Karnataka High Court
Karnataka High Court 
ಸುದ್ದಿಗಳು

ನೆಲಮಹಡಿ ಕಚೇರಿಗಳ ಸ್ಥಳಾಂತರ: ಸರ್ಕಾರದ ಜೊತೆ ಸಭೆಗೆ ಎಜಿ ಕೋರಿಕೆ; ಪರಿಗಣನೆಗೆ ಮುಂದಾದ ಹೈಕೋರ್ಟ್

Bar & Bench

ರಾಜ್ಯ ಸರ್ಕಾರದ ಜೊತೆ ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ನಡೆಸುವ ಕುರಿತಾದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರ ಕೋರಿಕೆಯನ್ನು ಪರಿಗಣಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ.

ಹೈಕೋರ್ಟ್ ಸಂಕೀರ್ಣದ ನೆಲ ಮಹಡಿಯಲ್ಲಿರುವ ಎಲ್ಲ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಗೊಳಿಸುವಂತೆ ಕೋರಿ ತುಮಕೂರಿನ ವಕೀಲ ಎಲ್ ರಮೇಶ್ ನಾಯಕ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಕೆಎಸ್‌ಬಿಸಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಪ್ರಕರಣವನ್ನು ವಕೀಲರ ಪರಿಷತ್‌ ಮುಂದೆ ಇಟ್ಟಿದ್ದೇವೆ. ನಮ್ಮ ನಿಲುವನ್ನು ಆಕ್ಷೇಪಣೆಯಲ್ಲಿ ತಿಳಿಸಿದ್ದೇವೆ. ಒಂದು ತಿಂಗಳು ನಮಗೆ ಕಾಲಾವಕಾಶ ನೀಡಿ, ವಿಚಾರಣೆಯನ್ನು ಮುಂದೂಡಬೇಕು. ಅಡ್ವೊಕೇಟ್‌ ಜನರಲ್‌ ಅವರು ಕೆಎಸ್‌ಬಿಸಿ ಪದನಿಮಿತ್ತ ಸದಸ್ಯರಾಗಿದ್ದು, ಅವರ ಸೇವೆಗಾಗಿ ನಾವು ಕಾಯುತ್ತಿದ್ದೇವೆ” ಎಂದು ತಿಳಿಸಿದರು.

ಇದಕ್ಕೆ ಪೀಠವು “ಹೈಕೋರ್ಟ್‌ಗೆ ಸ್ಥಳಾವಕಾಶ ಸಮಸ್ಯೆಯನ್ನು ಬಗೆಹರಿಸಲು ಹಿರಿಯ ವಕೀಲರಾದ ನಿಮ್ಮ ಸಹಕಾರ, ಸಲಹೆ ಅಗತ್ಯ. ನ್ಯಾಯಾಲಯದ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಮತ್ತು ದಾಖಲೆಗಳನ್ನು ಜತನವಾಗಿಡಲು ಹೈಕೋರ್ಟ್‌ ಸ್ಥಳದ ಅವಶ್ಯತೆ ಇದೆ. ಸ್ಥಳದ ಅವಕಾಶ ಬಗೆಹರಿಸುವ ನಿಟ್ಟಿನಲ್ಲಿ ನಾವು ಅಡ್ವೊಕೇಟ್‌ ಜನರಲ್‌ ಅವರ ಸಹಾಯವನ್ನು ಕೋರುತ್ತೇವೆ” ಎಂದಿತು.

ಅಡ್ವೊಕೇಟ್‌ ಜನರಲ್‌ ನಾವದಗಿ ಅವರು “ನಾವು ಲೋಕೋಪಯೋಗಿ ಇಲಾಖೆಯ ಜೊತೆ ಸಭೆ ನಡೆಸಿದ್ದು, ಕೆಲವು ಸಲಹೆಗಳನ್ನು ಸ್ವೀಕರಿಸಿದ್ದೇವೆ. ಹೈಕೋರ್ಟ್‌ನ ಆಡಳಿತಾತ್ಮಕ ವಿಭಾಗದ ಜೊತೆ ಸಭೆ ನಡೆಸುವುದು ಸೂಕ್ತ ಎಂದು ನನಗನ್ನಿಸಿದೆ. ಇದನ್ನು ಪೀಠ ನಿರ್ಧರಿಸಿ, ನಮಗೆ ಆದೇಶ ಮಾಡಿದರೆ ಸಭೆ ಆಯೋಜಿಸಲಾಗುವುದು” ಎಂದರು.

ಇದನ್ನು ಪರಿಗಣಿಸಿದ ಪೀಠವು “ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ವಕೀಲರ ಸಂಘ ಮನವಿ ಸಲ್ಲಿಸಿದೆ. ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಅನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು ಪ್ರಕರಣ ಮುಂದೂಡಲು ಕೋರಿದ್ದಾರೆ. ಅಡ್ವೊಕೇಟ್‌ ಜನರಲ್‌ ಅವರು ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿದಂತೆ ಕೆಎಸ್‌ಬಿಸಿ, ವಕೀಲರ ಸಂಘ ಮತ್ತು ಸರ್ಕಾರದ ಜೊತೆ ಹೈಕೋರ್ಟ್‌ ಸಭೆ ನಡೆಸಬೇಕು ಎಂದು ಕೋರಿದ್ದಾರೆ” ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದ್ದು, ವಿಚಾರಣೆಯನ್ನು ಮಾರ್ಚ್‌ 3ಕ್ಕೆ ಮುಂದೂಡಿತು.

ಕಳೆದ ವಿಚಾರಣೆಯಲ್ಲಿ ಪೀಠವು ನ್ಯಾಯಾಲಯದಲ್ಲಿ ಕಚೇರಿಗಳಿಗೆ ಉಂಟಾಗಿರುವ ಸ್ಥಳಾವಕಾಶದ ಕೊರತೆ ನೀಗಿಸುವ ನಿಟ್ಟಿನಲ್ಲಿ ಫೆಬ್ರವರಿ 14ರೊಳಗೆ ರಾಜ್ಯ ಸರ್ಕಾರ ಸಮಗ್ರ ಯೋಜನೆ ರೂಪಿಸಿ, ಸಲ್ಲಿಸಬೇಕು. ಇಲ್ಲವಾದರೆ ಅಡ್ವೊಕೇಟ್ ಜನರಲ್ ಕಚೇರಿ ಕಾರ್ಯನಿರ್ವಹಿಸುತ್ತಿರುವ ಕೆಜಿಐಡಿ ಕಟ್ಟಡ ಹಾಗೂ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಇರುವ ಚುನಾವಣಾ ಆಯೋಗದ ಹಳೆಯ ಕಟ್ಟಡವನ್ನು ತೆರವುಗೊಳಿಸಲು ನ್ಯಾಯಾಂಗ ಆದೇಶ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಸಿತ್ತು.

“ಸ್ಥಳಾವಕಾಶದ ಸಮಸ್ಯೆಗೆ ಸರ್ಕಾರ ಪರಿಹಾರ ಹುಡುಕದಿದ್ದರೆ, ಕೆಜಿಐಡಿ ಮತ್ತು ಹಳೆಯ ಚುನಾವಣಾ ಆಯೋಗದ ಕಟ್ಟಗಳಲ್ಲಿ ಕಚೇರಿಗಳ ನಿರ್ವಹಣೆಗೆ ನೀಡಿರುವ ಅನುಮತಿ ಹಿಂಪಡೆಯಬೇಕಾಗುತ್ತದೆ” ಎಂದು ಪೀಠ ಹೇಳಿತ್ತು.

ಹೈಕೋರ್ಟ್ ಸಿಬ್ಬಂದಿ ತಳಮಹಡಿಯಲ್ಲಿ ನೈರ್ಮಲ್ಯವಿಲ್ಲದ ಜಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಲಯಕ್ಕೆ ಮೂಲಸೌಕರ್ಯ ಒದಗಿಸುವುದಕ್ಕಿಂತ ಪ್ರಮುಖವಾದ ಕೆಲಸ ಸರ್ಕಾರಕ್ಕೆ ಬೇರೆ ಏನು ಇಲ್ಲ ಎಂದಿತ್ತು.

ಇದಕ್ಕೆ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ವಾಣಿ ಎಚ್‌ ಅವರು “ಹೈಕೋರ್ಟ್‌ನ ಕೆಲ ಭಾಗ ಹಾಗೂ ಕೆಜಿಐಡಿ ಕಟ್ಟಡದಲ್ಲಿ ಅಡ್ವೊಕೇಟ್ ಜನರಲ್ ಕಚೇರಿ ಇದೆ. ಅಲ್ಲಿಂದ ತೆರವು ಮಾಡಿದರೆ ಕಾರ್ಯನಿರ್ವಹಿಸುವುದು ಕಷ್ಟವಾಗಲಿದೆ ಎಂದು ತಿಳಿಸಿದರು. ಆಗ ಮುಖ್ಯ ನ್ಯಾಯಮೂರ್ತಿಗಳು “ಬೇಕಿದ್ದರೆ ಎಜಿ ಕಚೇರಿ ವಿಧಾನಸೌಧದಿಂದಲೇ ಕಾರ್ಯ ನಿರ್ವಹಿಸಲಿ, ಆ ಜಾಗವನ್ನು ಹೈಕೋರ್ಟ್ ಕಚೇರಿಗೆ ಬಿಟ್ಟುಕೊಡಿ” ಎಂದು ಮೌಖಿಕವಾಗಿ ಲಘು ದಾಟಿಯಲ್ಲಿ ಹೇಳಿದ್ದರು.