
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಬಿಂದುವಾಗಿರುವ ಮುಡಾ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಲು ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರಾಕರಿಸುವ ಮೂಲಕ ಮಹತ್ವದ ಆದೇಶ ಮಾಡಿದೆ. ಆ ಮೂಲಕ ರಾಜಕೀಯ ಕಾರಣಗಳಿಗಾಗಿ ಅತೀವ ಪ್ರಾಮುಖ್ಯತೆ ಪಡೆದಿರುವ ಮುಡಾ ಪ್ರಕರಣದ ಈವರೆಗಿನ ಕಾನೂನು ಹೋರಾಟದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮೊದಲ ಬಾರಿಗೆ ಯಶಸ್ಸು ಸಿಕ್ಕಂತಾಗಿದೆ.
ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಮೈಸೂರಿನ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ತಿರಸ್ಕರಿಸಿದೆ.
"ಲೋಕಾಯುಕ್ತ, ಲೋಕಾಯುಕ್ತ ಸಂಸ್ಥೆಗೆ ಪ್ರಶ್ನಾರ್ಹವಾದ ಸ್ವಾತಂತ್ರ್ಯವಿದೆಯೇ? ಯಾವ ಸಂದರ್ಭದಲ್ಲಿ ಸಾಂವಿಧಾನಿಕ ನ್ಯಾಯಾಲಯಗಳು ತನಿಖೆ, ಮುಂದುವರಿದ ತನಿಖೆ ಮತ್ತು ಮರು ತನಿಖೆಯನ್ನು ಸಿಬಿಐಗೆ ನೀಡಿವೆ? ಯಾವ ಸಂದರ್ಭದಲ್ಲಿ ನ್ಯಾಯಾಲಯವು ಸಿಬಿಐ ತನಿಖೆಗೆ ನಿರಾಕರಿಸಬೇಕು? ಲೋಕಾಯುಕ್ತವು ತನಿಖೆ ನಡೆಸಿ ಸಲ್ಲಿಸಿರುವ ದಾಖಲೆಗಳನ್ನು ನೋಡಿದ ಬಳಿಕ ಪ್ರಕರಣವನ್ನು ಸಿಬಿಐಗೆ ಮುಂದುವರಿದ ತನಿಖೆ ನಡೆಸಲು ಅಥವಾ ಮರು ತನಿಖೆಗೆ ಆದೇಶಿಸಬೇಕೆ? ಎಂಬ ಮೂರು ವಿಚಾರಗಳನ್ನು ರೂಪಿಸಲಾಗಿದ್ದು, ಅವುಗಳಿಗೆ ಕೆಳಗಿನಂತೆ ಉತ್ತರಿಸಲಾಗಿದೆ. ಲೋಕಾಯುಕ್ತ ಮತ್ತು ಲೋಕಾಯುಕ್ತ ಸಂಸ್ಥೆಯು ಪ್ರಶ್ನಾರ್ಹವಾದ ಸ್ವಾತಂತ್ರ್ಯದಿಂದ ಬಳಲುತ್ತಿಲ್ಲ. ಲೋಕಾಯುಕ್ತ ಸಂಸ್ಥೆಯು ನಡೆಸಿರುವ ತನಿಖೆಯು ಲೋಪದೋಷ, ಪಕ್ಷಪಾತದಿಂದ ಕೂಡಿದೆ ಎಂದು ತನಿಖಾ ವರದಿಯನ್ನು ಪರಿಶೀಲಿಸಿದಾಗ ಕಂಡುಬಂದಿಲ್ಲ. ಹೀಗಾಗಿ, ಇದನ್ನು ಮುಂದುವರಿದ ತನಿಖೆ ಅಥವಾ ಮರು ತನಿಖೆ ನಡೆಸಲು ಸಿಬಿಐಗೆ ಆದೇಶಿಸಲಾಗದು. ಬಾಹ್ಯ ಶಕ್ತಿಗಳಿಂದ ಲೋಕಾಯುಕ್ತ ಸಂಸ್ಥೆಯು ಪ್ರಭಾವಕ್ಕೆ ತುತ್ತಾಗುವ ಸಾಧ್ಯತೆಯ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತಮ್ಮ ತೀರ್ಪುಗಳಲ್ಲಿ ಹೇಳಿವೆ. ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಅರ್ಜಿ ವಜಾ ಮಾಡಲಾಗಿದೆ" ಎಂದು ನ್ಯಾಯಾಲಯವು ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಈ ಹಿಂದಿನ ವಿಚಾರಣೆ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರು “ತನಿಖೆಗೆ ಅಗತ್ಯವಾದ ಅನುಮತಿ ಕೋರಿ ಅರ್ಜಿದಾರರು ರಾಜ್ಯಪಾಲರಿಗೆ ಸಲ್ಲಿಸಿದ್ದ ಕೋರಿಕೆಯನ್ನು ಈ ನ್ಯಾಯಾಲಯ ಎತ್ತಿ ಹಿಡಿದಿದೆ. ಲೋಕಾಯುಕ್ತ ತನಿಖೆ ಕೋರಿದ್ದಕ್ಕೂ ಒಪ್ಪಿಗೆ ದೊರೆತಿದೆ. ಹಾಲಿ ಪ್ರಕರಣದಲ್ಲಿ ತನಿಖೆಗೆ ಒಪ್ಪಿಗೆ ನೀಡಿರುವುದನ್ನು ಎತ್ತಿಹಿಡಿದಿರುವ ಆದೇಶವನ್ನು ಆಧರಿಸಲಾಗಿದೆ. ಆದರೆ, ಆ ಆದೇಶವನ್ನು ನಾವು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದ್ದೇವೆ. ಇದನ್ನು ಭಾಗಶಃ ಅಥವಾ ಪೂರ್ಣವಾಗಿ ವಿಭಾಗೀಯ ಪೀಠ ಪುರಸ್ಕರಿಸಿದರೆ ಆಗ ಒಂದೊಮ್ಮೆ ಸಿಬಿಐ ತನಿಖೆಗೆ ಅನುಮತಿಸಿದಾದಲ್ಲಿ ಆ ತನಿಖೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಲಿದೆ” ಎಂದಿದ್ದರು.
“ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿರುವ ನಂತರ ಯಾವುದೇ ಅಕ್ರಮವಾಗಿರುವುದನ್ನು ಅರ್ಜಿದಾರರು ಸಾಬೀತುಪಡಿಸಿಲ್ಲ. ಮುಖ್ಯಮಂತ್ರಿಯಾಗಿರುವ ಕಾರಣಕ್ಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದರೆ ಹೇಗೆ? ಏನಾದರೂ ಕಾರಣ ತೋರಿಸಬೇಕಲ್ಲವೇ? ಆರೋಪಿಯು ಹೇಗೆ ತನಿಖಾ ಸಂಸ್ಥೆಯನ್ನು ಆಯ್ದುಕೊಳ್ಳಲು ಸಾಧ್ಯವಿಲ್ಲವೋ ಹಾಗೆಯೇ ದೂರುದಾರರು ಕೂಡ ಇಂಥದ್ದೇ ತನಿಖಾ ಸಂಸ್ಥೆ ತನಿಖೆ ನಡೆಸಬೇಕು ಎಂದು ಕೇಳಲಾಗದು” ಎಂದಿದ್ದರು.
“ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಅಂಥ ವಿಶೇಷ ಸಂದರ್ಭವೇನಿದೆ ಎಂಬುದನ್ನು ಅರ್ಜಿದಾರರು ಪೀಠಕ್ಕೆ ವಿವರಿಸಿಲ್ಲ. ಮುಖ್ಯಮಂತ್ರಿ ಭಾಗಿಯಾಗಿರುವುದರಿಂದ ಪ್ರಕರಣವನ್ನು ಸ್ವಯಂಚಾಲಿತವಾಗಿ ಸಿಬಿಐಗೆ ನೀಡಬೇಕು ಎಂಬ ಯಾವುದೇ ತತ್ವವಿಲ್ಲ. ಪ್ರಕರಣ ರಾಜಕೀಯಗೊಂಡಿರುವುದರಿಂದ ನ್ಯಾಯಾಲಯವು ಅಪವ್ಯಾಖ್ಯಾನಕ್ಕೆ ಅಸ್ತು ಎನ್ನಬಾರದು” ಎಂದು ಕೋರಿದ್ದರು.
ಸಿಎಂ ಪತ್ನಿ ಪಾರ್ವತಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ನ್ಯಾಯಾಲಯದ ಆದೇಶದಲ್ಲಿ ವಿವಾದಿತ ಭೂಮಿಯ ಬಗೆಗಿನ ಹಕ್ಕಿನ ಬಗ್ಗೆ ತನ್ನ ವಿರುದ್ಧ ತಪ್ಪಾಗಿ ದಾಖಲು ಮಾಡಿದೆ. ಹೀಗಾಗಿ, ನ್ಯಾಯಾಲಯವು ಸ್ವಯಂಪ್ರೇರಿತ ಅಧಿಕಾರ ಬಳಸಿ ಏಕಸದಸ್ಯ ಪೀಠವು ತನ್ನ ಆದೇಶದಲ್ಲಿ ಪಾರ್ವತಿ ಅವರ ಬಗ್ಗೆ ಪ್ರಸ್ತಾಪಿಸಿರುವ ಅಂಶಗಳನ್ನು ಹಿಂಪಡೆಯಬೇಕು” ಎಂದು ಕೋರಿದ್ದರು.
“ಪ್ರಧಾನ ಮಂತ್ರಿ ಕಾರ್ಯಾಲಯದ ಅಡಿಯಲ್ಲಿ ಸಿಬಿಐ ಕಾರ್ಯನಿರ್ವಹಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತ ಮಾಡುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತದಿಂದ ತನಿಖೆಯನ್ನು ಪಡೆದುಕೊಳ್ಳಲು ಅವರಿಗೆ ಇರುವ ಏಕೈಕ ಆಧಾರ ರಾಜಕೀಯ. ಸಿಬಿಐ ಸ್ವತಂತ್ರ ಸಂಸ್ಥೆಯಲ್ಲ” ಎಂದು ಆಕ್ಷೇಪಿಸಿದ್ದರು.
ಆಕ್ಷೇಪಾರ್ಹವಾದ ಭೂಮಿ ಮಾಲೀಕ ಜೆ ದೇವರಾಜು ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದುಷ್ಯಂತ್ ಧವೆ ಅವರು “ಸಿಬಿಐ ತನಿಖೆ ಏಕೆ ಮಾಡಬೇಕು ಎಂಬುದಕ್ಕೆ ಪೂರಕವಾದ ವಾಸ್ತವಿಕ ವಿಚಾರಗಳನ್ನು ಅರ್ಜಿದಾರರು ತೋರಿಸಿಲ್ಲ. ಇಲ್ಲಿಯವರೆಗೆ ಸುಮ್ಮನಿದ್ದು, 15 ವರ್ಷಗಳ ಬಳಿಕ 2024ರಲ್ಲಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದಕ್ಕೂ ಮುನ್ನ, ಲೋಕಾಯುಕ್ತ ಪೊಲೀಸರು ತನಿಖೆ ನಡೆಸಲು ಆದೇಶಿಸಬೇಕು ಎಂದು ವಿಶೇಷ ನ್ಯಾಯಾಲಯಕ್ಕೆ ಪ್ರಮಾಣೀಕೃತ ಅರ್ಜಿ ಸಲ್ಲಿಸಿದ್ದರು” ಎಂದಿದ್ದರು.
“ಹೈಕೋರ್ಟ್ ಸೆಪ್ಟೆಂಬರ್ 24ರಂದು ಆದೇಶಿಸಿದ್ದು, ಆನಂತರ ಸ್ವತಂತ್ರ ಸಂಸ್ಥೆಯ ತನಿಖೆ ಕೋರಿ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದಾರೆ. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಜುಗರ ಉಂಟು ಮಾಡುವ ಏಕೈಕ ಉದ್ದೇಶವನ್ನು ಅರ್ಜಿದಾರರು ಹೊಂದಿದ್ದಾರೆ. ಅರ್ಜಿದಾರರ ನಡತೆಯ ಬಗ್ಗೆ ಆಕ್ಷೇಪಗಳಿದ್ದು, ಸಂವಿಧಾನದ 226ನೇ ವಿಧಿಯಡಿ ನ್ಯಾಯಾಲಯ ಆದೇಶ ಮಾಡಬಾರದು. ಲೋಕಾಯುಕ್ತ ಪೊಲೀಸರಿಗೆ ತನಿಖೆಗೆ ಆದೇಶಿಸಿರುವುದರಿಂದ ಅರ್ಜಿಯನ್ನು ವಜಾ ಮಾಡಬೇಕು” ಎಂದು ಕೋರಿದ್ದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು “ಲೋಕಾಯುಕ್ತ ತನಿಖೆಯಲ್ಲಿ ದೋಷವಿದೆ ಎನಿಸಿದಾಗ ಉಭಯ ಪಕ್ಷಕಾರರನ್ನು ಆಲಿಸಿ ಆನಂತರ ಅದನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕೆ ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು. ಹಾಲಿ ಪ್ರಕರಣದಲ್ಲಿ ತನಿಖೆ ಏನಾಗಿದೆ ಎಂದು ಯಾರಿಗೂ ತಿಳಿದಿಲ್ಲ. ಮುಖ್ಯಮಂತ್ರಿ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಲೋಕಾಯುಕ್ತರು ತನಿಖೆ ನಡೆಸಬಾರದು ಎಂಬುದು ಅರ್ಜಿದಾರರ ವಾದವಾಗಿದೆ. ಹೀಗಾದಲ್ಲಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ನಿರ್ದೇಶಿಸಿರುವ ಲೋಕಾಯುಕ್ತ ಕಾಯಿದೆಯನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು” ಎಂದಿದ್ದರು.
“ಶಾಸನದಲ್ಲಿ ಸಿಎಂ ಅವರನ್ನೂ ತನಿಖೆ ಒಳಪಡಿಸಬಹುದು ಎಂದು ಹೇಳಲಾಗಿದೆ. ಇದರ ಅಡಿ ತನಿಖೆ ಮಾತ್ರ ನಡೆಸಿಲ್ಲ, ದೋಷಿ ಎಂದೂ ಘೋಷಿಸಲಾಗಿದೆ. ಈ ಹಿಂದೆ ಎಂದೂ ಎದುರಾಗದ ವಿಚಾರಗಳು ಹಾಲಿ ಪ್ರಕರಣದಲ್ಲಿ ಉದ್ಭವಿಸಿವೆ. ಕಾನೂನಿನ ಯಾವ ನಿಯಮದ ಅಡಿ ಪ್ರಕರಣವನ್ನು ನ್ಯಾಯಮೂರ್ತಿಗಳು ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ತಿಳಿಯದಾಗಿದೆ. ಹಾಲಿ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು. ಹೆಚ್ಚೆಂದರೆ ಹೆಚ್ಚಿನ ತನಿಖೆಗೆ ಆದೇಶಿಸಬಹುದು. ಇದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೋಗಬೇಕು” ಎಂದಿದ್ದರು.
“ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವುದರಿಂದ ಲೋಕಾಯುಕ್ತ ಪೊಲೀಸ್ ಕಳಂಕಿತವಾಗಿದೆ ಎನ್ನುವುದಾದರೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ ಸಹ ಕಳಂಕಿತ ಎಂದು ಹೇಳಬೇಕಾಗುತ್ತದೆ. ಹೀಗೆ ಹೇಳುತ್ತಾ ಹೋದರೆ ಹೇಗೆ? ಇಲ್ಲಿ ಇರುವುದು ಸಾಂಸ್ಥಿಕ ಸ್ವಾತಂತ್ರ್ಯದ ಪ್ರಶ್ನೆಯಲ್ಲ. ಆದರೆ, ಪ್ರಕರಣವನ್ನು ಸ್ವತಂತ್ರವಾಗಿ ತನಿಖೆ ನಡೆಸಲಾಗುತ್ತಿದೆಯೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದೆ” ಎಂದಿದ್ದರು.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಮಣೀಂದರ್ ಸಿಂಗ್ ಅವರು “ಅತ್ಯುನ್ನತ ಸ್ಥಾನದಲ್ಲಿರುವವರು (ಸಿದ್ದರಾಮಯ್ಯ) ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸ್ವತಂತ್ರ ತನಿಖಾ ಸಂಸ್ಥೆಗೆ, ವಿಶೇಷವಾಗಿ ಸಿಬಿಐಗೆ ಪ್ರಕರಣದ ತನಿಖೆಯನ್ನು ನೀಡಬೇಕು. ಸ್ಥಳೀಯ ಪೊಲೀಸರ ಮೇಲೆ ದೋಷಾರೋಪ ಮಾಡುತ್ತಿಲ್ಲ. ನ್ಯಾಯಯುತವಾಗಿ ತನಿಖೆ ನಡೆಯುತ್ತಿಲ್ಲ ಎಂದಾದರೆ ನ್ಯಾಯಾಲಯವು ತನಿಖೆಯನ್ನು ಸ್ವತಂತ್ರ ಸಂಸ್ಥೆಗೆ ವರ್ಗಾಯಿಸಲು ಹಿಂಜರಿಯಬಾರದು” ಎಂದಿದ್ದರು.
ಸಿಎಂ ಭಾವಮೈದುನ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ಲೋಕಾಯುಕ್ತದಿಂದ ಪಾರದರ್ಶಕ ತನಿಖೆ ನಡೆಯುವುದಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಊಹಾತ್ಮಕ ವಾದ ಮಂಡಿಸಿದ್ದಾರೆ. ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯಲ್ಲ ಎಂದು ಹೇಳಲಾಗಿದೆ. ಅತ್ಯುನ್ನತ ಸ್ಥಾನದಲ್ಲಿರುವ ಮುಖ್ಯಮಂತ್ರಿಯಂಥವರು ಆರೋಪಿಯಾಗಿದ್ದರೆ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ನೀಡಬಾರದು ಎಂಬುದು ಅರ್ಜಿದಾರರ ವಾದ. ಅರ್ಜಿಯನ್ನು ಅಕಾಲಿಕವಾಗಿ ಸಲ್ಲಿಕೆ ಮಾಡಲಾಗಿದೆ” ಎಂದಿದ್ದರು.