ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ತನಿಖಾ ವರದಿಯ ದಾಖಲೆಗಳನ್ನು ಕಚೇರಿಗೆ ಬಂದು ಪಡೆಯುವಂತೆ ಹೈಕೋರ್ಟ್ ಲೋಕಾಯುಕ್ತ ಪೊಲೀಸರಿಗೆ ಮಂಗಳವಾರ ತಿಳಿಸಿದೆ.
ಲೋಕಾಯುಕ್ತ ತನಿಖಾಧಿಕಾರಗಳ ಪರವಾಗಿ ಹಾಜರಾಗಿದ್ದ ವಕೀಲ ವೆಂಕಟೇಶ್ ಅರಬಟ್ಟಿ ಅವರು “ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ತನಿಖಾ ದಾಖಲೆಗಳನ್ನು ಪಡೆಯಲು ಅನುಮತಿಸುವಂತೆ ಕೋರುವುದನ್ನು ಮರೆತಿದ್ದೆ. ಆ ದಾಖಲೆಗಳನ್ನು ಖುದ್ದು ನ್ಯಾಯಾಲಯದಲ್ಲಿರುವ ಇನ್‌ಸ್ಪೆಕ್ಟರ್ ಅನಿಲ್ ಕಾಳೆ ಅವರ ನೀಡಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು.
ಆಗ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು “ತನಿಖಾ ದಾಖಲೆಗಳನ್ನು ಯಾರಿಗೆ ಕೊಡಬೇಕು? ಸಂಬಂಧಿತ ಅಧಿಕಾರಿಯು ಸ್ವೀಕಾರ ಮಾಡಿದ್ದಕ್ಕೆ ಸಹಿ ಮಾಡಬೇಕು. ಅವರನ್ನು ಚೇಂಬರ್‌ಗೆ ಬಂದು ಪಡೆಯುವುದಕ್ಕೆ ಹೇಳಿ” ಎಂದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದ ಇನ್‌ಸ್ಪೆಕ್ಟರ್ ಅವರ ವೇಷಭೂಷಣದ ಬಗ್ಗೆ ಪೀಠವು ಅಸಮಾಧಾನ ವ್ಯಕ್ತಪಡಿಸಿತು. “ಟೋಪಿ ಹಾಕಿಕೊಂಡು ಬಂದಿದ್ದೀರಲ್ಲಾ ಇದೇನು ಸಿನಿಮಾ ಥಿಯೇಟರ್ ಎಂದುಕೊಂಡಿದ್ದೀರಾ? ನಿಮಗೆ ನ್ಯಾಯಾಲಯಕ್ಕೆ ಯಾವ ಉಡುಪು ಧರಿಸಬೇಕು ಎಂಬುದು ಗೊತ್ತಿಲ್ಲವೇ?” ಎಂದು ಕಿಡಿಕಾರಿತು.
ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ತನಿಖಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದು ಆದೇಶಿಸಿದ್ದರು. ಇದರ ಅನ್ವಯ ಲೋಕಾಯುಕ್ತ ಪೊಲೀಸರು ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದರು.
ಫೆಬ್ರವರಿ 7ರಂದು ಹೈಕೋರ್ಟ್ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿಯನ್ನು ವಜಾ ಮಾಡಿತ್ತು. ಈಗ ವಿಚಾರಣಾಧೀನ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ತನಿಖಾ ವರದಿ ಸಲ್ಲಿಸಬೇಕಿದೆ.