[ರಸ್ತೆ ಗುಂಡಿ] ಬಿಬಿಎಂಪಿಗೆ ಕಾಲಾವಕಾಶ; ಎಆರ್‌ಟಿಎಸ್‌ ಪ್ರತಿನಿಧಿಗಳ ಮೇಲೆ ಹಲ್ಲೆ ಬಗ್ಗೆ ವರದಿ ಕೇಳಿದ ಹೈಕೋರ್ಟ್‌

ಮುಖ್ಯ ಎಂಜಿನಿಯರ್‌ ಬಿ ಎಸ್‌ ಪ್ರಹ್ಲಾದ್‌ ಕರೆದಿದ್ದ ಸಭೆಯಲ್ಲಿ ಎಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕಿಯ ಪತಿ ಹಾಗೂ ಕಂಪೆನಿಯ ಮತ್ತೊಬ್ಬ ನಿರ್ದೇಶಕರ ಮೇಲೆ ಪ್ರಹ್ಲಾದ್‌ ಹಲ್ಲೆ ನಡೆಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದ ವಕೀಲೆ.
BBMP and Karnataka HC
BBMP and Karnataka HC
Published on

ಬೆಂಗಳೂರು ನಗರದ ರಸ್ತೆ ಗುಂಡಿ ಮುಚ್ಚಲು ಬಳಸಲಾಗುತ್ತಿರುವ ಪೈಥಾನ್‌ ಯಂತ್ರಕ್ಕೆ ಪ್ರತಿ ಗಂಟೆಗೆ ಎಷ್ಟು ಹಣ ಪಾವತಿಸಲಾಗುವುದು ಎಂಬುದನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ವೈಯಕ್ತಿಕವಾಗಿ ಪರಿಶೀಲನೆ ನಡೆಸಿ, ನಿರ್ಧರಿಸಲಿದ್ದಾರೆ. ಅಲ್ಲದೇ, ಅಮೆರಿಕನ್ ರೋಡ್‌ ಟೆಕ್ನಾಲಜೀಸ್‌ ಸಲ್ಯೂಷನ್ಸ್‌ಗೆ (ಎಆರ್‌ಟಿಎಸ್) ಬಾಕಿ ಹಣ ಪಾವತಿಸುವುದಕ್ಕೂ ಕ್ರಮಕೈಗೊಳ್ಳಲಾಗುವುದು. ಇದಕ್ಕಾಗಿ ಕಾಲಾವಕಾಶ ನೀಡಬೇಕು ಎಂಬ ಬಿಬಿಎಂಪಿ ಕೋರಿಕೆಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಸಮ್ಮತಿಸಿದೆ.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಬಿಬಿಎಂಪಿ ಪರ ವಕೀಲ ವಿ ಶ್ರೀನಿಧಿ ಅವರ ಕೋರಿಕೆಯಂತೆ ಪ್ರಕರಣ ಮುಂದೂಡಲಾಗಿದ್ದು, ಜೂನ್‌ 6ಕ್ಕೆ ನಿಗದಿಪಡಿಸಲಾಗಿದೆ. ಎಆರ್‌ಟಿಎಸ್‌ ಪ್ರತಿನಿಧಿಗಳ ಮೇಲೆ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಬಿ ಎಸ್‌ ಪ್ರಹ್ಲಾದ್‌ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಿಗೆ ನೀಡಲಾಗಿರುವ ದೂರಿನ ಕುರಿತು ಯಾವ ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ಮುಂದಿನ ವಿಚಾರಣೆಯಲ್ಲಿ ತಿಳಿಸಬೇಕು” ಎಂದು ನ್ಯಾಯಾಲಯವು ಆದೇಶ ಮಾಡಿದೆ.

ಎಆರ್‌ಟಿಎಸ್‌ ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು “182 ಕಿ ಮೀ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಎಆರ್‌ಟಿಎಸ್‌ ಪೂರ್ಣಗೊಳಿಸಿದೆ. ಆದರೆ, ರಸ್ತೆ ಗುಂಡಿ ಮುಚ್ಚಲು ಪೈಥಾನ್‌ ಯಂತ್ರ ಬಳಸಿರುವುದಕ್ಕೆ ಪ್ರತಿ ಗಂಟೆಗೆ ಎಷ್ಟು ಹಣ ಪಾವತಿಸಲಾಗುತ್ತದೆ ಎಂಬುದನ್ನು ಬಿಬಿಎಂಪಿ ಇನ್ನೂ ನಿರ್ಧರಿಸಿಲ್ಲ. ಲೋಕೋಪಯೋಗಿ ಇಲಾಖೆಯು ರಸ್ತೆ ಗುಂಡಿ ಮುಚ್ಚಲು ಪೈಥಾನ್‌ ಯಂತ್ರ ಬಳಸುವುದಕ್ಕೆ ನಿಗದಿಪಡಿಸಿರುವ ಹಣವನ್ನು (ಪ್ರತಿ ಗಂಟೆಗೆ 1,249 ರೂಪಾಯಿ) ನೀಡುವಂತೆ ಎಆರ್‌ಟಿಎಸ್‌ ಕೋರಿದೆ. ಆದರೆ, ಬಿಬಿಎಂಪಿಯು ಪಿಡಬ್ಲುಡಿ ನಿಗದಿಪಡಿಸಿರುವ ಹಣಕ್ಕಿಂತ ಕಡಿಮೆ ಹಣ ನೀಡಲು ಮುಂದಾಗಿದ್ದು, ಅದು ಹಳೆಯ ವಿಧಾನದಲ್ಲಿ ರಸ್ತೆ ಗುಂಡಿ ಮುಚ್ಚಲು ಬಳಸುವುದಕ್ಕೆ ನೀಡುತ್ತಿದ್ದ ಹಣವಾಗಿದೆ. ಈಗಾಗಲೇ ಎಆರ್‌ಟಿಎಸ್‌ ರಸ್ತೆ ಗುಂಡಿ ಮುಚ್ಚಿರುವುದಕ್ಕೆ ಬಿಬಿಎಂಪಿ ಯಾವುದೇ ಹಣ ನೀಡಲ್ಲ” ಎಂಬುದನ್ನು ಪೀಠವು ದಾಖಲಿಸಿಕೊಂಡಿತು.

ಅಲ್ಲದೇ, “ಮೇ 27ರಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ ಎಸ್‌ ಪ್ರಹ್ಲಾದ್‌ ಅವರು ಕರೆದಿದ್ದ ಸಭೆಯಲ್ಲಿ ಸಮಾಲೋಚನೆಯ ವೇಳೆ ಎಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕಿಯವರ ಪತಿ ಹಾಗೂ ಕಂಪೆನಿಯ ಮತ್ತೊಬ್ಬ ನಿರ್ದೇಶಕರ ಮೇಲೆ ಹಲ್ಲೆ ಪ್ರಹ್ಲಾದ್‌ ಅವರು ನಡೆಸಿದ್ದು, ಹೊಡೆತ ನೀಡಿ ಅವರನ್ನು ದೂಡಿದ್ದಾರೆ. ಆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಬಿಎಂಪಿಯ ಇತರೆ ಸಿಬ್ಬಂದಿ ಎಆರ್‌ಟಿಎಸ್‌ ಪ್ರತಿನಿಧಿಗಳನ್ನು ರಕ್ಷಿಸಿದ್ದಾರೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪ್ರಹ್ಲಾದ್‌ ಅವರ ವಿರುದ್ದ ಲಿಖಿತ ದೂರು ನೀಡಲಾಗಿದೆ. ಇದೆಲ್ಲವನ್ನೂ ಮುಂದಿನ ವಿಚಾರಣೆಯ ವೇಳೆಗೆ ಅಫಿಡವಿಟ್‌ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂಬ ವಾದವನ್ನು ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿತು.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ಎರಡು ದಿನಗಳ ಕಾಲಾವಕಾಶ ಪಡೆಯುವಂತೆ ಸೂಚನೆ ನೀಡಲಾಗಿದೆ. ಪ್ರಕರಣದ ಕುರಿತು ವೈಯಕ್ತಿಕವಾಗಿ ಬಿಬಿಎಂಪಿ ಆಯುಕ್ತರು ಪರಿಶೀಲನೆ ನಡೆಸಲಿದ್ದಾರೆ. ರಸ್ತೆ ಗುಂಡಿ ಮುಚ್ಚಲು ಬಳಸುವ ಪೈಥಾನ್‌ ಯಂತ್ರಕ್ಕೆ ಪ್ರತಿ ಗಂಟೆಗೆ ಎಷ್ಟು ಹಣ ಪಾವತಿಸಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ. ಎಆರ್‌ಟಿಎಸ್‌ ಬಾಕಿ ಹಣವನ್ನು ಪಾವತಿಸಲು ಕ್ರಮಕೈಗೊಳ್ಳಲಾಗುವುದು” ಎಂಬುದನ್ನು ನ್ಯಾಯಾಲಯ ದಾಖಲಿಸಿಕೊಂಡಿತು.

Also Read
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಕ್ಷಣ ಗುಂಡಿ ಮುಚ್ಚಲು ಹೈಕೋರ್ಟ್‌ ಆದೇಶ; ಪ್ರಗತಿ ವರದಿ ಸಲ್ಲಿಸಲು ನಿರ್ದೇಶನ

ಇದಕ್ಕೆ ಪೀಠವು “ನಿರ್ಧಾರ ಕೈಗೊಳ್ಳಲು ಸರ್ಕಾರದ ವತಿಯಿಂದ ಯಾರನ್ನಾದರೂ ಒಳಗೊಳ್ಳಬೇಕೆ ಎಂಬುದನ್ನು ಮುಖ್ಯ ಆಯುಕ್ತರ ಬಳಿ ಕೇಳಿ. ನೀವು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಎರಡು ದಿನಕ್ಕೆ ಬದಲಾಗಿ ಇನ್ನೆರಡು ದಿನ ತೆಗೆದುಕೊಳ್ಳಿ. ಆದರೆ, ನೀವು ಸೂಕ್ತ ಪರಿಹಾರಗಳೊಂದಿಗೆ ಬರಬೇಕು. ನ್ಯಾಯಾಲಯದ ಆದೇಶಗಳನ್ನು ಪಾಲಿಸಬೇಕು. ಇಲ್ಲವಾದರೆ ನಿಮ್ಮೆಲ್ಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗುವುದು” ಎಂದು ಎಚ್ಚರಿಸಿತು.

ಮುಂದುವರೆದು, “ಬಿಬಿಎಂಪಿಯ ಹಿಂದಿನ ಮುಖ್ಯ ಆಯುಕ್ತರನ್ನು ನಾವು ನೋಡಿದ್ದೇವೆ. ಈಗಿನ ಮುಖ್ಯ ಆಯುಕ್ತ ಉತ್ಸಾಹಿ ಆಗಿದ್ದಾರೆ. ಅವರನ್ನು ಕೆಲಸ ಮಾಡಲು ತಿಳಿಸಿ, ಅವರಿಗೆ ಒಂದು ಅವಕಾಶ ನೀಡುತ್ತಿದ್ದೇವೆ. ಜೂನ್‌ 2ರಂದು ಮುಂಗಾರು ಬೆಂಗಳೂರು ಪ್ರವೇಶಿಸುತ್ತದೆ ಎನ್ನಲಾಗುತ್ತಿದೆ. ಒಂದು ತಿಂಗಳಲ್ಲಿ ಕೆಲಸ ಮುಗಿಸಿ ಎಂದು ನಾವು ಹೇಳಿದ್ದೆವು. ಆದರೆ, ಏನೂ ಆಗಿಲ್ಲ. ಈಗ ಕಚೇರಿಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದೀರಿ” ಎಂದಿತು.

Kannada Bar & Bench
kannada.barandbench.com