿಂದ ವಸೂಲಿ ಮಾಡಲಾಗಿರುವ ಎಲ್ಲಾ ಶುಲ್ಕವನ್ನು ಹಿಂಪಡೆಯಲು ಅವರು ಅರ್ಹರಾಗಿದ್ದಾರೆ” ಎಂದು ವಾದಿಸಿದ್ದರು.

ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಪರ ವಕೀಲ ವಿ ಶ್ರೀನಿಧಿ ಅವರು “ಬಿಬಿಎಂಪಿ ಕೇಳುತ್ತಿರುವುದು ತೆರಿಗೆ ಎಂದು ಅರ್ಜಿದಾರರು ತಪ್ಪಾಗಿ ಭಾವಿಸಿ ಮನವಿಗಳನ್ನು ಸಲ್ಲಿಸಿದ್ದಾರೆ. ಬೈಲಾದಲ್ಲಿ ಬಿಬಿಎಂಪಿಗೆ ನೀಡಲಾಗಿರುವ ಅಧಿಕಾರ ಬಳಸಿ ಶುಲ್ಕ ವಿಧಿಸಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಸಾಗಿಸುವ ಸಾಮಗ್ರಿಗಳನ್ನು ನಗರದ ರಸ್ತೆಗಳಲ್ಲಿ ಸಾಗಿಸಲಾಗುತ್ತದೆ. ಈ ರಸ್ತೆಗಳ ನಿರ್ವಹಣೆಗಾಗಿ ಶುಲ್ಕ ಸಂಗ್ರಹಿಸಲಾಗುತ್ತದೆ. ಇದನ್ನು ಅಸಮರ್ಥನೀಯ ಎನ್ನಲಾಗದು. ಕಟ್ಟಡ ನಿರ್ಮಾಣಕ್ಕೆ ಸಂಗ್ರಹಿಸಲಾದ ಸಾಮಗ್ರಿಗಳನ್ನು ರಸ್ತೆಯಲ್ಲಿಯೇ ಇಡಲಾಗಿರುತ್ತದೆ ಎಂಬುದನ್ನು ಗಮನಿಸಬೇಕು” ಎಂದು ಶುಲ್ಕ ವಿಧಿಸಿದ್ದನ್ನು ಸಮರ್ಥಿಸಿದ್ದರು.

Related Stories

No stories found.
Kannada Bar & Bench
kannada.barandbench.com