[ಅಕ್ರಮ ಆಸ್ತಿ ಗಳಿಕೆ ಪ್ರಕರಣ] ಸಚಿವ ಸೋಮಣ್ಣ ನಿರೀಕ್ಷಣಾ ಜಾಮೀನು ಮನವಿ ವಜಾ ಮಾಡಿದ ಜನಪ್ರತಿನಿಧಿಗಳ ನ್ಯಾಯಾಲಯ

ಆರೋಪಿ ಸೋಮಣ್ಣ ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಜಾಮೀನು ಮನವಿ ಸಲ್ಲಿಸಿದ ದಿನದಂದೇ ಆಕ್ಷೇಪಣೆ ಸಲ್ಲಿಸುವುದಾಗಿ ಹೇಳಿರುವ ದೂರುದಾರ ಪರ ವಕೀಲರ ಹೇಳಿಕೆಯನ್ನು ನ್ಯಾಯಾಲಯವು ದಾಖಲಿಸಿಕೊಂಡಿತು.
Housing Minister V Somanna and City Civil court 
Housing Minister V Somanna and City Civil court 

ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವ ವಸತಿ ಸಚಿವ ವಿ ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ ಎಂದು ಹೇಳಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮನವಿಯನ್ನು ವಜಾಗೊಳಿಸಿದೆ (ವಿ ಸೋಮಣ್ಣ ವರ್ಸಸ್‌ ರಾಮಕೃಷ್ಣ).

ಸಚಿವ ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆಯನ್ನು ಬುಧವಾರ ನಡೆಸಿ, ಆದೇಶ ಕಾಯ್ದಿರಿಸಿದ್ದ 110ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹಾಗೂ ಹಾಲಿ ಮತ್ತು ಮಾಜಿ ಶಾಸಕ ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ ಜಯಂತ್‌ ಕುಮಾರ್ ಅವರು ಶುಕ್ರವಾರ ಆದೇಶ ಪ್ರಕಟಿಸಿದರು.

ಆರೋಪಿ ಸೋಮಣ್ಣ ಅವರು ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಜಾಮೀನು ಮನವಿ ಸಲ್ಲಿಸಿದ ದಿನದಂದೇ ಆಕ್ಷೇಪಣೆ ಸಲ್ಲಿಸುವುದಾಗಿ ಬೆಂಗಳೂರಿನ ಮೂಡಲಪಾಳ್ಯದ ದೂರುದಾರ ರಾಮಕೃಷ್ಣ ಅವರ ವಕೀಲ ಬಿ ಎನ್‌ ಜಗದೀಶ್‌ ಅವರು ಹೇಳಿರುವುದನ್ನು ದಾಖಲಿಸಿಕೊಂಡಿರುವುದಾಗಿ ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ನ್ಯಾಯಾಲಯವು ಆರೋಪಿ ಸೋಮಣ್ಣ ಅವರ ವಿರುದ್ಧ ವಾರೆಂಟ್‌ ಜಾರಿ ಮಾಡಿಲ್ಲ. ಪ್ರಕರಣದಲ್ಲಿ ಪ್ರತಿವಾದಿಗಳಾಗಿರದ ಪೊಲೀಸರಿಗೆ ಒಂದೊಮ್ಮೆ ಸೋಮಣ್ಣ ಅವರನ್ನು ಬಂಧಿಸಿದರೆ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಎಂದು ನಿರ್ದೇಶಿಸಲಾಗದು ಎಂದು ಆದೇಶದಲ್ಲಿ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸೋಮಣ್ಣ ಪರ ವಕೀಲ ಪಿ ನಾರಾಯಣಸ್ವಾಮಿ ಅವರು, “ಏಪ್ರಿಲ್‌ 16ಕ್ಕೆ ವಿಚಾರಣೆಯಲ್ಲಿ ಭಾಗವಹಿಸುವಂತೆ ಸಚಿವ ಸೋಮಣ್ಣ ಅವರಿಗೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ. ಅಂದು ಸೋಮಣ್ಣ ವಿಚಾರಣೆಗೆ ಹಾಜರಾದರೆ ದೂರುದಾರ ರಾಮಕೃಷ್ಣ ಅವರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಬಹುದು. ಇಡೀ ಪ್ರಹಸನದ ಹಿಂದಿನ ಉದ್ದೇಶ ಕನಿಷ್ಠ ಒಂದು ದಿನಕ್ಕಾದರೂ ಸೋಮಣ್ಣ ಅವರನ್ನು ಜೈಲಿಗೆ ಕಳುಹಿಸುವುದಾಗಿದೆ” ಎಂದು ವಾದಿಸಿದ್ದರು.

ರಾಮಕೃಷ್ಣ ಅವರ ವಕೀಲ ಬಿ ಎನ್‌ ಜಗದೀಶ್‌ ಅವರು “ನ್ಯಾಯಾಲಯವು ಆರೋಪಿ ಸೋಮಣ್ಣ ಅವರಿಗೆ ವಾರೆಂಟ್‌ ಜಾರಿ ಮಾಡಿಲ್ಲ. ಬಂಧನ ಭೀತಿ ಇಲ್ಲದಿರುವುದರಿಂದ ನಿರೀಕ್ಷಣಾ ಜಾಮೀನು ಕೋರಿರುವ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ. ಸೋಮಣ್ಣ ಅವರು ಜಾಮೀನು ಕೋರಿ ಮನವಿ ಸಲ್ಲಿಸುವ ದಿನದಂದೇ ಆಕ್ಷೇಪಣೆ ಸಲ್ಲಿಸಲಾಗುವುದು” ಎಂದಿದ್ದರು. ದೂರುದಾರರ ಪರ ವಕೀಲರ ಈ ವಾದವನ್ನು ಒಪ್ಪಿರುವ ನ್ಯಾಯಾಲಯವು ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಮನವಿಯನ್ನು ವಜಾ ಮಾಡಿದೆ.

ಸೋಮಣ್ಣ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ (ಎಸಿಬಿ) ಸಲ್ಲಿಸಿರುವ ಬಿ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ತಿರಸ್ಕರಿಸಿದ್ದು, ಅವರ ವಿರುದ್ಧ ವಿಶೇಷ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಮಹತ್ವದ ಆದೇಶ ಮಾಡಿತ್ತು. ಅಲ್ಲದೇ, ಏಪ್ರಿಲ್‌ 16ರಂದು ಖುದ್ದು ಹಾಜರಾಗುವಂತೆ ಸಚಿವ ಸೋಮಣ್ಣ ಅವರಿಗೆ ಸಮನ್ಸ್‌ ಜಾರಿ ಮಾಡಿದೆ. ಸೋಮಣ್ಣ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್‌ 13(1)(ಬಿ) (ಡಿ) ಮತ್ತು (ಇ) ಜೊತೆಗೆ ಸೆಕ್ಷನ್‌ 13(2)ರ ಅಡಿ ಪ್ರಕರಣ ದಾಖಲಿಸಲು ನ್ಯಾಯಾಲಯವು ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಸೋಮಣ್ಣ ನಿರೀಕ್ಷಣಾ ಜಾಮೀನು ಕೋರಿದ್ದರು.

Also Read
[ಸಚಿವ ಸೋಮಣ್ಣ ಅಕ್ರಮ ಆಸ್ತಿ ಪ್ರಕರಣ] ಏಪ್ರಿಲ್‌ 1ಕ್ಕೆ ನಿರೀಕ್ಷಣಾ ಜಾಮೀನು ಮನವಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಬೆಂಗಳೂರಿನ ಜನತಾ ಬಜಾರ್‌ನಲ್ಲಿ 1974ರಲ್ಲಿ ಮಾರಾಟ ಸಹಾಯಕರಾಗಿ ಕೆಲಸಕ್ಕೆ ಸೇರಿದಾಗ ಸೋಮಣ್ಣ ಅವರ ಮಾಸಿಕ ಸಂಬಳವು 231 ರೂಪಾಯಿಗಳಾಗಿತ್ತು. ಒಟ್ಟು ಹತ್ತು ವರ್ಷದ ಅವಧಿಯಲ್ಲಿ ಸೋಮಣ್ಣ ಅವರ ಆದಾಯವು ₹15,330 ಆಗಿತ್ತು. ನಗರಸಭೆ ಸದಸ್ಯರಾಗಿದ್ದ ಹತ್ತು ವರ್ಷಗಳ ಅವಧಿಯಲ್ಲಿ ಅವರ ಒಟ್ಟು ಆದಾಯವು ಭತ್ಯೆ ಸಹಿತ ₹71,437 ಆಗಿತ್ತು. ಕರ್ನಾಟಕ ಲೋಕಾಯುಕ್ತ ಕಾಯಿದೆ ಅಡಿ ಅವರು ಸ್ವಯಂ ಘೋಷಣೆ ಮಾಡಿಕೊಂಡಿರುವಂತೆ 1993-94 ರಿಂದ 2009-10ರ ಅವಧಿಯಲ್ಲಿ ಅವರ ಆಸ್ತಿಯು ₹18,49,89,441 ಆಗಿದೆ. ಸುಮಾರು ₹12.42 ಕೋಟಿ ಅಕ್ರಮ ಆಸ್ತಿ ಕಂಡುಬಂದಿದೆ. ಈ ಅಕ್ರಮ ಆಸ್ತಿಯ ಪ್ರಮಾಣ ಶೇ. 204 ಆಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ.

Attachment
PDF
V Somanna V. Ramakrishna.pdf
Preview

Related Stories

No stories found.
Kannada Bar & Bench
kannada.barandbench.com