ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಿಜೆಪಿಯ ಕೆ ಆರ್ ಪುರ ಶಾಸಕ ಬೈರತಿ ಬಸವರಾಜ ಅವರಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಇದರಿಂದ ಬಸವರಾಜ ಅವರಿಗೆ ಬಂಧನದ ಭೀತಿ ಎದುರಾಗಿದೆ.
2026ರ ಜನವರಿ 29ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠವು ಇಂದು ಪ್ರಕಟಿಸಿದ್ದು, ಅರ್ಜಿ ವಜಾಗೊಳಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರ ಪಾತ್ರ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮದೇ ಸ್ಥಳೀಯ ಪೊಲೀಸ್ ಅಧಿಕಾರಿಗಳ ಪಾತ್ರವಿದೆ. ಇದೊಂದು ಸಂಘಟಿತ ಅಪರಾಧವಾಗಿದೆ. ಕೆಲವು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಅಧಿಕಾರಿಗಳ ಪಾತ್ರ ಬಯಲು ಮಾಡಲು ಬೈರತಿ ಬಸವರಾಜ ಅವರನ್ನು ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕಿದೆ. ನಾವು ಸಾಮಾನ್ಯ ವ್ಯಕ್ತಿಯ ಜೊತೆ ವ್ಯವಹರಿಸುತ್ತಿಲ್ಲ. ಶಾಸಕನಾಗಿರುವ, ಆರ್ಥಿಕವಾಗಿ, ರಾಜಕೀಯವಾಗಿ ಪ್ರಬಲವಾಗಿರುವ ವ್ಯಕ್ತಿಯ ಜೊತೆ ವ್ಯವಹರಿಸುತ್ತಿದ್ದೇವೆ. ಇದೆಲ್ಲವನ್ನೂ ಮರೆಮಾಚಿ ರಾಜಕೀಯ ದುರುದ್ದೇಶದಿಂದ ಬೈರತಿ ಬಸವರಾಜು ಅವರನ್ನು ಬಂಧಿಸಲು ಪ್ರಾಸಿಕ್ಯೂಷನ್ ಯತ್ನಿಸುತ್ತಿದೆ ಎಂದು ಹೇಳುವುದು ಶುದ್ಧ ಅಪಪ್ರಚಾರ” ಎಂದಿದ್ದರು.
“ಭೂ ವ್ಯಾಜ್ಯ ಸಂಬಂಧ ಬಿಕ್ಲು ಶಿವನನ್ನು ಕೊಲೆ ಮಾಡಲಾಗಿದೆ. ಪ್ರಕರಣದ 1ನೇ ಆರೋಪಿ ಜಗದೀಶ್ ಮತ್ತು 20ನೇ ಆರೋಪಿ ಅಜಿತ್ ಅವರಿಗೆ ಬೈರತಿ ಬಸವರಾಜ್ ಕರೆ ಮಾಡಿ ಸಂಭಾಷಣೆ ನಡೆಸಿದ್ಧಾರೆ” ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದ್ದರು. ಇದಕ್ಕೆ ಪೂರಕವಾಗಿ ತನಿಖಾಧಿಕಾರಿಗಳು ಸಂಗ್ರಹಿಸಿರುವ ಸಿಡಿಆರ್ ದಾಖಲೆಗಳ, ಆರೋಪಿಗಳು ಒಂದೇ ಸ್ಥಳದಲ್ಲಿದ್ದ ಬಗ್ಗೆ ಜಿಯೋಗ್ರಾಫಿಕಲ್ ಮ್ಯಾಪಿಂಗ್ ಮತ್ತು ಜಗದೀಶ್, ಬೈರತಿ ಬಸವರಾಜ ಅವರು ಒಟ್ಟಿಗೆ ಕುಂಭಮೇಳಕ್ಕೆ ಪ್ರಯಾಣಿಸಿರುವ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಜಮೀನು ವಿವಾದ ಸಂಬಂಧ ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು 2025ರ ಜುಲೈ 15ರಂದು ರೌಡಿಶೀಟರ್ ಬಿಕ್ಲು ಶಿವ ಕೊಲೆ ನಡೆದಿತ್ತು. ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಬೈರತಿ ಬಸವರಾಜ ಅವರು ಐದನೇ ಆರೋಪಿಯಾಗಿದ್ದಾರೆ. ಮೊದಲಿಗೆ ಎಫ್‌ಐಆರ್ ರದ್ದು ಕೋರಿ ಬೈರತಿ ಬಸವರಾಜ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿಗಳು ಬೈರತಿ ಬಸವರಾಜ ಅವರನ್ನು ಬಂಧಿಸಬಾರದು. ಬಸವರಾಜು ತನಿಖೆಗೆ ಸಹಕರಿಸಬೇಕು ಎಂದು ಆರಂಭದಲ್ಲಿ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಬಸವರಾಜು ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು.
ನಂತರ 2025ರ ಆಗಸ್ಟ್ 12ರಂದು ಸಿಐಡಿ ಪೊಲೀಸರು ಪ್ರಕರಣದಲ್ಲಿ ಕೋಕಾ ಕಾಯಿದೆ ಹೇರಿದ್ದರು. ಇದರ ರದ್ದತಿಗೆ ಮತ್ತು ನಿರೀಕ್ಷಣಾ ಜಾಮೀನು ಕೋರಿ ಬಸವರಾಜ ಅವರು ಹೈಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಕೋಕಾ ಅನ್ವಯಿಸಿದ್ದ ಸಿಐಡಿ ಪೊಲೀಸರ ಕ್ರಮ ರದ್ದುಪಡಿಸಿದ್ದ ಹೈಕೋರ್ಟ್, ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಅದಕ್ಕಾಗಿ ವಿಚಾರಣಾಧೀನ ನ್ಯಾಯಾಲಯದ ಮೊರೆ ಹೋಗುವಂತೆ ಡಿಸೆಂಬರ್ 19ರಂದು ಸೂಚಿಸಿತ್ತು.
ಮರುದಿನವೇ ನಿರೀಕ್ಷಣಾ ಜಾಮೀನು ಕೋರಿ ಬಸವರಾಜು ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ನಿರೀಕ್ಷಣಾ ಜಾಮೀನಿಗಾಗಿ 2025ರ ಡಿಸೆಂಬರ್ 24ರಂದು ಬಸವರಾಜ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. 2025ರ ಡಿಸೆಂಬರ್ 26ರಂದು ನ್ಯಾಯಮೂರ್ತಿ ಜಿ ಬಸವರಾಜ ಅವರ ರಜಾಕಾಲೀನ ಏಕ ಸದಸ್ಯ ಪೀಠವು ಬೈರತಿ ಬಸವರಾಜ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಪ್ರಸ್ತುತ ಆದೇಶದಿಂದಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ಸಹ ಕೊನೆಗೊಂಡಿದೆ.