ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದಲ್ಲಿ ಕಚೇರಿಗಳಿಗೆ ಸ್ಥಳಾವಕಾಶದ ಕೊರತೆ ಇರುವ ಹಿನ್ನೆಲೆಯಲ್ಲಿ ಸಮಸ್ಯೆ ನೀಗಿಸಲು ಸಮಗ್ರ ಯೋಜನೆಯೊಂದನ್ನು ರೂಪಿಸಬೇಕು. ಇಲ್ಲವಾದಲ್ಲಿ ನ್ಯಾಯಿಕ ಆದೇಶ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಬುಧವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ಹೈಕೋರ್ಟ್ ಸಂಕೀರ್ಣದ ನೆಲ ಮಹಡಿಯಲ್ಲಿರುವ ಎಲ್ಲ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಗೊಳಿಸುವಂತೆ ಕೋರಿ ತುಮಕೂರಿನ ವಕೀಲ ಎಲ್ ರಮೇಶ್ ನಾಯಕ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ನ್ಯಾಯಾಲಯದಲ್ಲಿ ಕಚೇರಿಗಳಿಗೆ ಉಂಟಾಗಿರುವ ಸ್ಥಳಾವಕಾಶದ ಕೊರತೆ ನೀಗಿಸುವ ನಿಟ್ಟಿನಲ್ಲಿ ಫೆಬ್ರವರಿ 14ರೊಳಗೆ ಸರ್ಕಾರ ಸಮಗ್ರ ಯೋಜನೆ ರೂಪಿಸಿ, ಸಲ್ಲಿಸಬೇಕು. ಇಲ್ಲವಾದರೆ ಅಡ್ವೊಕೇಟ್ ಜನರಲ್ ಕಚೇರಿ ಕಾರ್ಯನಿರ್ವಹಿಸುತ್ತಿರುವ ಕೆಜಿಐಡಿ ಕಟ್ಟಡ ಹಾಗೂ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಇರುವ ಚುನಾವಣಾ ಆಯೋಗದ ಹಳೆಯ ಕಟ್ಟಡವನ್ನು ತೆರವುಗೊಳಿಸಲು ನ್ಯಾಯಾಂಗ ಆದೇಶ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಸಿತು.
“ಸ್ಥಳಾವಕಾಶದ ಸಮಸ್ಯೆಗೆ ಸರ್ಕಾರ ಪರಿಹಾರ ಹುಡುಕದಿದ್ದರೆ, ಕೆಜಿಐಡಿ ಮತ್ತು ಹಳೆಯ ಚುನಾವಣಾ ಆಯೋಗದ ಕಟ್ಟಗಳಲ್ಲಿ ಕಚೇರಿಗಳ ನಿರ್ವಹಣೆಗೆ ನೀಡಿರುವ ಅನುಮತಿ ಹಿಂಪಡೆಯಬೇಕಾಗುತ್ತದೆ” ಎಂದು ಪೀಠ ಹೇಳಿತು.
ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಎಚ್ ವಾಣಿ ಅವರು “ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಮುಖ್ಯ ಕಾರ್ಯದರ್ಶಿ ಅವರು ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರೆ. ಅದಕ್ಕಾಗಿ 4 ವಾರ ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದನ್ನು ಪೀಠ ಒಪ್ಪಲಿಲ್ಲ. ಬದಲಿಗೆ ಹತ್ತು ದಿನಗಳ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ನ್ಯಾಯಾಲಯವೇ ಆದೇಶ ಹೊರಡಿಸಲಿದೆ ಎಂದಿತು.
ಹೈಕೋರ್ಟ್ ಸಿಬ್ಬಂದಿ ತಳಮಹಡಿಯಲ್ಲಿ ನೈರ್ಮಲ್ಯವಿಲ್ಲದ ಜಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಲಯಕ್ಕೆ ಮೂಲಸೌಕರ್ಯ ಒದಗಿಸುವುದಕ್ಕಿಂತ ಪ್ರಮುಖವಾದ ಕೆಲಸ ಸರ್ಕಾರಕ್ಕೆ ಬೇರೆ ಏನು ಇಲ್ಲ ಎಂದಿತು.
ವಕೀಲೆ ವಾಣಿ ಅವರು “ಹೈಕೋರ್ಟ್‌ನ ಕೆಲ ಭಾಗ ಹಾಗೂ ಕೆಜಿಐಡಿ ಕಟ್ಟಡದಲ್ಲಿ ಅಡ್ವೊಕೇಟ್ ಜನರಲ್ ಕಚೇರಿ ಇದೆ. ಅಲ್ಲಿಂದ ತೆರವು ಮಾಡಿದರೆ ಕಾರ್ಯನಿರ್ವಹಿಸುವುದು ಕಷ್ಟವಾಗಲಿದೆ ಎಂದು ತಿಳಿಸಿದರು. ಆಗ ಮುಖ್ಯ ನ್ಯಾಯಮೂರ್ತಿಗಳು, ಬೇಕಿದ್ದರೆ ಎಜಿ ಕಚೇರಿ ವಿಧಾನಸೌಧದಿಂದಲೇ ಕಾರ್ಯ ನಿರ್ವಹಿಸಲಿ, ಆ ಜಾಗವನ್ನು ಹೈಕೋರ್ಟ್ ಕಚೇರಿಗೆ ಬಿಟ್ಟುಕೊಡಿ ಎಂದು ಮೌಖಿಕವಾಗಿ ಲಘು ದಾಟಿಯಲ್ಲಿ ಹೇಳಿದರು.
ಹಳೆಯ ಚುನಾವಣಾ ಆಯೋಗದ ಕಚೇರಿಯಲ್ಲಿ ಕೆಎಸ್‌ಬಿಸಿಗೆ ಹಿಂದಿನ ಮುಖ್ಯ ನ್ಯಾಯಮೂರ್ತಿ ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ. ಇದು ತಾತ್ಕಾಲಿಕ ಕ್ರಮವಾಗಿದೆ. ಈ ಆದೇಶವನ್ನು ನ್ಯಾಯಾಲಯ ಹಿಂಪಡೆಯಲಿದೆ. ಈ ವಿಚಾರವನ್ನು ನಿಮ್ಮ ಅಧ್ಯಕ್ಷರಿಗೆ ತಿಳಿಸಿ ಎಂದು ಕೆಎಸ್‌ಬಿಸಿ ಪ್ರತಿನಿಧಿಸಿದ್ದ ವಕೀಲ ನಟರಾಜ್ ಅವರಿಗೆ ನ್ಯಾಯಾಲಯ ಸೂಚಿಸಿತು.
ಹೈಕೋರ್ಟ್ ಅನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು “ಕೆಎಸ್‌ಬಿಸಿ ಶಾಸನಬದ್ಧ ಸಂಸ್ಥೆಯಾಗಿದ್ದು, ಅವರ ಬಳಿ ಹಣವಿದೆ. ಬಾಡಿಗೆ ಅಥವಾ ಕಟ್ಟಡವನ್ನು ಖರೀದಿಸಬಹುದು. ಹೈಕೋರ್ಟ್‌ನ ಇನ್ನೂ ಹದಿನಾಲ್ಕು ವಿಭಾಗಗಳು ಮತ್ತು 220ಕ್ಕೂ ಹೆಚ್ಚು ಸಿಬ್ಬಂದಿ ನೆಲಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದರು.