Karnataka HC and Housing Minister V Somanna  
ಸುದ್ದಿಗಳು

ಸಚಿವ ಸೋಮಣ್ಣ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಪುನರ್‌ ಪರಿಗಣಿಸಲು ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್‌ ಆದೇಶ

ಸಿಆರ್‌ಪಿಸಿ 202ರ ಅಡಿ ತನಿಖಾಧಿಕಾರಿಯಿಂದ ಸ್ಪಷ್ಟನೆ ಪಡೆದು ಪ್ರಕರಣವನ್ನು ಪುನರ್‌ ಪರಿಗಣಿಸಬೇಕು ಎಂದು ವಿಶೇಷ ನ್ಯಾಯಾಲಯಕ್ಕೆ ಪೀಠವು ಆದೇಶ ಮಾಡಿದೆ.

Bar & Bench

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ವಸತಿ ಸಚಿವ ವಿ ಸೋಮಣ್ಣ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಪುನರ್‌ ಪರಿಗಣಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮರಳಿಸಿ ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶ ಮಾಡಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಮ್ಮ ವಿರುದ್ಧ ಜಾರಿಗೊಳಿಸಿರುವ ಸಮನ್ಸ್ ರದ್ದುಪಡಿಸುವಂತೆ ಕೋರಿ ಸಚಿವ ವಿ ಸೋಮಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್‌ ದತ್‌ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಸಿಆರ್‌ಪಿಸಿ 202ರ ಅಡಿ ತನಿಖಾಧಿಕಾರಿಯಿಂದ ಸ್ಪಷ್ಟನೆ ಪಡೆದು ಪ್ರಕರಣವನ್ನು ಪುನರ್‌ ಪರಿಗಣಿಸಬೇಕು ಎಂದು ವಿಶೇಷ ನ್ಯಾಯಾಲಯಕ್ಕೆ ಪೀಠವು ಆದೇಶ ಮಾಡಿದೆ.

ಪ್ರಕರಣದ ವಿವರ: ಸಚಿವ ವಿ ಸೋಮಣ್ಣ ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ನಗರದ ರಾಮಕೃಷ್ಣ ಎಂಬುವರು 2013ರಲ್ಲಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯವು ತನಿಖೆಗೆ ಆದೇಶಿಸಿತ್ತು. ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ದೂರುದಾರರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ‘ಬಿ ರಿಪೋರ್ಟ್’ ಸಲ್ಲಿಸಿದ್ದರು.

ಈ ಮಧ್ಯೆ ಪ್ರಕರಣದ ವಿಚಾರಣೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಆಗಿತ್ತು. ತನಿಖೆ ಅಸಮರ್ಪಕವಾಗಿದೆ, ಸೋಮಣ್ಣ ಶಾಸಕರಾಗುವ ಮೊದಲು ಹೊಂದಿದ್ದ ಆದಾಯ ಹಾಗೂ ಶಾಸಕರಾದ ನಂತರ ಹೊಂದಿದ ಆದಾಯ ಮತ್ತು ಆಸ್ತಿ ಕುರಿತು ತನಿಖಾಧಿಕಾರಿಗಳು ಸೂಕ್ತ ವಿವರಣೆ ನೀಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಿ ರಿಪೋರ್ಟ್ ರದ್ದುಗೊಳಿಸಿತ್ತು. ಜತೆಗೆ, ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ಸೋಮಣ್ಣ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಆದೇಶ ರದ್ದು ಕೋರಿ ಸೋಮಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.