CM Siddaramaiah, CBI, Karnataka HC 
ಸುದ್ದಿಗಳು

ಮುಡಾ: ತನಿಖಾ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸ್‌ಗೆ ಹೈಕೋರ್ಟ್‌ ನಿರ್ದೇಶನ; ಸರ್ಕಾರ, ಸಿಬಿಐ, ಸಿಎಂಗೆ ನೋಟಿಸ್‌

“ಈಗ ಲೋಕಾಯುಕ್ತರು ತನಿಖೆ ನಡೆಸುತ್ತಿದ್ದಾರೆ. ಇಂಥ ಪ್ರಕರಣದಲ್ಲಿ ತನಿಖಾ ಪ್ರಕ್ರಿಯೆಯು ಸಾರ್ವಜನಿಕ ನಂಬಿಕೆ ಉಳಿಯುವಂತೆ ನಡೆಯಬೇಕಿದೆ. ಹೀಗಾಗಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು” ಎಂದು ಕೋರಿದ ಹಿರಿಯ ವಕೀಲ ಕೆ ಜಿ ರಾಘವನ್.‌

Bar & Bench

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್‌ 25ರವರೆಗೆ ಏನೆಲ್ಲಾ ತನಿಖೆ ನಡೆಸಲಾಗಿದೆ ಎಂಬುದರ ವಸ್ತುಸ್ಥಿತಿ ವರದಿ ಸಲ್ಲಿಸಲು ಮೈಸೂರು ಲೋಕಾಯುಕ್ತ ಪೊಲೀಸ್‌ಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕೆ ಜಿ ರಾಘವನ್‌ ಅವರು “ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂಬುದು ನಮ್ಮ ಕೋರಿಕೆಯಾಗಿದೆ” ಎಂದರು.

ಅದಕ್ಕೆ ಪೀಠವು “ಲೋಕಾಯುಕ್ತರು ತನಿಖೆ ನಡೆಸುತ್ತಿಲ್ಲವೇ?” ಎಂದರು.

ಆಗ ರಾಘವನ್‌ “ಈಗ ಲೋಕಾಯುಕ್ತರು ತನಿಖೆ ನಡೆಸುತ್ತಿದ್ದಾರೆ. ಇಂಥ ಪ್ರಕರಣದಲ್ಲಿ ತನಿಖಾ ಪ್ರಕ್ರಿಯೆಯು ಸಾರ್ವಜನಿಕ ನಂಬಿಕೆ ಉಳಿಯುಂತೆ ನಡೆಯಬೇಕಿದೆ. ಹೀಗಾಗಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು” ಎಂದು ಕೋರಿದರು.

ಆಗ ಪೀಠವು ಹೆಚ್ಚುವರಿ ರಾಜ್ಯ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರ ಪ್ರತಿಕ್ರಿಯೆ ಕೇಳಿತು. ಜಗದೀಶ್‌ “ಲೋಕಾಯುಕ್ತ ಪೊಲೀಸರು (ಸಿಎಂ ಸಿದ್ದರಾಮಯ್ಯ, ಪತ್ನಿ, ಭಾವಮೈದುನ ಇತರರ ವಿರುದ್ಧ) ಎಫ್‌ಐಆರ್‌ ದಾಖಲಿಸುತ್ತಿದ್ದಂತೆಯೇ ಈ ಅರ್ಜಿ ಸಲ್ಲಿಕೆ ಮಾಡಲಾಗಿದೆ” ಎಂದರು.

ಇದನ್ನು ಆಲಿಸಿದ ಪೀಠವು “ಕೇಂದ್ರ ಗೃಹ ಇಲಾಖೆಯ ಪರವಾಗಿ ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌, ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಮತ್ತು ಮೈಸೂರಿನ ವಿಜಯನಗರ ಪೊಲೀಸ್‌ ಠಾಣಾಧಿಕಾರಿಯ ಪರವಾಗಿ ಜಗದೀಶ್‌, ಸಿಬಿಐ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌, ಲೋಕಾಯುಕ್ತರ ಪರವಾಗಿ ಬಿ ಬಿ ಪಾಟೀಲ್‌ಗೆ ನೋಟಿಸ್‌ ಪಡೆಯಲಿದ್ದಾರೆ. ಸಿದ್ದರಾಮಯ್ಯ, ಅವರ ಪತ್ನಿ ಬಿ ಎಂ ಪಾರ್ವತಿ, ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಮತ್ತು ಜಮೀನು ಮಾಲೀಕ ಜೆ ದೇವರಾಜುಗೆ ತುರ್ತು ನೋಟಿಸ್‌ ಜಾರಿ ಮಾಡಲಾಗಿದೆ” ಎಂದು ಆದೇಶಿಸಿತು.

ಅಲ್ಲದೇ, ನವೆಂಬರ್‌ 25ರವರೆಗೆ ಲೋಕಾಯುಕ್ತ ಪೊಲೀಸರು ಪ್ರಕರಣದಲ್ಲಿ ಇದುವರೆಗೆ ತನಿಖೆ ನಡೆಸಿರುವುದರ ಸಂಬಂಧ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಆದೇಶಿಸಿ, ವಿಚಾರಣೆಯನ್ನು ನವೆಂಬರ್‌ 26ಕ್ಕೆ ಮುಂದೂಡಿತು.

ರಾಜ್ಯಪಾಲರು ತನಿಖೆಗೆ ಅನುಮತಿಸಿರುವ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾ ಮಾಡುವ ಸಂದರ್ಭದಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಹಲವು ವಿಚಾರಗಳನ್ನು ಅನಾವರಣಗೊಳಿಸಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನಾಮನಿರ್ದೇಶಿಸುವ ಹಾಲಿ ನ್ಯಾಯಮೂರ್ತಿಯೊಬ್ಬರನ್ನು ಪ್ರಕರಣದ ಮೇಲ್ವಿಚಾರಣೆ ವಹಿಸಲು ಆದೇಶಿಸಬೇಕು. ಇಲ್ಲವೇ, ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ ಮೇಲ್ವಿಚಾರಣೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.