BBMP and Karnataka HC 
ಸುದ್ದಿಗಳು

ಗುಂಡಿ ಮುಚ್ಚಲು ಆದ್ಯತೆ ನೀಡುವಂತೆ ಎಆರ್‌ಟಿಎಸ್‌, ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ; ಪ್ರಧಾನ ಎಂಜಿನಿಯರ್‌ ಬದಲಾವಣೆ

ಪ್ರಹ್ಲಾದ್ ಅವರನ್ನು ಬದಲಾಯಿಸಿ ಬೇರೊಬ್ಬ ಪ್ರಧಾನ ಎಂಜಿನಿಯರ್‌ ನಿಯೋಜಿಸಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಪ್ರಹ್ಲಾದ್ ವಿರುದ್ಧದ ದೂರಿನ ಬಗ್ಗೆ ಹಿರಿಯ ಐಎಎಸ್ ಅಧಿಕಾರಿಯಿಂದ ತನಿಖೆಗೆ ಆದೇಶಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ.

Bar & Bench

ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ತುರ್ತಾಗಿ ಮಾಡಬೇಕೆ ವಿನಾ ಸಮಸ್ಯೆಗಳನ್ನು ಇಟ್ಟುಕೊಂಡು ಬರಬೇಡಿ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಗುತ್ತಿಗೆ ಪಡೆದಿರುವ ಅಮೆರಿಕನ್ ರೋಡ್ ಟೆಕ್ನಾಲಜೀಸ್ ಸಲ್ಯೂಷನ್ಸ್‌ಗೆ (ಎಆರ್‌ಟಿಸಿ)ಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ಬೆಂಗಳೂರಿನ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ತಕ್ಷಣ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಎಆರ್‌ಟಿಎಸ್‌ ಆರಂಭಿಸಿಬೇಕು. ಕಾಮಗಾರಿ ಒಪ್ಪಂದ, ಕಾರ್ಯಾದೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಕೆಲಸವನ್ನು ಬಿಬಿಎಂಪಿ ಮಾಡಬೇಕು. ರಸ್ತೆ ಗುಂಡಿ ಮುಚ್ಚಿದ ಪ್ರಗತಿ ವರದಿಯನ್ನು ಹತ್ತು ದಿನಗಳಲ್ಲಿ ಸಲ್ಲಿಸುವಂತೆ ಬಿಬಿಎಂಪಿಗೆ ನ್ಯಾಯಾಲಯ ನಿರ್ದೇಶಿಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು “ಪೈಥಾನ್ ಯಂತ್ರದಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಚದರ ಮೀಟರ್‌ಗೆ 551 ರೂಪಾಯಿ ಮೂಲ ದರಕ್ಕೆ ಒಪ್ಪಿಗೆ ಇದೆ ಎಂದು ತಿಳಿಸಿ ಅಫಿಡವಿಟ್ ಸಲ್ಲಿಸಿದರು. ಎಆರ್‌ಟಿಸಿ ನಮೂದಿಸಿರುವ ದರಕ್ಕೆ ಕಾಮಗಾರಿ ನೀಡಲು ಮುಖ್ಯ ಆಯುಕ್ತರು ಒಪ್ಪಿಕೊಂಡಿದ್ದಾರೆ ಎಂದು ಬಿಬಿಎಂಪಿ ಪರ ವಕೀಲ ವಿ ಶ್ರೀನಿಧಿ ಪೀಠಕ್ಕೆ ತಿಳಿಸಿದರು.

ಪ್ರಧಾನ ಎಂಜಿನಿಯರ್‌ ಬದಲಿಸಿ: ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ ಎಸ್‌ ಪ್ರಹ್ಲಾದ್ ಅವರು ಎಆರ್‌ಟಿಎಸ್‌ ನಿರ್ದೇಶಕರ ಮೇಲೆ ದೈಹಿಕ ಹಲ್ಲೆ ನಡೆಸಿರುವ ಬಗ್ಗೆ ಮುಖ್ಯ ಆಯುಕ್ತರಿಗೆ ದೂರು ನೀಡಿರುವ ಮಾಹಿತಿಯನ್ನು ಎಆರ್‌ಟಿಸಿ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು. ಇದನ್ನು ಪರಿಶೀಲಿಸಿದ ನ್ಯಾಯಾಲಯವು ಮುಖ್ಯ ಇಂಜಿನಿಯರ್ ಪ್ರಹ್ಲಾದ್‌ ಅವರನ್ನು ಆ ಹುದ್ದೆಯಲ್ಲಿ ಮುಂದುವರಿಸಬಾರದು. ಎಆರ್‌ಟಿಸಿ ನಡೆಸುವ ಕಾಮಗಾರಿಯನ್ನು ಪ್ರಹ್ಲಾದ್ ಮೇಲುಸ್ತುವಾರಿ ಮಾಡುವಂತಿಲ್ಲ. ಮುಖ್ಯ ಆಯುಕ್ತರು ಬೇರೊಬ್ಬ ಮುಖ್ಯ ಎಂಜಿನಿಯರ್‌ಗೆ ಈ ಜವಾಬ್ದಾರಿ ವಹಿಸಬೇಕು ಎಂದು ಪೀಠವು ನಿರ್ದೇಶಿಸಿತು.

ಆಗ ಬಿಬಿಎಂಪಿ ವಕೀಲ ಶ್ರೀನಿಧಿ ಅವರು “ಈಗಾಗಲೇ ಪ್ರಹ್ಲಾದ್ ಅವರನ್ನು ಬದಲಾಯಿಸಿ ಬೇರೊಬ್ಬ ಪ್ರಧಾನ ಎಂಜಿನಿಯರ್‌ ನಿಯೋಜಿಸಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅಲ್ಲದೇ ಪ್ರಹ್ಲಾದ್ ವಿರುದ್ಧದ ದೂರಿನ ಬಗ್ಗೆ ಹಿರಿಯ ಐಎಎಸ್ ಅಧಿಕಾರಿಯಿಂದ ತನಿಖೆಗೆ ಆದೇಶಿಸಲಾಗಿದೆ” ಎಂದು ಪೀಠಕ್ಕೆ ತಿಳಿಸಿದರು.

ಕಳೆದ ವಿಚಾರಣೆಯಲ್ಲಿ “ಬಿಬಿಎಂಪಿ ಪರ ವಕೀಲ ವಿ ಶ್ರೀನಿಧಿ ಅವರ ಕೋರಿಕೆಯಂತೆ ಪ್ರಕರಣ ಮುಂದೂಡಲಾಗಿದ್ದು, ಜೂನ್‌ 6ಕ್ಕೆ ವಿಚಾರಣೆ ನಿಗದಿಪಡಿಸಲಾಗಿತ್ತು. ಎಆರ್‌ಟಿಎಸ್‌ ಪ್ರತಿನಿಧಿಗಳ ಮೇಲೆ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಬಿ ಎಸ್‌ ಪ್ರಹ್ಲಾದ್‌ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಿಗೆ ನೀಡಲಾಗಿರುವ ದೂರಿನ ಕುರಿತು ಯಾವ ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ಮುಂದಿನ ವಿಚಾರಣೆಯಲ್ಲಿ ತಿಳಿಸಬೇಕು ಎಂದು ನ್ಯಾಯಾಲಯವು ಈ ಹಿಂದೆ ಆದೇಶ ಮಾಡಿತ್ತು.