Acting Chief Justice Satish Chandra Sharma 
ಸುದ್ದಿಗಳು

ಮತದಾರರ ಪಟ್ಟಿಯಲ್ಲಿ ಬದಲಾವಣೆ: ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶನ

ಅಹವಾಲು ಹೊಂದಿರುವವರು ಪ್ರಜಾಪ್ರತಿನಿಧಿ ಕಾಯಿದೆ ಮತ್ತು ಮತದಾರರ ನೋಂದಣಿ ಕಾಯಿದೆ ಮತ್ತು ನಿಯಮಗಳ ಅಡಿ ಪರಿಹಾರ ಕೋರಬಹುದಾಗಿದೆ. ಕಾನೂನಿನ ಅಡಿ ಅಧಿಕಾರಿಗಳು ಮನವಿಯನ್ನು ಪರಿಗಣಿಸದಿದ್ದರೆ ಅವರು ಹೈಕೋರ್ಟ್‌ ಕದ ತಟ್ಟಬಹುದು ಎಂದ ಪೀಠ.

Bar & Bench

ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ಕೈಬಿಡಲು ಮತ್ತು ಪುನರ್‌ ಸೇರ್ಪಡೆ ಮಾಡುವ ವಿಚಾರದಲ್ಲಿ ಕಟ್ಟುನಿಟ್ಟಾಗಿ ನಿಬಂಧನೆಗಳನ್ನು ಪಾಲಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಶುಕ್ರವಾರ ನಿರ್ದೇಶಿಸಿರುವ ಕರ್ನಾಟಕ ಹೈಕೋರ್ಟ್‌ ಈ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದೆ.

ಬೆಂಗಳೂರಿನ ಸರ್ಕಾರೇತರ ಸಂಸ್ಥೆ ವೈಟ್‌ಫೀಲ್ಡ್‌ ರೈಸಿಂಗ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಮತದಾರರ ಪಟ್ಟಿಗೆ ಸೇರ್ಪಡೆ, ವರ್ಗಾವಣೆ ಅಥವಾ ಇನ್ನಾವುದೇ ಮಾರ್ಪಾಡು ಮಾಡುವ ಕುರಿತು ಸಲ್ಲಿಸಿದ ಮನವಿಯನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ವಿಲೇವಾರಿ ಮಾಡುವ ಸಂಬಂಧ ಕಾರ್ಯ ವಿಧಾನ ರೂಪಿಸುವ ಕುರಿತು ನಿರ್ದೇಶನ ನೀಡುವಂತೆ ಕೋರಿ 2018ರಲ್ಲಿ ವೈಟ್‌ಫೀಲ್ಡ್‌ ರೈಸಿಂಗ್ ಮನವಿ ಸಲ್ಲಿಸಿತ್ತು.

ಇಸಿಐ ಪ್ರತಿನಿಧಿಸಿದ್ದ ವಕೀಲ ಎಸ್‌ ಆರ್‌ ದೊಡವಾಡ ಅವರು “ಮತದಾರರ ಪಟ್ಟಿಯಲ್ಲಿ ಮತದಾರರ ಸೇರ್ಪಡೆ ಮತ್ತು ತೆಗೆದು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾಲಮಿತಿಯಲ್ಲಿ ಅಹವಾಲನ್ನು ಪರಿಶೀಲಿಸುವ ಸಂಬಂಧ ಅಗತ್ಯ ಸೂಚನೆಗಳನ್ನು ನೀಡಲಾಗಿದೆ” ಎಂದರು.

ಅರ್ಜಿಯ ವಿಷಯದ ಕುರಿತು ಅಹವಾಲಿನ ಬಗ್ಗೆ ಸಂಚಾರಿ (ರೋವಿಂಗ್) ವಿಚಾರಣೆಯನ್ನು ಇಡೀ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪೀಠವು ಹೇಳಿತು. ಇಸಿಐ ವಾದವನ್ನು ಒಪ್ಪಿದ ನ್ಯಾಯಾಲಯವು ಅಹವಾಲು ಹೊಂದಿರುವವರು ಪ್ರಜಾಪ್ರತಿನಿಧಿ ಕಾಯಿದೆ ಮತ್ತು ಮತದಾರರ ನೋಂದಣಿ ಕಾಯಿದೆ ಮತ್ತು ನಿಯಮಗಳ ಅಡಿ ಪರಿಹಾರ ಕೋರಬಹುದಾಗಿದೆ. ಕಾನೂನಿನ ಅಡಿ ಅಧಿಕಾರಿಗಳು ಮನವಿಯನ್ನು ಪರಿಗಣಿಸದಿದ್ದರೆ ಅವರು ಹೈಕೋರ್ಟ್‌ ಕದ ತಟ್ಟಬಹುದಾಗಿದೆ ಎಂದು ಹೇಳಿತು.

ಅರ್ಜಿದಾರರ ಪರ ವಕೀಲ ಜೋಸೆಫ್‌ ಆಂಟನಿ ಅವರು “ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳ ಸಂಖ್ಯೆಯನ್ನು ನಿರ್ಧರಿಸಲು ಯಾವುದೇ ವಿಧಾನವನ್ನು ಅಳವಡಿಸಲಾಗಿಲ್ಲ. ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ನಿರ್ದಿಷ್ಟ ಕಾಲಮಿತಿಯಲ್ಲಿ ಅಹವಾಲನ್ನು ಪರಿಹರಿಸಲಾಗಿಲ್ಲ. ಮತದಾರರ ಪಟ್ಟಿಯಲ್ಲಿ ಮಾರ್ಪಾಡು ಕುರಿತು ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಸ್ವೀಕೃತಿ ಪ್ರತಿ ನೀಡಲು ನಿರ್ದೇಶಿಸಬೇಕು” ಎಂದು ಕೋರಿದ್ದರು.