ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸುತ್ತಿರುವ 49 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸಿರುವುದಕ್ಕೆ ಸಂಬಂಧಿಸಿದಂತೆ ತಂಡ ರಚಿಸಿ ಪರಿಶೀಲಿಸಿ, ವರದಿ ಸಲ್ಲಿಸುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಕರೆತರುವುದು ಹಾಗೂ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯ ಕೊರತೆ ಕುರಿತಂತೆ ಮಾಧ್ಯಮಗಳ ವರದಿಗಳ ಆಧಾರದಲ್ಲಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ನಡೆಸಿತು.
49 ಶಾಲೆಗಳಲ್ಲಿನ ಶೌಚಾಲಯಗಳು ಮತ್ತು ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯ, ಶಾಲೆಯ ಆವರಣದಲ್ಲಿನ ಸ್ವಚ್ಛತೆ ಮತ್ತು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಆರೋಗ್ಯಕರ ವಾತಾವರಣಕ್ಕೆ ಅಗತ್ಯವಿರುವ ಇತರ ಮೂಲ ಸೌಕರ್ಯ ಸಂಬಂಧ ಸಮಿತಿ ಪರಿಶೀಲನೆ ನಡೆಸಬೇಕು. ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಯು ತಕ್ಷಣ 3 ಮಂದಿ ಸದಸ್ಯರ ಸಮಿತಿ ರಚನೆ ಮಾಡಬೇಕು. ಅದರಲ್ಲಿ ಒಬ್ಬರು ಕಾರ್ಯದರ್ಶಿ ಶ್ರೇಣಿಯ ನ್ಯಾಯಾಂಗ ಅಧಿಕಾರಿ, ಇಬ್ಬರು ಕಾನೂನು ವಿದ್ಯಾರ್ಥಿಗಳು ಇರಬೇಕು. ಅವರು ಕಾನೂನು ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿರಬೇಕು. ಬೆಂಗಳೂರಿನ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಾನೂನು ವಿದ್ಯಾರ್ಥಿಗಳನ್ನು ಸಮಿತಿ ಒಳಗೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿತು.
ಈ ಸಮಿತಿಯು ಬಿಬಿಎಂಪಿಗೆ ತಿಳಿಯದಂತೆ 49 ಶಾಲೆಗಳಿಗೆ ಭೇಟಿ ನೀಡಬೇಕು. ಮುಂದಿನ ಒಂದು ತಿಂಗಳಲ್ಲಿ ಇಡೀ ಪ್ರಕ್ರಿಯೆ ಪೂರ್ಣಗೊಳಿಸಿ, ವಿವರವಾದ ದಾಖಲೆಗಳೊಂದಿಗೆ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.