

ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಐದನೇ ಆರೋಪಿಯಾಗಿರುವ ಬಿಜೆಪಿಯ ಕೆ ಆರ್ ಪುರ ಶಾಸಕ ಬೈರತಿ ಬಸವರಾಜು ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಗುರುವಾರ ತೀರ್ಪು ಕಾಯ್ದಿರಿಸಿದೆ.
ಬೈರತಿ ಬಸವರಾಜು ಅವರ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಬುಧವಾರ ನ್ಯಾಯಾಲಯ ನೀಡಿದ್ದ ಸೂಚನೆಯಂತೆ ಪ್ರಕರಣದ ತನಿಖಾಧಿಕಾರಿಗಳಾದ ಸಿಐಡಿ ಪೊಲೀಸರ ಪರ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು, ಸಿಐಡಿ ಪೊಲೀಸರ ತನಿಖೆಯ ಸಂಪೂರ್ಣ ದಾಖಲೆಗಳನ್ನು ಪೀಠಕ್ಕೆ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಾಲಯವು ತೀರ್ಪು ಕಾಯ್ದಿರಿಸಿತು.
ಜಮೀನು ವಿವಾದ ಸಂಬಂಧ ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು 2025ರ ಜುಲೈ 15ರಂದು ಬಿಕ್ಲು ಶಿವ ಕೊಲೆ ನಡೆದಿತ್ತು. ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಬೈರತಿ ಬಸವರಾಜು ಐದನೇ ಆರೋಪಿಯಾಗಿದ್ದಾರೆ. ಮೊದಲಿಗೆ ಎಫ್‌ಐಆರ್ ರದ್ದು ಕೋರಿ ಬೈರತಿ ಬಸವರಾಜು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿಗಳು ಬೈರತಿ ಬಸವರಾಜು ಅವರನ್ನು ಬಂಧಿಸಬಾರದು. ಬಸವರಾಜು ತನಿಖೆಗೆ ಸಹಕರಿಸಬೇಕು ಎಂದು ಆರಂಭದಲ್ಲಿ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಬಸವರಾಜು ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು.
ನಂತರ 2025ರ ಆಗಸ್ಟ್ 12ರಂದು ಸಿಐಡಿ ಪೊಲೀಸರು ಪ್ರಕರಣದಲ್ಲಿ ಕೋಕಾ ಕಾಯಿದೆ ಹೇರಿದ್ದರು. ಈ ಕ್ರಮ ರದ್ದತಿಗೆ ಮತ್ತು ನಿರೀಕ್ಷಣಾ ಜಾಮೀನು ಮಂಜೂರಾತಿಗೆ ಕೋರಿ ಬಸವರಾಜು ಹೈಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಕೋಕಾ ಅನ್ವಯಿಸಿದ್ದ ಸಿಐಡಿ ಪೊಲೀಸರ ಕ್ರಮ ರದ್ದುಪಡಿಸಿದ್ದ ಹೈಕೋರ್ಟ್, ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಅದಕ್ಕಾಗಿ ವಿಚಾರಣಾಧೀನ ನ್ಯಾಯಾಲಯದ ಮೊರೆ ಹೋಗುವಂತೆ ಡಿಸೆಂಬರ್ 19ರಂದು ಸೂಚಿಸಿತ್ತು.
ಮರುದಿನವೇ ನಿರೀಕ್ಷಣಾ ಜಾಮೀನು ಕೋರಿ ಬಸವರಾಜು ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಡಿಸೆಂಬರ್ 30ರಂದು (ಮಂಗಳವಾರ) ಆದೇಶಿಸಿತ್ತು. ಇದರಿಂದ ನಿರೀಕ್ಷಣಾ ಜಾಮೀನಿಗಾಗಿ 2025ರ ಡಿಸೆಂಬರ್ 24ರಂದು ಬಸವರಾಜು ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. 2025ರ ಡಿಸೆಂಬರ್ 26ರಂದು ನ್ಯಾಯಮೂರ್ತಿ ಜಿ ಬಸವರಾಜ ಅವರ ರಜಾಕಾಲದ ಏಕ ಸದಸ್ಯ ಪೀಠವು ಬೈರತಿ ಬಸವರಾಜು ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. 2026ರ ಜನವರಿ 6ರಿಂದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಗುರುವಾರ ತೀರ್ಪು ಕಾಯ್ದಿರಿಸಿದೆ.